ಅಜಿತ್ ಕುಮಾರ್
ಕವಿತೆಯ ರೂಪದಲ್ಲಿ ಕನ್ನಡ ಜಾಗೃತಿ ಜತೆಗೆ ಪರಿಸರ ಪ್ರಜ್ಞೆಯನ್ನೂ ಬೆಳೆಸುವ ವಿಶಿಷ್ಟ ಪ್ರಯತ್ನವೊಂದು 87ನೇ ಸಾಹಿತ್ಯ ಸಮ್ಮೇಳನದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ವೃತ್ತಿಯಲ್ಲಿ ಬಿಎಂಟಿಸಿ ಮೆಕ್ಯಾನಿಕ್ ಆಗಿರುವ ಸಂತೋಷ್ ಮಡೇನೂರು ಅವರು ಈ ಮಹತ್ಕಾರ್ಯದ ರೂವಾರಿ. ಸ್ವಂತ ಹಣ ಹಾಗೂ ಗೆಳೆಯರ ಸಹಾಯಹಸ್ತದೊಂದಿಗೆ ಸಂತೋಷ್ ಅವರು ಸ್ವರಚಿತ ಕವನ ಓದಿದವರಿಗೆ ಉಚಿತವಾಗಿ ಔಷಧೀ ಸಸ್ಯಗಳನ್ನು ವಿತರಿಸುತ್ತಿದ್ದಾರೆ.
1 ಸಾವಿರ ಗಿಡ ವಿತರಿಸುವ ಗುರಿ:ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಯಲ್ಲಿ ಸ್ಟಾಲ್ ಇಟ್ಟುಕೊಂಡಿರುವ ಸಂತೋಷ್ ಅವರು ಮೂರು ದಿನಗಳಲ್ಲಿ1 ಸಾವಿರಕ್ಕೂ ಹೆಚ್ಚು ಗಿಡ ವಿತರಿಸುವ ಗುರಿ ಇಟ್ಟುಕೊಂಡಿದ್ದಾರೆ. ಆರು ಸಾವಿರ ಕೊಟ್ಟು ಮಳಿಗೆ ಹಾಕಿರುವ ಇವರು, ಮೊದಲ ದಿನ ಸ್ವರಚಿತ ಕವನ ಓದಿದ 291 ಮಂದಿಗೆ ಉಚಿತ ಗಿಡ ವಿತರಿಸಿದ್ದಾರೆ. ಐಐಎಚ್‌ಆರ್‌ನಿಂದ ಗಿಡ ಖರೀದಿಸಿ ಇಲ್ಲಿ ವಿತರಿಸುತ್ತಿದ್ದಾರೆ.
ಕನ್ನಡ ಪ್ರಜ್ಞೆ ಮತ್ತು ಕವಿತೆಗಳ ಕುರಿತ ಆಸಕ್ತಿ ಸಂತೋಷ್ ಅವರಿಗೆ ಹುಟ್ಟಿದ್ದು ಹೋರಾಟದಿಂದ. ಆದರೆ, ಪರಿಸರ ಪ್ರಜ್ಞೆ ಬಾಲ್ಯದಲ್ಲಿ ನಡೆದ ಘಟನೆಯೊಂದು ಬಿತ್ತಿದ ಬೀಜದ ಫಲ. ಇದೀಗ ಅದು ಹೆಮ್ಮರವಾಗಿ ಬೆಳೆಯುತ್ತಿದೆ, ಇತರಲ್ಲೂ ಕನ್ನಡ, ಕವಿತೆ ಮತ್ತು ಪರಿಸರ ಕುರಿತು ಕಾಳಜಿ ಬೆಳೆಸುವಂತೆ ಮಾಡುತ್ತಿದೆ.
ಇನ್ನು ಸಂತೋಷ್ ಅವರ ಮೂಲ ತಿಪಟೂರು. ಅಲ್ಲಿ ಕಟ್ಟಿಸಿದ್ದ ರಾಮಣ್ಣನ ಕಟ್ಟೆಯನ್ನು ಕಾರಣಾಂತರಗಳಿಂದ ಒಡೆದು ಹಾಕಿದಾಗ ಪಕ್ಷಿಗಳು ನೆಲೆ ಕಳೆದುಕೊಂಡದನ್ನು ನೋಡಿ ಇವರು ತೀವ್ರ ನೊಂದಿದ್ದರಂತೆ. ಆಗಲೇ ಇವರಲ್ಲಿ ಪರಿಸರಕ್ಕಾಗಿ ಏನಾದರೂ ಮಾಡಬೇಕು, ಮರ-ಗಿಡ ಬೆಳೆಸಬೇಕೆಂಬ ತುಡಿತ ಹುಟ್ಟಿಕೊಂಡಿತ್ತು. ಅದರ ಭಾಗವಾಗಿಯೇ ಆರಂಭವಾದ ಪರಿಸರ ಕಾಳಜಿ ಈಗ "ಸಸ್ಯ ಯಜ್ಞ''''ದ ರೂಪ ಪಡೆದಿದೆ.
ಬೆಂಗಳೂರು ಸೇರಿ ನಾಡಿನೆಲ್ಲೆಡೆ ಗಿಡಗಳನ್ನು ವಿತರಿಸುವ ಕಾರ್ಯ ಶುರುವಿಟ್ಟುಕೊಂಡರು.
ಈವರೆಗೆ ಇವರ ತಂಡ 20 ಸಾವಿರಕ್ಕೂ ಹೆಚ್ಚು ಗಿಡಗಳನ್ನು ವಿತರಿಸಿದೆ. ಸುಮಾರು 10 ವರ್ಷಗಳಿಂದ ಕನ್ನಡ ಕಾಳಜಿ, ಕವಿತೆ ಹಾಗೂ ಪರಿಸರ ಈ ಮೂರನ್ನೂ ಜೋಡಿಸಿಕೊಂಡು ಸಸ್ಯಯಜ್ಞ ಎಂಬ ಮಹಾಯಜ್ಞ ಮಾಡುತ್ತಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ಉಚಿತವಾಗಿ ಗಿಡ ವಿತರಿಸುವ ಜತೆಗೆ ಕವಿತೆ ಮತ್ತು ಕನ್ನಡ ಭಾಷೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ.
ಕನ್ನಡಪರ ಕಾಳಜಿಗಾಗಿ ಅರಳು ಸಾಹಿತ್ಯ ಪ್ರಶಸ್ತಿ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿರುವ ಇವರು ಅದರಿಂದ ಬಂದ ಹಣವನ್ನು ಗಿಡವಿತರಣೆಗೇ ಮೀಸಲಿಡುತ್ತಾರೆ.