ಹಾವೇರಿ: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸರು ಹದ್ದಿನ ಕಣ್ಣು ಹೆಸರಿನಡಿ "ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ " ಜಾರಿಗೆ ತಂದಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಿ, ಎನ್‌ಐಸಿ ಇ-ಚಲನ್ ವ್ಯವಸ್ಥೆ ಮೂಲಕ ಇನ್ನು ಮುಂದೆ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.
ಆಪ್ಟಿಕಲ್ ಫೈಬರ್ ಮೂಲಕ ಕ್ಯಾಮೆರಾಗಳನ್ನು ಜಿಲ್ಲಾ ಪೊಲೀಸ್ ಕಚೇರಿಯ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಕ್ಕೆ ಸಂಪರ್ಕಿಸಲಾಗಿದ್ದು, ನಗರ ಸಂಚಾರದ ಮೇಲೆ 24×7 ನಿಗಾ ವಹಿಸಲಾಗುತ್ತದೆ. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು, ಸೀಟ್ ಬೆಲ್ಟ್ ಬಳಸದೇ ಚಾಲನೆ, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುವುದು ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಸೇರಿದಂತೆ ಪ್ರಮುಖ ಉಲ್ಲಂಘನೆಗಳನ್ನು ವ್ಯವಸ್ಥೆ ಸ್ವಯಂಚಾಲಿತವಾಗಿ ಗುರುತಿಸಲಿದೆ ಎಂದು ಹೇಳಿದರು.
ಕ್ಯಾಮೆರಾದಲ್ಲಿ ದಾಖಲಾಗುವ ಪ್ರತಿಯೊಂದು ಉಲ್ಲಂಘನೆಯನ್ನು ಪೊಲೀಸ್ ಸಿಬ್ಬಂದಿ ಪರಿಶೀಲಿಸಿದ ಬಳಿಕವೇ ಎನ್‌ಐಸಿ ಇ-ಚಲನ್ ಮೂಲಕ ದಂಡ ವಿಧಿಸಲಾಗುತ್ತದೆ. ಇದರಿಂದ ದಂಡ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆ ಕಾಪಾಡಲಾಗುತ್ತದೆ. ದಂಡವನ್ನು ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಅಥವಾ ಎನ್‌ಐಸಿ ಇ-ಚಲನ್ ಆನ್‌ಲೈನ್ ವ್ಯವಸ್ಥೆಯ ಮೂಲಕ ಪಾವತಿಸಬಹುದಾಗಿದೆ. ಆರಂಭದಲ್ಲಿ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ, ಬಳಿಕ ನಿಯಮ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿ ಗಿರಿಮಲ್ಲ ತಲಕಟ್ಟಿ, ಕೆ.ವಿ. ಗುರುಶಾಂತಪ್ಪ, ಸಮೀರ ಮುಲ್ಲಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕರು ಗೂಗಲ್ ಜಿಪಿಎಸ್ ಮ್ಯಾಪ್ ಕ್ಯಾಮರಾ ವಿತ್ ಜಿಐ ಟ್ಯಾಗ್ಡ್ ಆ್ಯಪ್‌ನಲ್ಲಿ ಫೋಟೋ ತೆಗೆದು 8277984094 ವಾಟ್ಸ್‌ಆ್ಯಪ್ ಸಂಖ್ಯೆಗೆ ಫೋಟೊ ಕಳುಹಿಸಿ ಮಾಹಿತಿ ನೀಡಬಹುದು. ಪರಿಶೀಲನೆಯ ಬಳಿಕ ಉಲ್ಲಂಘನೆ ದೃಢಪಟ್ಟರೆ ಸಂಬಂಧಿತ ವಾಹನದ ವಿರುದ್ಧ ಇ-ಚಲನ್ ಮೂಲಕ ದಂಡ ವಿಧಿಸಲಾಗುವುದು ಎಂದು ಎಸ್ಪಿ ಯಶೋದಾ ವಂಟಗೋಡಿ ತಿಳಿಸಿದರು.