- ಕಳೆದ ಸಾಲಿನಲ್ಲಿ ಹುತಾತ್ಮರಾದ ರಾಷ್ಟ್ರದ 189, ರಾಜ್ಯದ 16 ಪೊಲೀಸ್ ಸಿಬ್ಬಂದಿ ಪಟ್ಟಿ ವಾಚನ - ಮೂರು ಬಾರಿ ಕುಶಾಲು ತೋಪು ಹಾರಿಸಿ, ಪೊಲೀಸ್ ಬ್ಯಾಂಡ್‍ನೊಂದಿಗೆ ಗೌರವ ಸಲ್ಲಿಸಿ, ಮೌನಾಚರಣೆ - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಮಾಜದಲ್ಲಿ ಕಾನೂನು ಶಾಂತಿ- ಸುವ್ಯವಸ್ಥೆ ಕಾಪಾಡುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಪೊಲೀಸರ ಕಾರ್ಯದಕ್ಷತೆ, ಪ್ರಾಮಾಣಿಕತೆ, ಕಾಯಕನಿಷ್ಠೆ, ಕರ್ತವ್ಯಪ್ರಜ್ಞೆ, ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆ ಎಲ್ಲವೂ ಸ್ಮರಣೀಯವಾದುದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು. ನಗರದ ಡಿ.ಎ.ಆರ್. ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ, ಹುತಾತ್ಮರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ತಮ್ಮ ಖಾಸಗಿ ಬದುಕನ್ನೂ ಬದಿಗೊತ್ತಿ, ಹಬ್ಬ-ಹರಿದಿನಗಳಲ್ಲೂ ದಿನವಿಡೀ ಕಾರ್ಯನಿರ್ವಹಿಸುವ ಪೊಲೀಸರ ತ್ಯಾಗ ಹಾಗೂ ಕಾರ್ಯ ಸ್ತುತ್ಯಾರ್ಹ ಎಂದರು. ಮಾನವೀಯತೆ ಮರೆತ ಮನುಷ್ಯರಿಂದ ತುಂಬಿದ ಇಂದಿನ ಸಮಾಜದಲ್ಲಿ ಹಣ, ಆಸ್ತಿಗಾಗಿ ಹಪಹಪಿಸುವ ಜನರನ್ನು ಮಟ್ಟ ಹಾಕುವಲ್ಲಿ, ಅವರನ್ನು ನಿಯಂತ್ರಿಸಿ ಸರಿದಾರಿಗೆ ಕೊಂಡೊಯ್ಯುವಲ್ಲಿ, ಅನ್ಯಾಯ, ಅಧರ್ಮ, ಕೊಲೆ- ಸುಲಿಗೆಯಂತಹ ಅಪರಾಧ ಕೃತ್ಯಗಳನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಮಹತ್ವದ್ದಾಗಿದೆ ಎಂದರು. ಬಿಸಿಲು, ಮಳೆ, ಚಳಿ, ಗಾಳಿ, ಹಗಲು-ರಾತ್ರಿ, ಹಬ್ಬ-ಹರಿದಿನ, ಜಾತ್ರೆ, ಹೋರಾಟ, ಪ್ರತಿಭಟನೆ, ಸಾವು–ನೋವು, ಅಹಿತಕರ ಘಟನೆಗಳು ಸಂಭವಿಸಿದಾಗಲೂ ಸದಾ ಕರ್ತವ್ಯ ನಿರ್ವಹಿಸುವ ಪೊಲೀಸರ ಸೇವೆ ಅವಿಸ್ಮರಣಿಯ ಎಂದು ಬಣ್ಣಿಸಿದರು. ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಮಾತನಾಡಿ, ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಸರ್ಕಾರವು ಕೂಡ ಕಾಲಕಾಲಕ್ಕೆ ಅಗತ್ಯ ಸೌಲಭ್ಯವನ್ನು ಒದಗಿಸಿ, ಅವರ ನೆಮ್ಮದಿಯ ಬದುಕಿಗೆ ನೆರವಾಗಬೇಕು ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮಾತನಾಡಿ, ನಿರಂತರವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗುವ ಸಂದರ್ಭ ಬಾರದಿರಲಿ ಎಂದು ಆಶಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ ಮಾತನಾಡಿ, ಕರ್ತವ್ಯನಿರತ ಅಸಂಖ್ಯಾತ ಪೊಲೀಸ್ ಸಿಬ್ಬಂದಿ ನಮ್ಮನ್ನು ಬದುಕಿಸಿ, ತಮ್ಮ ಪ್ರಾಣ ಸಮರ್ಪಣೆ ಮಾಡಿದ್ದಾರೆ. ಇಂತಹ ಹೃದಯವಂತಿಕೆ, ಧೈರ್ಯ, ಎದೆಗಾರಿಕೆ ಪ್ರದರ್ಶಿಸುವ ಪೊಲೀಸ್ ಇಲಾಖೆ ಸಿಬ್ಬಂದಿ ಸದಾ ಅಭಿನಂದನಾರ್ಹರು ಎಂದರು. ಕಾರ್ಯಕ್ರಮದಲ್ಲಿ ಎಲ್ಲರನ್ನು ಸ್ವಾಗತಿಸಿ, ಕಳೆದ ಸಾಲಿನಲ್ಲಿ ಕರ್ತವ್ಯದಲ್ಲಿ ನಿರತರಾಗಿ ಹುತಾತ್ಮರಾದ ರಾಷ್ಟ್ರದ 189 ಮತ್ತು ರಾಜ್ಯದ 16 ಪೊಲೀಸ್ ಸಿಬ್ಬಂದಿ ಪಟ್ಟಿ ವಾಚನ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಹುತಾತ್ಮ ಪೊಲೀಸ್ ಸಿಬ್ಬಂದಿ ಸ್ಮರಣಾರ್ಥ ಪುತ್ಥಳಿಗೆ ಆಗಮಿಸಿದ ಗಣ್ಯರು ಪುಷ್ಪನಮನ ಸಲ್ಲಿಸಿದರು. ಮೂರು ಬಾರಿ ಕುಶಾಲು ತೋಪು ಹಾರಿಸಿ, ಪೊಲೀಸ್ ಬ್ಯಾಂಡ್‍ನೊಂದಿಗೆ ಗೌರವ ಸಲ್ಲಿಸಿ, ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಅನಿಲ್ ಭೂಮರೆಡ್ಡಿ ಸೇರಿದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿ-ಸಿಬ್ಬಂದಿ ಇದ್ದರು. - - - -21ಎಸ್‌ಎಂಜಿಕೆಪಿ01: ಶಿವಮೊಗ್ಗದ ಡಿ.ಎ.ಆರ್.ಕವಾಯತು ಮೈದಾನದಲ್ಲಿ ಶನಿವಾರ ಪೊಲೀಸ್ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿದರು.