ಅಂಗನವಾಡಿ ಕೇಂದ್ರಕ್ಕೆ ವಿಷ ಜಂತುಗಳ ಕಾಟ

KannadaprabhaNewsNetwork |  
Published : Aug 05, 2025, 11:47 PM IST
ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದ 1ನೇ ಅಂಗನವಾಡಿ ಕೇಂದ್ರಕ್ಕೆ ಹೋಗಲು ಕೆಸರು ಗದ್ದೆಯಂತಿರುವ ರಸ್ತೆ ಹಾಗೂ ಕೇಂದ್ರದ ಪಕ್ಕದಲ್ಲೇ ಹರಿದಾಡುತ್ತಿರುವ ಹಾವು. | Kannada Prabha

ಸಾರಾಂಶ

ಮಕ್ಕಳ ಕಲಿಕೆಗೆ ಬುನಾದಿಯಾದ ಅಂಗನವಾಡಿ ಕೇಂದ್ರಕ್ಕೆ ವಿಷ ಜಂತುಗಳ ಕಾಟ ಹೆಚ್ಚಾಗಿದೆ.

ಪಾಲಕರಲ್ಲಿ ಆತಂಕ, ಮಕ್ಕಳ ಕಳಿಸಲು ಹಿಂದೇಟು

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಮಕ್ಕಳ ಕಲಿಕೆಗೆ ಬುನಾದಿಯಾದ ಅಂಗನವಾಡಿ ಕೇಂದ್ರಕ್ಕೆ ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಸುತ್ತಲ್ಲೂ ದುರ್ನಾತ ಬೀರುವ ವಾತಾವರಣ, ಮಳೆ ಬಂದಾಗ ಕೆಸರು ಗದ್ದೆಯಂತಿರುವ ರಸ್ತೆಯಲ್ಲೇ ಮಕ್ಕಳು ನಡೆದು ಬರುವ ಪರಿಸ್ಥಿತಿ ಇದೆ.

ತಾಲೂಕಿನ ಮಾಗಳ ಗ್ರಾಮದ 1ನೇ ಅಂಗನವಾಡಿ ಕೇಂದ್ರ ದುಸ್ಥಿತಿ ಇದು. ಮಂಗಳವಾರ ಬೆಳಗ್ಗೆ ಸ್ವ ಲ್ಪ ಪ್ರಮಾಣದ ಮಳೆಯಾಗಿದೆ. ಇದರಿಂದ ಅಂಗನವಾಡಿ ಕೇಂದ್ರಕ್ಕೆ ಬರುವ ಸಿಸಿ ರಸ್ತೆ ಕೆಸರು ಗದ್ದೆಯಂತಿದೆ. ಅಂಗನವಾಡಿ ಪಕ್ಕದಲ್ಲೇ ದೊಡ್ಡ ಪ್ರಮಾಣದ ತಿಪ್ಪೆಗುಂಡಿಗಳ ದುರ್ನಾತ ಬೀರುತ್ತಿದೆ. ಇಂತಹ ವಾತವರಣದಲ್ಲಿ ಮಕ್ಕಳು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಕೇಂದ್ರದ ಪಕ್ಕದಲ್ಲೇ ಸಾಕಷ್ಟು ಮುಳ್ಳಿನ ಗಿಡಗಂಟೆಗಳು ಬೆಳೆದಿವೆ. ಇದರಿಂದ ವಿಷ ಜಂತುಗಳ ಕಾಟವೂ ಹೆಚ್ಚಾಗಿದೆ. ಬೆಳಗ್ಗೆ ದೊಡ್ಡ ಹಾವು ಅಂಗನವಾಡಿಯ ಶೌಚಾಲಯದ ಒಳಗೆ ಹೋಗಿದೆ. ಇದರಿಂದ ಭಯಗೊಂಡ ಅಂಗನವಾಡಿ ಕಾರ್ಯಕರ್ತೆ ಕವಸರ ಗೀತಾ ಮಕ್ಕಳನ್ನು ರಕ್ಷಣೆ ಮಾಡಲು ಮುಂದಾಗಿದ್ದರು. ಮಕ್ಕಳ ಮಲಗಿದ್ದರು ಅವರನ್ನು ಎಬ್ಬಿಸಿ ಹೊರಗೆ ತಂದರು.

ಅಂಗನವಾಡಿ ಕೇಂದ್ರದ ಸುತ್ತಮುತ್ತ ತಿಪ್ಪೆಗುಂಡಿಗಳು ಇವೆ. ಅಕ್ಕಪಕ್ಕದಲ್ಲಿ ದೊಡ್ಡ ಗುಂಡಿಗಳಿದ್ದು ಮಳೆ ನೀರು ತುಂಬಿಕೊಂಡು ದುರ್ನಾತ ಬೀರುತ್ತಿವೆ. ಇದರಿಂದ ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಆದರಿಂದ ನಾವು ನಮ್ಮ ಮಕ್ಕಳನ್ನು ಕೇಂದ್ರ ಕಳಿಸುವುದಿಲ್ಲ, ಕೇಂದ್ರವನ್ನು ಬೇರೆಡೆ ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಚಿಕ್ಕ ಮಕ್ಕಳನ್ನು ಅಂಗನವಾಡಿ ಸಹಾಯಕಿ ಕೇಂದ್ರಕ್ಕೆ ಕರೆ ತರಲು ನಿತ್ಯ ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಕೇಂದ್ರಕ್ಕೆ ಹೋಗಬೇಕಾದರೇ ಕೆಸರು ಗದ್ದೆಯಂತಿರುವ ರಸ್ತೆಯನ್ನೇ ದಾಟಿ ಹೋಗಬೇಕಿದೆ. ಪ್ರತಿ ಬಾರಿ ಸ್ಥಳೀಯ ಗ್ರಾಪಂ ಜಾಲಿ ಗಿಡಗಳನ್ನು ತೆರವು ಮಾಡುತ್ತಿವೆ. ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ, ಈ ಕೂಡಲೇ ಕೇಂದ್ರವನ್ನು ಗ್ರಾಮದ ಜೈನ ಬಸೀದಿ ಪಕ್ಕದಲ್ಲಿರುವ ಗ್ರಾಪಂ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥ ಸುಭಾಷಪ್ಪ ಒತ್ತಾಯಿಸಿದ್ದಾರೆ.

ಕಳೆದ 4-5 ವರ್ಷಗಳಿಂದ ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಕಟ್ಟಡ ನೀಡಬೇಕೆಂದು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದೇನೆ. ಆದರೆ ಈವರೆಗೂ ಮನವಿಗೆ ಸ್ಪಂದಿಸಿಲ್ಲ. ಬೆಳಗ್ಗೆ ಕೇಂದ್ರದ ಸುತ್ತ ನಾಗರ ಹಾವು ಓಡಾಡುತ್ತಿತ್ತು. ಇದರಿಂದ ಭಯಗೊಂಡು ಕೇಂದ್ರದಲ್ಲಿ ಮಲಗಿದ್ದ ಮಕ್ಕಳನ್ನು ಎಬ್ಬಿಸಿ ಹೊರ ತಂದು ಅವರ ಮನೆಗೆ ಕಳಿಸಿದ್ದೇವೆಂದು ಕೇಂದ್ರದ ಕಾರ್ಯಕರ್ತೆ ಗೀತಾ ಕವಸರ ಹೇಳಿದರು.

ಗ್ರಾಮದ ಬಸೀದಿ ಪಕ್ಕದಲ್ಲಿ ಗ್ರಾಪಂಗೆ ಸೇರಿದ ಕಟ್ಟಡ ಇದೆ. ಅದು ಹಾಳಾಗಿತ್ತು, ಈಗಾಗಲೇ ಅದನ್ನು ದುರಸ್ತಿ ಮಾಡಲಾಗಿದೆ. ಅಲ್ಲಿ ಗ್ರಾಮದ 1ನೇ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುತ್ತೇವೆಂದು ಗ್ರಾಪಂ ಪಿಡಿಒ ಮಂಜುನಾಥ ರಡ್ಡೇರ್‌ ತಿಳಿಸಿದರು.

PREV

Recommended Stories

ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ
ಮೋದಿ ರಸ್ತೆ ಮಾರ್ಗದಲ್ಲಿ ಜನರಿಗೆ ದರ್ಶನ, ಮೆಟ್ರೋದಲ್ಲಿ ಸಂಚಾರ