ಕನ್ನಡದ ಹಿರಿಯ ಕವಿ ಪುತಿನಗೆ ಕವಿ-ಕಾವ್ಯ ನಮನ

KannadaprabhaNewsNetwork | Published : Aug 1, 2024 12:26 AM

ಸಾರಾಂಶ

ಕ್ಷಣ ಉದ್ಯೋಗ ಸಂಪಾದನೆಗಾದರೆ ಸದಭಿರುಚಿಯ ಸಾಹಿತ್ಯದ ಓದು ವ್ಯಕ್ತಿತ್ವ ವಿಕಸನ ಮತ್ತು ಮನಸ್ಸಿನ ಆಹ್ಲಾದತೆಗೆ ಸಹಾಯಕಾರಿ. ಸಾಹಿತ್ಯದ ಓದಿನಿಂದ ನಾವು ಮರೆತ ಸಣ್ಣ ಸಣ್ಣ ಮೌಲ್ಯಗಳು ಜಾಗೃತಗೊಳ್ಳುತ್ತವೆ. ಭಾವನಾತ್ಮಕ ಸ್ಪಂದನೆ ಮೂಡಿ ವೃತ್ತಿಯಲ್ಲಿ ಮಾನವೀಯ ಪ್ರಜ್ಞೆ ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿಜಯವಿಠ್ಠಲ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದಿಂದ ಕನ್ನಡದ ಹಿರಿಯ ಕವಿ ಪು.ತಿ.ನರಸಿಂಹಚಾರ್ ಅವರ ಕವಿ ಕಾವ್ಯ ನಮನ ಕಾರ್ಯಕ್ರಮವನ್ನು ಕವಿ, ಸಾಹಿತಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಚೊಕ್ಕಾಡಿಯವರು ಪು.ತಿ.ನ.ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ಶಿಕ್ಷಣ ಉದ್ಯೋಗ ಸಂಪಾದನೆಗಾದರೆ ಸದಭಿರುಚಿಯ ಸಾಹಿತ್ಯದ ಓದು ವ್ಯಕ್ತಿತ್ವ ವಿಕಸನ ಮತ್ತು ಮನಸ್ಸಿನ ಆಹ್ಲಾದತೆಗೆ ಸಹಾಯಕಾರಿ. ಸಾಹಿತ್ಯದ ಓದಿನಿಂದ ನಾವು ಮರೆತ ಸಣ್ಣ ಸಣ್ಣ ಮೌಲ್ಯಗಳು ಜಾಗೃತಗೊಳ್ಳುತ್ತವೆ. ಭಾವನಾತ್ಮಕ ಸ್ಪಂದನೆ ಮೂಡಿ ವೃತ್ತಿಯಲ್ಲಿ ಮಾನವೀಯ ಪ್ರಜ್ಞೆ ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕನ್ನಡದ ಖ್ಯಾತ ವಿದ್ವಾಂಸ, ಸಾಹಿತಿ, ಗೀತ ನಾಟಕಕಾರರು ಮತ್ತು ಜಿಜ್ಞಾಸೆಯ ಕವಿ ಪು.ತಿ.ನ.ಅವರ ಹೆಸರು ಕನ್ನಡ ಸಾಹಿತ್ಯಲೋಕದಲ್ಲಿ ಚಿರಸ್ಮರಣೀಯವಾದದ್ದು. ಪು.ತಿ.ನ ಅವರು ತಮ್ಮ ಕಾವ್ಯ ರಚನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟ ಕವಿ. ಅವರ ಸಾಹಿತ್ಯ ತತ್ವ ಮತ್ತು ಕಾವ್ಯಮೀಮಾಂಸೆಗಳನ್ನು ಒಳಗೊಂಡಂತಹ ಅಪರೂಪದ ರಚನೆ. ಬಾಹ್ಯದ ಆಚರಣೆಗಿಂತ ಮಾನವೀಯ ಅಂತಃಕರಣಗಳನ್ನು ಅವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಸಂಪ್ರದಾಯ ಬದ್ಧತೆಯಿಂದ ವೈಚಾರಿಕ ಸಂಗತಿಗಳನ್ನು ತಿಳಿಸುವ ಶಕ್ತಿ ಇವರ ಕಾವ್ಯದ್ದಾಗಿತ್ತು. ಅಪೂರ್ವ ಸಂಗೀತದ ಜ್ಞಾನದೊಂದಿಗೆ ಸಾಹಿತ್ಯವನ್ನು ರಚಿಸುತ್ತಿದ್ದರು. ಇವರ ಕಾವ್ಯಗಳಲ್ಲಿ ತತ್ವಾನ್ವೇಷಣೆ, ಜ್ಞಾನಾನ್ವೇಷಣೆ, ಮುಂತಾದ ಆದರ್ಶಗಳನ್ನು ಕಾಣಬಹುದು ಎಂದು ಅವರು ತಿಳಿಸಿದರು.

ಪು.ತಿ.ನ.ಅವರು ಹೊರಗಿನ ಕತ್ತಲಲ್ಲಿ ಒಳಗಿನ ಬೆಳಕನ್ನು ಕಾಣುವ ದರ್ಶನ ಕವಿ. ಕಾವ್ಯದಿಂದ ಹೃದಯದ ಶುದ್ಧಿ, ಹಾಸ್ಯಪ್ರಜ್ಞೆ, ವ್ಯಕ್ತಿಯ ಮನೋಧರ್ಮವು ವಿಕಾಸವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ನಿರಂತರವಾದ ಸಾಹಿತ್ಯ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ವಿಜಯವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್ ವಹಿಸಿದ್ದರು.

ವಿಜಯ ವಿಠಲ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ಸಾಹಿತ್ಯ ರಚನೆ, ಸಾಹಿತ್ಯದ ಓದು ಮನುಷ್ಯನ ಸಂಕುಚಿತ ಮನೋಭಾವವನ್ನು ಹೋಗಲಾಡಿಸಿ ಮನೋವಿಕಾಸವನ್ನು ಉಂಟು ಮಾಡುತ್ತದೆ. ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಸಾಹಿತ್ಯದ ಓದು ನಮ್ಮ ಹವ್ಯಾಸವಾಗಿರಬೇಕು. ಕವಿಗಳು ತಮ್ಮ ಕೃತಿಗಳ ಮೂಲಕ ಸದಾ ಸ್ಮರಣೀಯರಾಗಿರುತ್ತಾರೆ. ಕವಿಗಳ ಜೀವನ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.

ಸಂಚಾಲಕರಾದ ಎಸ್.ಎಸ್. ರಮೇಶ್ ಮತ್ತು ಎನ್. ಅನಿತಾ, ಸಂಸ್ಕೃತ ಉಪನ್ಯಾಸಕ ಕೆ.ವಿ. ಸಂಜಯ ಇದ್ದರು.

ಅತಿಥಿಗಳನ್ನು ಪ್ರಣತಿ ಅಯ್ಯರ್ ಪರಿಚಯಿಸಿದರು. ಭುವನ, ಪ್ರಣತಿ ಮತ್ತು ತಂಡ ಪು.ತಿ.ನ ಅವರ ಗೀತಗಾಯನವನ್ನು ಇಂಪಾಗಿ ಹಾಡಿದರು. ಬಿ.ಎಂ. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿಶ್ರುತ್ ಎಸ್. ಪ್ರಸಾದ್ ಸ್ವಾಗತಿಸಿದರು, ಹೇಮಲತಾ ವಂದಿಸಿದರು.

Share this article