ಪೊಲೀಸ್ ಪೇದೆ ಹುದ್ದೆಗಾಗಿ ನಡೆಯುತ್ತಿರುವ ಪರೀಕ್ಷೆಯ ಪೂರ್ವಸಿದ್ಧತಾ ತರಬೇತಿ ಕಾರ್ಯಾಗಾರವನ್ನು ಫೆ.10ರಿಂದ ಸತತ 3 ದಿನಗಳ ಕಾಲ ಆಯೋಜಿಸಲಾಗಿದೆ.
ಶಿಕಾರಿಪುರ: ಪೊಲೀಸ್ ಪೇದೆ ಹುದ್ದೆಗಾಗಿ ನಡೆಯುತ್ತಿರುವ ಪರೀಕ್ಷೆಯ ಪೂರ್ವಸಿದ್ಧತಾ ತರಬೇತಿ ಕಾರ್ಯಾಗಾರವನ್ನು ಫೆ.10ರಿಂದ ಸತತ 3 ದಿನಗಳ ಕಾಲ ಆಯೋಜಿಸಲಾಗಿದೆ. ಎನ್ಎಸ್‌ಯುಐ ವತಿಯಿಂದ ಉಚಿತವಾಗಿ ಹಮ್ಮಿಕೊಂಡಿರುವ ಪರೀಕ್ಷಾರ್ಥಿಗಳು ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆಯುವಂತೆ ಸಂಘಟನೆ ಅಧ್ಯಕ್ಷ ಶಿವು ಹುಲ್ಮಾರ್ ಮನವಿ ಮಾಡಿದರು.
ಶುಕ್ರವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್ಎಸ್‌ಯುಐ ವಿದ್ಯಾರ್ಥಿ ಸಂಘಟನೆಯಾಗಿದೆ. ಸಮಸ್ತ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಎನ್ಎಸ್‌ಯುಐ ಶಿಕ್ಷಣ, ಸಂಘಟನೆ, ಹೋರಾಟ ಪ್ರಮುಖ ಆದ್ಯತೆವಾಗಿಸಿಕೊಂಡಿದೆ ಎಂದರು.
ವಿದ್ಯಾರ್ಥಿಗಳ ಶಿಕ್ಷಣ ಉದ್ಯೋಗಕ್ಕಾಗಿ ಈಗಾಗಲೇ ಹಲವು ಹೋರಾಟ, ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಸತತ 3 ಬಾರಿಗೆ ಪೊಲೀಸ್ ಪೇದೆ ಹುದ್ದೆಗೆ ತರಬೇತಿ ಆಯೋಜಿಸಲಾಗಿದೆ. ಧಾರವಾಡ, ಬೆಂಗಳೂರು ಸೇರಿದಂತೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ನುರಿತ ವಿಷಯ ಪರಿಣಿತರಿಂದ ಪಟ್ಟಣದ ಶಿವಮೊಗ್ಗ ವೃತ್ತದ ಸಮೀಪದ ಕಿರಣ್ ಟಾಕೀಸ್ ಹಿಂಭಾಗದ ಮರುಳಸಿದ್ದೇಶ್ವರ ಐಟಿಐ ಕಾಲೇಜಿನಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ನಿತ್ಯ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ನಡೆಯಲಿರುವ ಕಾರ್ಯಾಗಾರದಲ್ಲಿ ಅಭ್ಯರ್ಥಿಗಳಿಗೆ ಮಧ್ಯಾಹ್ನ ಊಟ ನೀಡಲಾಗುವುದು. ಈ ದಿಸೆಯಲ್ಲಿ ಕರಪತ್ರವನ್ನು ಎಲ್ಲ ವಸತಿ ನಿಲಯ, ಕಾಲೇಜು, ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚಿನ ಅಭ್ಯರ್ಥಿಗಳಿಗೆ ತಲುಪಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಸದೃಢ ಬದುಕು ಕಟ್ಟಿಕೊಡಲು ಎನ್ಎಸ್ ಯುಐ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಮುಖಂಡ ಅನಿಲ್, ಚಂದ್ರು, ನಗರದ ಪವನ್, ಅಲ್ತಾಫ್, ನಯೀಮ್ ಮತ್ತಿತರರು ಉಪಸ್ಥಿತರಿದ್ದರು.