ದೈನಂದಿನ ತಿಳಿವಳಿಕೆಗೆ ಪತ್ರಿಕೆ ಓದಬೇಕು: ಸ್ಪೀಕರ್‌ ಯು.ಟಿ.ಖಾದರ್‌

KannadaprabhaNewsNetwork |  
Published : Jul 02, 2024, 01:34 AM IST
ತಾರಾನಾಥ ಕಾಮತ್‌ಗೆ ಸನ್ಮಾನ | Kannada Prabha

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ನಡೆಯಿತು. ಈ ಸಂದರ್ಭ ಹಿರಿಯ ಪತ್ರಿಕಾ ವಿತರಕರಾದ ತಾರಾನಾಥ ಕಾಮತ್‌ ಇವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಬದಲಾದ ಕಾಲಘಟ್ಟದಲ್ಲಿ ಪತ್ರಿಕೆಗಳ ಸ್ವರೂಪ ಬದಲಾಗಿದೆ. ವಿದ್ಯಾರ್ಥಿಗಳು ದೈನಂದಿನ ಆಗುಹೋಗು ತಿಳಿಯಲು ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕೆಗಳು ಜನರ ಧ್ವನಿಯಾಗಿ ಸ್ವಾತಂತ್ರ್ಯ ಪೂರ್ವದಿಂದಲೇ ಕಾರ್ಯ ನಿರ್ವಹಿಸುತ್ತ ಬಂದಿವೆ. ಅಂಬೇಡ್ಕರ್, ಗಾಂಧೀಜಿ ಕೂಡ ಜನರನ್ನು ತಲುಪಲು ಪತ್ರಿಕೆಯನ್ನು ಆರಂಭಿಸಿದ್ದರು. ನಾನು ಚಿಕ್ಕಂದಿನಲ್ಲಿ ಪತ್ರಿಕೆ ಓದುವುದರ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೆ. ಪತ್ರಿಕೆಯನ್ನು ಕಾದು ಕುಳಿತು ಖರೀದಿಸಿ ಓದುವಷ್ಟು ಆಸಕ್ತಿ ನನ್ನಲ್ಲಿತ್ತು. ಭಾಷೆಯ ಬಗ್ಗೆ ಹಿಡಿತ ಹೊಂದಲು ಪತ್ರಿಕೆ ಓದುವುದು ಸಹಕಾರಿ. ಸಮಾಜದಲ್ಲಿ ಶಾಂತಿ ಸಾಮರಸ್ಯ ಕಾಪಾಡುವಲ್ಲಿ ಪತ್ರಕರ್ತರ ಕೊಡುಗೆ ಹೆಚ್ಚಿದೆ. ಪತ್ರಕರ್ತರು ವಾಸ್ತವವನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದರು.

ಹಿರಿಯ ಹಾಸ್ಯ ಸಾಹಿತಿ, ನಿವೃತ್ತ ಉಪನ್ಯಾಸಕಿ ಡಾ. ಭುವನೇಶ್ವರಿ ಹೆಗಡೆ ಅವರು ‘ಮಾಧ್ಯಮ ಮತ್ತು ಸಾಮಾಜಿಕ ಜವಾಬ್ದಾರಿ’ ಕುರಿತು ಉಪನ್ಯಾಸ ನೀಡಿದರು.

ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ವಿಷಯವನ್ನು ಉತ್ಪ್ರೇಕ್ಷೆ ಮಾಡಿ ಬರೆಯಬಾರದು. ಪತ್ರಕರ್ತರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ಪತ್ರಕರ್ತರು ಸ್ವಸ್ಥ ಸಮಾಜದ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಪತ್ರಕರ್ತರು ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಒತ್ತಡ ಕಡಿಮೆಯಾಗಿ ಅರೋಗ್ಯ ಸುಸ್ಥಿತಿಯಲ್ಲಿ ಇರುತ್ತದೆ ಎಂದರು.

ಈ ಸಂದರ್ಭ ಹಿರಿಯ ಪತ್ರಿಕಾ ವಿತರಕರಾದ ತಾರಾನಾಥ ಕಾಮತ್‌ ಇವರನ್ನು ಸನ್ಮಾನಿಸಲಾಯಿತು.

ಛಾಯಾಗ್ರಾಹಕ ಸತೀಶ್‌ ಇರಾ ಪ್ರಾರ್ಥಿಸಿದರು. ವಿಜಯ್‌ ಕೋಟ್ಯಾನ್‌ ಪಡು ನಿರೂಪಿಸಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ವಾರ್ತಾ ಸಾರ್ವಜನಿಕ ಇಲಾಖೆ ಸಹಾಯಕ ಖಾದರ್ ಶಾ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ