ಎಸ್ಪಿ ಕಚೇರಿ ಬಳಿಯೇ ಪತ್ನಿಗೆ ಚಾಕು ಇರಿದು ಕೊಂದ ಪೇದೆ

KannadaprabhaNewsNetwork |  
Published : Jul 02, 2024, 01:34 AM IST

ಸಾರಾಂಶ

ಕಾನೂನಿನಡಿ ತಪ್ಪಿತಸ್ಥರನ್ನು ಶಿಕ್ಷಿಸಬೇಕಿರುವ ಆರಕ್ಷನೇ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನದ ಎಸ್‌ಪಿ ಕಚೇರಿ ಆವರಣದಲ್ಲಿ ನಡೆದಿದೆ. ಪೊಲೀಸ್‌ ಕಾನ್ಸ್‌ಟೇಬಲ್‌ ಆಗಿರುವ ಲೋಕನಾಥ್‌ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಮಮತಾರಿಗೆ ಚಾಕುನಿಂದ ಇರಿದು ಕೊಲೆ ಮಾಡಿದ್ದಾರೆ. ಇವರಿಬ್ಬರು 17 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರಕ್ಷಕನೇ ಚಾಕುವಿನಿಂದ ಇರಿದು ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ನಗರದ ಆರ್.ಸಿ.ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಮಮತಾ ಕೊಲೆಯಾದ ಗೃಹಿಣಿಯಾಗಿದ್ದು, ಪೊಲೀಸ್ ಕಾನ್ಸ್‌ಟೇಬಲ್ ಲೋಕನಾಥ್ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರೀತಿಸಿ ಮದುವೆ: ಕಳೆದ ಹದಿನೇಳು ವರ್ಷಗಳ ಹಿಂದೆ ಹಾಸನ ನಗರದ ಹೊರವಲಯದ ಚನ್ನಪಟ್ಟಣ ಬಡಾವಣೆಯ ಮಮತಾ ಹಾಗೂ ಕೆ.ಆರ್.ಪುರಂ ನಿವಾಸಿ ಲೋಕನಾಥ್‌ ಪರಸ್ಪರ ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹ ಆಗಿದ್ದರು. ದಂಪತಿಗೆ ಮುದ್ದಾದ ಎರಡು ಗಂಡು ಮಕ್ಕಳಿದ್ದಾರೆ. ಕೆಲವು ವರ್ಷಗಳ ನಂತರ ಕಾನ್ಸ್‌ಟೇಬಲ್ ಲೋಕನಾಥ್ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದ. ಇದೇ ವಿಚಾರಕ್ಕೆ ಪತ್ನಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಲ್ಲದೇ ದೈಹಿಕವಾಗಿ ಹಲ್ಲೆ ಸಹ ನಡೆಸಿದ್ದ. ಪತಿಯ ಕಿರುಕುಳದಿಂದ ಮಮತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಲ್ಲದೇ ತಮ್ಮ ಪೋಷಕರ ಬಳಿ ಪತಿಯ ನೀಚ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಳು.

ಸ್ಥಳಕ್ಕೆ ಎಸ್ಪಿ ಭೇಟಿ: ಕಳೆದ ಮೂರ್ನಾಲ್ಕು ದಿನಗಳಿಂದ ಪತಿ-ಪತ್ನಿ ನಡುವೆ ಜೋರಾಗಿ ಜಗಳ‌ ನಡೆದಿದ್ದು ಪತಿ ಲೋಕನಾಥ್ ಕಿರುಕುಳದಿಂದ ಬೇಸತ್ತ ಮಮತಾ ಸೋಮವಾರ ಪೊಲೀಸರಿಗೆ ದೂರು ಕೊಡುವುದಾಗಿ ಪತಿಗೆ ಹೇಳಿ ಜಿಲ್ಲಾ ಪೊಲೀಸ್ ಕಚೇರಿ ಆವರಣಕ್ಕೆ ಬಂದಿದ್ದಾಳೆ. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಕಾನ್ಸ್‌ಟೇಬಲ್‌ ಲೋಕನಾಥ್ ಹರಿತವಾದ ಆಯುಧದಿಂದ ಮಮತಾ ಎದೆಯ ಭಾಗಕ್ಕೆ ಬಲವಾಗಿ ಇರಿದಿದ್ದು ಬೆನ್ನಿನಿಂದ ಚಾಕು ಹೊರಗೆ ಬಂದಿದೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಮತಾಳನ್ನು ಸ್ಥಳದಲ್ಲೇ ಇದ್ದ ಪೊಲೀಸರು ಅನತಿ ದೂರದಲ್ಲಿದ್ದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಮತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿ ಲೋಕನಾಥ್ ನನ್ನು ಹಾಸನ ನಗರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆಗೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಮಾಹಿತಿ ಪಡೆದರು.

ಒಟ್ಟಿನಲ್ಲಿ ಪತಿ-ಪತ್ನಿ ನಡುವಿನ ಕಲಹ ತಾರಕಕ್ಕೇರಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದ್ದು, ಏನು ಅರಿಯದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಹಾಡುಹಗಲೇ ಎಸ್ಪಿ ಕಚೇರಿಯಲ್ಲಿ ಆವರಣದಲ್ಲಿ ಮಹಿಳೆಯ ಬರ್ಬರ ಹತ್ಯೆ ನಡೆದಿರುವುದು ಹಾಸನ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಹಾಸನ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ