ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ಆನಂದ್ ಸಿ.ಲಕ್ಕೂರು ಅವರನ್ನು ಸರಿಯಾಗಿ ಗ್ರಹಿಸದೆ ಚಾರಿತ್ರ್ಯಹರಣ ಮಾಡುವುದು ತರವಲ್ಲದ ನಡವಳಿಕೆ ಎಂದು ಅಂಬೇಡ್ಕರ್ ವಾದಿ ಚಿಂತಕ ಡಾ.ಹುಲಿಕುಂಟೆ ಮೂರ್ತಿ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಬಿಕೆ-ಕೆಬಿ ಬಳಗ ಮತ್ತು ಲಂಕೇಶ್ ವಿಚಾರ ವೇದಿಕೆಯಿಂದ ಆಯೋಜಿಸಿದ್ದ ಲಕ್ಕೂರು ಆನಂದ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನಂದ ಅವರು ಮಾಡಿರುವ ಸಾಹಿತ್ಯ ಕೃಷಿಯನ್ನು ನಾಡಿಗೆ ವಿಸ್ತೃತವಾಗಿ ಪರಿಚಯಿಸಬೇಕಾದ ಅಗತ್ಯ ಇದೆ ಎಂದರು.
ಯುವ ಬರಹಗಾರ ಆನಂದ್ ತನ್ನ ಕಿರಿಯ ವಯಸ್ಸಿಗೆ ಸಾಹಿತ್ಯ, ಸಂಶೋಧನೆ, ಕಾವ್ಯದಲ್ಲಿ ಮಾಡಿರುವ ಕೆಲಸವನ್ನು ದಶಕಗಳ ಕಾಲ ಬದುಕಿರುವ ಕವಿ, ಸಾಹಿತಿಗಳು ಮಾಡಿ ತೋರಿಸಲಿ. ಆನಂದ್ ಬದುಕಿನ ದಾರಿ ಸ್ಪಷ್ಟವಾಗಿತ್ತು. ಅದನ್ನು ಗ್ರಹಿಸದೇ ಚಾರಿತ್ರ್ಯಹರಣ ಮಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಆನಂದ್‌ರಂಥ ಪ್ರತಿಭೆ ಯನ್ನು ಬಿತ್ತಿ ಬೆಳೆಯುವುದು ನಮಗೆ ಗೊತ್ತಿದೆ ಎಂದರು.ಪ್ರಾಧ್ಯಾಪಕ ವಿ.ಎಲ್.ನರಸಿಂಹಮೂರ್ತಿ ಮಾತನಾಡಿ, ಪ್ರತಿಯೊಬ್ಬ ಬರಹಗಾರ ನಾರ್ಸಿಸ್ಟ್ ಆಗಿರುತ್ತಾನೆ. ಆನಂದ್ ಕೂಡಾ ಮಹತ್ವಾಕಾಂಕ್ಷಿಯಾಗಿದ್ದ. ಶೋಷಿತ ಸಾಮಾಜಿಕ ಹಿನ್ನೆಲೆಯ ಆನಂದ್‌ಗೆ ನನ್ನ ಬರಹಗಳನ್ನು ಗುರುತಿಸಬೇಕು. ಮೆಚ್ಚುಗೆ ಸೂಚಿಸಬೇಕು ಅನ್ನುವ ಮನೋಧೋರಣೆ ಇತ್ತು. ಇದು ತಪ್ಪಲ್ಲ. ಆತ ಮಾಡಿರುವ ಕಾವ್ಯ, ಸಂಶೋಧನೆ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ ಎಂದರು.
ರಂಗಕರ್ಮಿ ಕೆ.ಪಿ.ಲಕ್ಷ್ಮಣ್ ಮಾತನಾಡಿ, ಹಳ್ಳಿಯ ಜಾತಿ ವ್ಯವಸ್ಥೆ ತನಗೆ ಅನುಗುಣವಾಗಿ ಜಾತಿಗಳು ಹೀಗೆ ವರ್ತಿಸಬೇಕು, ನಡೆದುಕೊಳ್ಳಬೇಕು ಎಂದು ನಿರ್ದೇಶಿಸುತ್ತದೆ. ಈ ಜಾತಿಯ ವಿಕಾರ ಈಗ ಕನ್ನಡ ಸಾಂಸ್ಕೃತಿಕ ಲೋಕಕ್ಕೂ ವಿಸ್ತರಿಸಿದೆ. ಆನಂದ್‌ರ ಸಾವಿನ ಸುತ್ತ ವ್ಯಕ್ತವಾದ ಅಭಿಪ್ರಾಯಗಳು ಇದನ್ನು ಹೇಳುತ್ತಿವೆ. ಇದು ಬದಲಾಗಬೇಕು ಎಂದು ಹೇಳಿದರು.ಕನ್ನಡ ಪುಸ್ತಕ ಪ್ರಾಕಾರದ ಸದಸ್ಯ ಡಾ.ರವಿಕುಮಾರ್ ನೀಹಾ ಮಾತನಾಡಿ, ಆನಂದ್ ಅದ್ಭುತ ಜೀವನ ಪ್ರೀತಿಯ ಗೆಳೆಯ. ಸದಾ ಕಾವ್ಯ, ಕಾದಂಬರಿಗಳು ಕುರಿತು ಮಾತ ನಾಡುತ್ತಿದ್ದ. ಮಾತಂಗ ಮಹಿಳಾ ಸಂಸ್ಕೃತಿ ಕುರಿತು ಅದ್ಭುತ ಪುಸ್ತಕ ಬರೆದಿದ್ದ. ಹೊಸ ಸಂಶೋಧನಾ ಮಾದರಿಗಳನ್ನು ಹುಡುಕುತ್ತಿದ್ದ. ಆತನ ಸಂಶೋಧನೆಯ ದಾರಿ, ಅಧ್ಯಯನ ಮಾಡುವ ಪ್ರಕ್ರಿಯೆ ವಿಭಿನ್ನವಾಗಿತ್ತು ಎಂದರು.
ತುಮಕೂರು ವಿವಿ ಪ್ರಾಧ್ಯಾಪಕ ಡಾ.ಬಗ್ಗನಡು ನಾಗಭೂಷಣ ಮಾತನಾಡಿ, ಆನಂದ್ ಚಿಕ್ಕವಯಸ್ಸಿನಲ್ಲೇ ತೀವ್ರತರವಾಗಿ ಬದುಕಿದ ಬರಹಗಾರ. ಆನಂದ್‌ರ ಬದುಕಿನ ಮೌಲ್ಯಮಾಪನ ಮಾಡುವವರು ನ್ಯಾಯಾಧೀಶರ ಸ್ಥಾನದಲ್ಲೇನೂ ಇರುವುದಿಲ್ಲ. ಮುಂದೊಂದು ದಿನ ಅವರೂ ಮೌಲ್ಯಮಾಪನಕ್ಕೆ ಒಳಗಾಗುತ್ತಾರೆ. ವ್ಯಕ್ತಿಯ ಸಾವನ್ನು ಬಯಸುವವರು ಮತ್ತು ಸಂಭ್ರಮಿಸುವವರಿಗಿಂತ ಸಾವನ್ನು ಅಗೌರವಿಸುವವರು ಅಪಾಯಕಾರಿಗಳು ಎಂದರು.ಕೋಡಿಹಳ್ಳಿ ಸಂತೋಷ್ ಪ್ರಸ್ತಾವಿಕವಾಗಿ ಮಾತನಾಡಿದರು. ಜೆ.ಯಾದವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಜಡೇಕುಂಟೆ ಮಂಜುನಾಥ್, ಹೊಳೆಯಪ್ಪ ಸಾಕ್ಯ ಇದ್ದರು.