ಸಂಪ್ರದಾಯ ಮುರಿದ ಕಲ್ಲಹಳ್ಳಿ ಗೊಲ್ಲರಹಟ್ಟಿ ಜನತೆ

KannadaprabhaNewsNetwork |  
Published : Aug 05, 2025, 11:46 PM IST
ಗೊಲ್ಲರಹಟ್ಟಿಯೊಳಗೆ ದಲಿತ ಯುವಕನ ಪ್ರವೇಶ ಮಾಡುವಂತೆ ಆಹ್ವಾನ ನೀಡಿದ ಕೂಡ್ಲಿಗಿ ತಾಲೂಕಿನ ಟಿ.ಕಲ್ಲಹಳ್ಳಿ ಗೊಲ್ಲರಹಟ್ಟಿ ಜನತೆ ರಾಜ್ಯಕ್ಕೆ ಮಾದರಿಯಾಗಿದ್ದಾರೆ. | Kannada Prabha

ಸಾರಾಂಶ

ತಲಾ ತಲಾಂತರಗಳಿಂದ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ, ಕಟ್ಟುಪಾಡು, ಅಸ್ಪೃಶ್ಯತೆ ಹೋಗಲಾಡಿಸಲು ಕಲ್ಲಹಳ್ಳಿ ಗೊಲ್ಲರಹಟ್ಟಿಯ ಜನತೆ ಈಗ ದಲಿತರನ್ನು ಹಟ್ಟಿಯೊಳಗೆ ಸ್ವಾಗತಿಸಿ ಪ್ರವೇಶ ಮಾಡಿಸಿಕೊಳ್ಳುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ದಲಿತ ಯುವಕನನ್ನು ಹಟ್ಟಿಯೊಳಗೆ ಆಹ್ವಾನಿಸಿ ಮಾದರಿ । ಗೊಲ್ಲರಹಟ್ಟಿಗಳ ಜನತೆಗೆ ದಿಕ್ಸೂಚಿಭೀಮಣ್ಣ ಗಜಾಪುರ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ತಲಾ ತಲಾಂತರಗಳಿಂದ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ, ಕಟ್ಟುಪಾಡು, ಅಸ್ಪೃಶ್ಯತೆ ಹೋಗಲಾಡಿಸಲು ಕಲ್ಲಹಳ್ಳಿ ಗೊಲ್ಲರಹಟ್ಟಿಯ ಜನತೆ ಈಗ ದಲಿತರನ್ನು ಹಟ್ಟಿಯೊಳಗೆ ಸ್ವಾಗತಿಸಿ ಪ್ರವೇಶ ಮಾಡಿಸಿಕೊಳ್ಳುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಇಂತಹ ಆಧುನಿಕ ಕಾಲದಲ್ಲಿಯೂ ರಾಜ್ಯದ ಗೊಲ್ಲರಹಟ್ಟಿಯೊಳಗೆ ಈಗಲೂ ದಲಿತರು (ಮಾದಿಗರು) ಪ್ರವೇಶಿಸುವಂತಿಲ್ಲ. 130 ಮನೆಗಳಿರುವ ಕೂಡ್ಲಿಗಿ ತಾಲೂಕಿನ ಟಿ.ಕಲ್ಲಹಳ್ಳಿ ಗೊಲ್ಲರಹಟ್ಟಿ ನಡೆ ಸೌಹಾರ್ದತೆಯ ಕಡೆ ಗಟ್ಟಿ ಹೆಜ್ಜೆ ಇಟ್ಟಿರುವುದು ರಾಜ್ಯದ ಇತರ ಗೊಲ್ಲರಹಟ್ಟಿಗಳ ಜನತೆಗೆ ದಿಕ್ಸೂಚಿಯಾಗಿದೆ. ಗೊಲ್ಲರಹಟ್ಟಿಯೊಳಗೆ ದಲಿತರು ಬರಬೇಕು ಎಂದು ಸ್ವತಃ ಕಾಡುಗೊಲ್ಲ ಸಮುದಾಯದ ವಿದ್ಯಾವಂತರು, ಅಧಿಕಾರಿಗಳು ದಲಿತ ಸಮುದಾಯದ ಗ್ರಾಮ ಸಹಾಯಕನನ್ನು ಹಟ್ಟಿಯೊಳಗೆ ಕರೆದೊಯ್ದಿದ್ದಾರೆ. ಅಲ್ಲಿನ ದೇವಸ್ಥಾನಕ್ಕೂ ಕರೆದೊಯ್ದು ಸ್ವಾಗತಿಸಿ ಪ್ರಜ್ಞಾಪೂಜ್ಞಕವಾಗಿ ನಾವು ಹಟ್ಟಿಗಳಲ್ಲಿ ಅಸ್ಪೃಶ್ಯತೆ ಆಚರಿಸುತ್ತಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಲ್ಲಿಯ ವಿದ್ಯಾವಂತರು ನಮ್ಮ ಗೊಲ್ಲರಹಟ್ಟಿಯಲ್ಲಿ ಆಚರಿಸುವಂಥ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವ ಉದ್ದೇಶದಿಂದ ಊರಿನ ಅನಕ್ಷರಸ್ಥರಿಗೆ ಈ ಬಗ್ಗೆ ತಿಳುವಳಿಕೆ ಹೇಳಿದ್ದಾರೆ. ಇದರ ಫಲವಾಗಿ ಈಗ ದಲಿತರನ್ನು ಹಟ್ಟಿಯೊಳಗೆ ಬಿಟ್ಟುಕೊಳ್ಳಲು ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ. ಕಲ್ಲಹಳ್ಳಿಯ ಗೊಲ್ಲರಹಟ್ಟಿಯ ಯುವ ಮುಖಂಡ ಜಿ.ಟಿ. ತಿಪ್ಪೇಸ್ವಾಮಿ, ಯಾದವ ಸಮಾಜದ ಹಿರಿಯರಾದ ಸಿರಿಯಪ್ಪ, ಸೋಮಶೇಖರಪ್ಪ, ಕೋರಿ ಈರಣ್ಣ, ಅಂಗಡಿ ಪೆನ್ನಪ್ಪ, ಯಜಮಾನ ಈರಣ್ಣ ಮುಂತಾದವರು ಹಟ್ಟಿಗಳ ಪರಿವರ್ತನೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಎಲ್ಲಾ ಗೊಲ್ಲರಹಟ್ಟಿಗಳು ಇದೇ ದಾರಿಯಲ್ಲಿ ಗಟ್ಟಿಹೆಜ್ಜೆಗಳನ್ನು ಇಡುವುದರ ಮೂಲಕ ಸ್ವಾಭಿಮಾನ, ಸಮಾನತೆಯ ಸಮಾಜ ನಿರ್ಮಿಸಲು ಪಣ ತೊಡಬೇಕಾಗಿದೆ.ಟಿ.ಕಲ್ಲಹಳ್ಳಿ ಗೊಲ್ಲರಹಟ್ಟಿಯ ಜನತೆ ಇಡೀ ರಾಜ್ಯವೇ ಗೌರವಿಸುವ ಕಾರ್ಯ ಮಾಡಿದ್ದಾರೆ. ಇದು ಸ್ವಾಗತಾರ್ಹ. ಪರಿವರ್ತನೆ ಆಗುವ ಕಾಲ ಬಂದಿದೆ. ಕರ್ನಾಟಕ ಜಾನಪದ ಅಕಾಡೆಮಿಯಿಂದ ಮುಟ್ಟು ಆಚರಣೆ, ದಲಿತರು ಹಟ್ಟಿಯೊಳಗೆ ಪ್ರವೇಶ ನಿಷೇಧ ಇವುಗಳ ವಿರುದ್ಧ ರಾಜ್ಯಾದ್ಯಂತ ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು. ಮುಖ್ಯಮಂತ್ರಿಗಳು ಈಗಾಗಲೇ ಈ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಜಾರಿಗೆ ಮುಂದಾಗುತ್ತೇವೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ತಿಳಿಸಿದ್ದಾರೆ.

ನಮ್ಮಲ್ಲಿ ಬದಲಾವಣೆಯ ಗಾಳಿ ಬೀಸಿದೆ. ನಮ್ಮ ಗೊಲ್ಲರು ಎಲ್ಲರೊಂದಿಗೂ ಸೌಹಾರ್ದ ಬದುಕು ನಡೆಸಬೇಕೆಂಬ ಹಾದಿಯಲ್ಲಿ ದಲಿತ ಯುವಕನನ್ನು ನಮ್ಮ ಹಟ್ಟಿಯೊಳಗೆ ಸ್ವಾಗತಿಸಿದ್ದೇವೆ,. ಬೇರೆ ಸಮುದಾಯಗಳಿಗೆ ತೊಂದರೆಯಾಗುವಂತಹ ಆಚರಣೆ ಬಿಡಬೇಕಾಗಿದೆ, ಮುಟ್ಟು, ಹೆರಿಗೆ ಸಮಯದಲ್ಲಿದ್ದ ಹೆಣ್ಣುಮಕ್ಕಳನ್ನು ಊರಿಂದ ಹೊರಗಿಡುವ ಪದ್ಧತಿಗೆ ದಿಕ್ಕಾರ ಹೇಳಿ ನಮ್ಮ ಹಟ್ಟಿಯ ಮಹಿಳೆಯರನ್ನು ಗೌರವಿಸುತ್ತೇವೆ ಎಂದು ಗೊಲ್ಲರಹಟ್ಟಿಯ ನಿವಾಸಿ ಜಿ.ಟಿ. ತಿಪ್ಪೇಸ್ವಾಮಿ ಹೇಳಿದ್ದಾರೆ.

PREV

Recommended Stories

ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ
ಮೋದಿ ರಸ್ತೆ ಮಾರ್ಗದಲ್ಲಿ ಜನರಿಗೆ ದರ್ಶನ, ಮೆಟ್ರೋದಲ್ಲಿ ಸಂಚಾರ