ಕನ್ನಡಪ್ರಭ ವಾರ್ತೆ ಮುಂಡಗೋಡ
ನಕಲಿ ದಾಖಲೆ ಸೃಷ್ಟಿಸಿ ಕಾನೂನನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಯೂಟ್ಯೂಬರ್ ಮುಕಳೆಪ್ಪ (ಖ್ವಾಜಾ ಶಿರಹಟ್ಟಿ) ಹಿಂದೂ ಯುವತಿಯನ್ನು ಪುಸಲಾಯಿಸಿ ಬ್ರೇನ್ ವಾಷ್ ಮಾಡುವ ಮೂಲಕ ಮತಾಂತರ ಮಾಡಿ ವ್ಯವಸ್ಥಿತವಾಗಿ ವಿವಾಹ ನೋಂದಣಿ ಮಾಡಿಕೊಂಡ ಬಗ್ಗೆ ಯುವತಿಯ ತಾಯಿ ಪೊಲೀಸ ದೂರು ನೀಡಿ ೩ ದಿನ ಕಳೆದರೂ ಕೂಡ ಪೊಲೀಸರು ಯಾರನ್ನು ಕೂಡ ಬಂಧಿಸಿ ವಿಚಾರಣೆ ಮಾಡುವ ಕೆಲಸ ಮಾಡಿಲ್ಲ. ಇದು ಪೊಲೀಸ್ ಇಲಾಖೆಯ ತಾರತಮ್ಯದ ನೀತಿ ತೋರಿಸುತ್ತದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪಿಸಿದರು.ಗುರುವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ಏನಾದರೂ ಹಿಂದೂ ಹುಡುಗ ಮುಸ್ಲಿಂ ಹುಡುಗಿಯಾಗಿದ್ದರೆ ಪೊಲೀಸ್ ಇಲಾಖೆ ಹೀಗೆಯೇ ನಡೆದುಕೊಳ್ಳುತ್ತಿತ್ತಾ? ಈ ರೀತಿಯ ಪೊಲೀಸ್ ವ್ಯವಸ್ಥೆಗೆ ಧಿಕ್ಕಾರ. ಹಿಂದೂಗಳ ವಿರುದ್ಧ ನಡೆದುಕೊಳ್ಳುವ ಮಾನಸಿಕತೆ ಇವತ್ತು ಪೊಲೀಸ್ ಇಲಾಖೆಯಲ್ಲಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರದ ಒತ್ತಡ ಇದೆ ಎಂದು ಆರೋಪಿಸಿದರು.
ಈ ವಿವಾಹಕ್ಕಾಗಿಯೇ ಒಂದೇ ದಿನ ಬಾಂಡ್ ಖರೀದಿಸಿ ಮಧ್ಯಾಹ್ನ ಬಾಡಿಗೆ ಮನೆ ಒಪ್ಪಂದ ಪತ್ರ, ಸಂಜೆ ವಿವಾಹ ನೋಂದಣಿ ಮಾಡಲಾಗಿದೆ. ಅಗ್ರಿಮೆಂಟ್ ಪತ್ರದಲ್ಲಿರುವ ಮನೆಯಲ್ಲಿ ವಾಸವಿದ್ದರಾ? ನೋಟಿಸ್ ಅಂಟಿಸುವ ಮುನ್ನ ೧ ತಿಂಗಳು ಹಾಗೂ ನಂತರ ೧ ತಿಂಗಳು ವಾಸಿಸಿರಬೇಕೆಂಬ ನಿಯಮವಿದೆ. ಆದರೆ ಇದಾವುದು ಪಾಲನೆಯಾಗಿಲ್ಲ. ಹಲವಾರು ಲೋಪದೋಷ ಅತ್ಯಂತ ಮೋಸದಿಂದ ಕಾನೂನು ಗಾಳಿಗೆ ತೂರಿ ಹಿಂದು ಯುವತಿಯನ್ನು ಪುಸಲಾಯಿಸಿ ವಿವಾಹ ಮಾಡಿದ್ದನ್ನು ಖಂಡಿಸುತ್ತೇನೆ. ಯಾವುದೇ ಪರಿಸ್ಥಿತಿಯಲ್ಲಿ ಅವಳನ್ನು ನಾವು ಬಿಟ್ಟುಕೊಡುವುದಿಲ್ಲ. ಕಾನೂನನ್ನು ಪಾಲಿಸದೆ ಇರುವ ಮದುವೆ ಮದುವೆಯೇ ಅಲ್ಲ. ಇದು ಮೋಸದ ಆಟ, ಇದನ್ನು ರದ್ದು ಮಾಡಬೇಕು. ನಿಯಮ ಬಾಹಿರವಾಗಿ ಕಾನೂನು ಗಾಳಿಗೆ ತೂರಿ ಮದುವೆ ನೋಂದಣಿ ಮಾಡಿದ ಉಪನೋಂದಣಾಧಿಕಾರಿ ಸಿಬ್ಬಂದಿ ಹಾಗೂ ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರ ಮೇಲೆ, ಮನೆ ಬಾಡಿಗೆ ನೀಡಿದವರು ಹಾಗೂ ಒಪ್ಪಂದ ಪತ್ರ ಬರೆದವರ ವಿರುದ್ಧ ಕೂಡ ಕಾನೂನು ಕ್ರಮವಾಗಬೇಕು. ಸಾಕ್ಷಿದಾರರನ್ನು ಬಂಧಿಸಬೇಕು. ೧೯೫೪ ಮದುವೆ ನಿಯಮದ ಪ್ರಕಾರ ಮದುವೆ ಸಂದರ್ಭದಲ್ಲಿ ಇದ್ದವರು ಮಾತ್ರ ಸಾಕ್ಷಿಯಾಗಬೇಕು. ಆದರೆ ಆ ಸ್ಥಳದಲ್ಲಿ ಇಲ್ಲದವರೆಲ್ಲ ಸಾಕ್ಷಿಯಾಗಿರುವುದಕ್ಕೆ ನಮ್ಮ ಬಳಿ ದಾಖಲೆ ಇವೆ ಎಂದರು.ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಹಳಿಯಾಳ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗಳು ಸಂಪೂರ್ಣ ಭ್ರಷ್ಟವಾಗಿವೆ. ಅನೈತಿಕತೆ, ಅವ್ಯವಹಾರ ಬೇಕಾಬಿಟ್ಟಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇಲ್ಲಿ ಏನು ಬೇಕಾದರೂ ಭಷ್ಟಾಚಾರ ನಡೆಯುತ್ತವೆ. ಈ ಮೂರು ಉಪ ನೋಂದಣಾಧಿಕಾರಿ ಕಚೇರಿಗಳ ೫ ವರ್ಷದ ನೋಂದಣಿ ಪರಿಶೀಲಿಸಿ ಎಷ್ಟೆಷ್ಟು ಅವ್ಯವಹಾರವಾಗಿದೆ ಎಂಬುದನ್ನು ಬಹಿರಂಗಗೊಳಿಸಿ ಈ ಮೂರು ಕೇಂದ್ರಗಳ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮನೆಗೆ ಕಳುಹಿಸುವ ಮೂಲಕ ನೋಂದಣಾಧಿಕಾರಿ ಕಚೇರಿಯ ಪಾವಿತ್ರ್ಯತೆ ಬದ್ಧತೆ ಮತ್ತು ಶಿಸ್ತನ್ನು ಉಳಿಸಬೇಕಿದೆ ಎಂದು ಒತ್ತಾಯಿಸಿದರು.ಈ ಸಂದರ್ಭ ಮುಕಳೆಪ್ಪನೊಂದಿಗೆ ವಿವಾಹವಾದ ಯುವತಿಯ ತಾಯಿ ಶಿವಕ್ಕ ಜಾಲಿಹಾಳ ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರಿದ್ದರು.