ಠಾಣೆಗಳೇ ಕಾಂಗ್ರೆಸ್ ಕಚೇರಿ, ಖಾಕಿ ಅಧಿಕಾರಿಗಳೇ ಏಜೆಂಟ್ । ಸರ್ಕಾರ ವಿಸರ್ಜಿಸಿದರೆ ಬಿಜೆಪಿಗೆ ಅಧಿಕಾರ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿಯಾಗಿ ಮಾಡಿಕೊಂಡಿದ್ದು, ಪೊಲೀಸ್ ಅಧಿಕಾರಿಗಳು ಸಹ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಗೆ ತಾಳ ಹಾಕುತ್ತ, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಏಜೆಂಟರಂತೆ ಹಿಂದೂ ವಿರೋಧಿ ನೀತಿಗೆ ತಾಳ ಹಾಕುತ್ತಿರುವ ವರ್ತನೆಯನ್ನು ಪೊಲೀಸ್ ಅಧಿಕಾರಿಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ವಿರುದ್ದವೇ ಜನತೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದರು.ಕಾಂಗ್ರೆಸ್ ಮುಖಂಡರು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಆರೆಸ್ಸೆಸ್‌ನ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬಿಜೆಪಿ ಮುಖಂಡ ಅರುಣಕುಮಾರ ಪುತ್ತಿಲ ವಿರುದ್ಧ ಗಡೀಪಾರು ಆದೇಶ ನೀಡುವಂತೆ ಮಾಡಲಾಗಿದೆ. ಹಿಂದು ಸಂಘಟನೆ ಮುಖಂಡ ಸುಹಾಸ್ ಶೆಟ್ಟಿ ಹತ್ಯೆಯಾದಾಗ ಹತ್ಯೆ ಖಂಡಿಸಿ ಮಾತನಾಡಿದ್ದೇ ಪ್ರಚೋದನಾಕಾರಿ ಎನ್ನುವುದಾದರೆ ಡಿಜೆ ಹಳ್ಳಿ, ಕೆ.ಜೆ. ಹಳ್ಳಿ ಪ್ರಕರಣ ಹಿಂದಿನ ರೂವಾರಿ, ಲೂಟಿಕೋರ ಜಮೀರ್ ಅಹಮ್ಮದ್ ಮತ್ತಿತರ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಬತ್ತಕ್ಕೆ 2369 ರು. ಬೆಂಬಲ ಬೆಲೆ ಘೋಷಣೆ ಮಾಡಿದೆ. ಉಳಿದ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿಪಡಿಸಿದೆ. ರಾಜ್ಯ ಸರ್ಕಾರವೂ ಬೆಳೆದ ಬೆಲೆಗಳಿಗೆ ಬೆಂಬಲ ಬೆಲೆ ನೀಡಬೇಕು. ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯಲು ಸಿದ್ಧವಾಗುತ್ತಿರುವ ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ, ಗೊಬ್ಬರ ಪೂರೈಸುವ ಕೆಲಸ ಮಾಡಲಿ. ಬಿತ್ತನೆ ಬೀಜ, ಗೊಬ್ಬರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಎಚ್.ಪಿ.ವಿಶ್ವಾಸ ಇತರರು ಇದ್ದರು.