ಯಲ್ಲಾಪುರ ಬಳಿ ಪೊಲೀಸರ ಮೇಲೆ ಹಲ್ಲೆ, ಅಪಹರಣಕಾರರ ಕಾಲಿಗೆ ಗುಂಡು

KannadaprabhaNewsNetwork |  
Published : Jan 12, 2025, 01:15 AM IST
ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ ಅವರು ಪ್ರಕರಣದ ಮಾಹಿತಿ ನೀಡಿದರು. | Kannada Prabha

ಸಾರಾಂಶ

ಮುಂಡಗೋಡಿನ ಎನ್‌ಎಂಡಿ ಗ್ರೂಪ್ ಮಾಲೀಕ ಜಮೀರ್ ಅಹ್ಮದ್ ದರ್ಗಾವಾಲೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆದಿದ್ದು, ಪ್ರತಿಯಾಗಿ ಪೊಲೀಸರು ಕೂಡ ಆರೋಪಿಗಳ ಮೇಲೆ ಗುಂಡು ಹಾರಿಸಿದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ಮತ್ತೆ ಐವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಡಗೋಡ/ಯಲ್ಲಾಪುರ: ಪಟ್ಟಣದ ಎನ್‌ಎಂಡಿ ಗ್ರೂಪ್ ಮಾಲೀಕ ಜಮೀರ್ ಅಹ್ಮದ್ ದರ್ಗಾವಾಲೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆದಿದ್ದು, ಪ್ರತಿಯಾಗಿ ಪೊಲೀಸರು ಕೂಡ ಆರೋಪಿಗಳ ಮೇಲೆ ಗುಂಡು ಹಾರಿಸಿದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ಮತ್ತೆ ಐವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ಜಿಲ್ಲೆ ನಿವಾಸಿ ಅಜಯ ಫಕ್ಕೀರಪ್ಪ ಮಡ್ಲಿ, ಅಲ್ಲಾವುದ್ದೀನ್ ಯಾನೆ ರಹೀಮ್ ಮಹ್ಮದಜಾಫರ್ ಸಾಬ್, ಸಾಗರ ನಾಗರಾಜ ಕಲಾಲ, ಹಸನ ಮೈನುದೀನ್ ಕಿಲ್ಲೆದಾರ ಹಾಗೂ ವಿಜಯಪುರದ ದಾದಾಫೀರ್ ಅಲ್ಲಾಭಕ್ಷ ಬಂಧಿತ ಆರೋಪಿಗಳು.

ಗುರುವಾರ ರಾತ್ರಿ ಮುಂಡಗೋಡ ನಗರದ ಜಮೀರ್ ಅಹ್ಮದ್ ದರ್ಗಾವಾಲೆಯನ್ನು ಅಪಹರಣ ಮಾಡಿ ₹೬೦ ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಅಪಹರಣಕಾರರು, ಕೊನೆಗೆ ₹೧೮ ಲಕ್ಷ ಪಡೆದು ಹುಬ್ಬಳ್ಳಿಯ ಗದಗ ರಿಂಗ್ ರಸ್ತೆಯಲ್ಲಿಯೇ ಜಮೀರ್ ಅಹ್ಮದ್ ದರ್ಗಾವಾಲೆ ಅವರನ್ನು ಬಿಟ್ಟು ಪರಾರಿಯಾಗಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮುಂಡಗೋಡ ಪೊಲೀಸರು ಐವರು ಆರೋಪಿಗಳನ್ನು ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಈ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳಿರುವ ಬಗ್ಗೆ ಮಾಹಿತಿ ಸಿಕ್ಕಿತು. ಆರೋಪಿಗಳ ಬೆನ್ನುಹತ್ತಿದ ಮುಂಡಗೋಡ ಪೊಲೀಸರಿಗೆ, ಆರೋಪಿಗಳು ಕಲಘಟಗಿ-ಯಲ್ಲಾಪುರ ಮಾರ್ಗವಾಗಿ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ಯಲ್ಲಾಪುರ ತಾಲೂಕು ಡೋಗಿನಾಳದಲ್ಲಿ ಆರೋಪಿಗಳನ್ನು ಅಡ್ಡಗಟ್ಟಿ ಶರಣಾಗುವಂತೆ ಪೊಲೀಸರು ತಾಕೀತು ಮಾಡಿದ್ದಾರೆ. ಆದರೆ ದುಷ್ಕರ್ಮಿಗಳು ಪೊಲೀಸರ ಮೇಲೆ ಕಾರದ ಪುಡಿ ಎರಚಿ, ಕಲ್ಲು ಬೀಸಿ, ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು. ಈ ವೇಳೆ ಕೆಲವು ಪೊಲೀಸರು ಗಾಯಗೊಂಡಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹೊಡೆದು ಬೆದರಿಸಿದರು. ಅದಕ್ಕೂ ಬಗ್ಗದೇ ಇದ್ದಾಗ ಆರೋಪಿತರ ಕಾಲಿಗೆ ಗುಂಡು ಹಾರಿಸಿದ್ದಾರೆ. ಕೊನೆಗೆ ಐವರು ಆರೋಪಿತರು ಸಿಕ್ಕಿಬಿದ್ದಿದ್ದಾರೆ. ಘಟನೆಯಲ್ಲಿ ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್‌ಐ ಪರಶುರಾಮ ಮಿರ್ಜಗಿ ಹಾಗೂ ಯಲ್ಲಾಪುರ ಪೊಲೀಸ್ ಸಿಬ್ಬಂದಿ ಶಫಿ ಗಾಯಗೊಂಡಿದ್ದಾರೆ. ಆರೋಪಿಗಳಾದ ಅಜಯ ಫಕ್ಕೀರಪ್ಪ ಮಡ್ಲಿ ಹಾಗೂ ಅಲ್ಲಾವುದ್ದೀನ್ ಯಾನೆ ರಹೀಮ್ ಮಹ್ಮದಜಾಫರ್ ಸಾಬ್ ಅವರ ಕಾಲಿಗೆ ಗುಂಡು ತಗುಲಿರುವುದರಿಂದ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾಲಿಗೆ ಗುಂಡು ತಾಗಿಸಿಕೊಂಡ ಆರೋಪಿತರಿಬ್ಬರೂ ಕೊಲೆ ಆರೋಪಿಗಳಾಗಿದ್ದು, ತಿಂಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದರು.

ಒಟ್ಟು 10 ಜನರ ಬಂಧನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ, ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿ, ಡೌಗಿನಾಳದ ಸ್ಥಳ ವೀಕ್ಷಿಸಿದ ನಂತರ ಯಲ್ಲಾಪುರ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದರು. ಪ್ರಕರಣ ಭೇದಿಸಲು ಇಲಾಖೆಯಿಂದ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಅಪಹರಣಕ್ಕೊಳಗಾದವರ ಪ್ರಾಣಕ್ಕೆ ಅಪಾಯವಾಗದಂತೆ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಈಗಾಗಲೇ ಹತ್ತು ಜನರನ್ನು ಬಂಧಿಸಲಾಗಿದ್ದು, ಇನ್ನುಳಿದ ಇಬ್ಬರು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ, ಡಿವೈಎಸ್‌ಪಿಗಳಾದ ಗಣೇಶ, ಶಿವಾನಂದ, ಸಿಪಿಐಗಳಾದ ರಮೇಶ ಹಾನಾಪುರ, ಜಯಪಾಲ ಪಾಟೀಲ, ಪಿಎಸ್‌ಐ ಬಸವರಾಜ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ