ಕಾರವಾರ: ಜಿಲ್ಲೆಯ ಸಿದ್ದಾಪುರ ಮತ್ತು ಜೋಯಿಡಾ ತಾಲೂಕಿನ ರಾಮನಗರದಲ್ಲಿ ಇತ್ತೀಚೆಗೆ ಎರಡು ಪ್ರತ್ಯೇಕ ಒಂಟಿ ಮಹಿಳೆಯರ ಕೊಲೆ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಎಸ್ಪಿ ನಾರಾಯಣ ಎಂ. ಅವರು ಬಹುಮಾನ ಘೋಷಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಅವರು, ಸಿದ್ದಾಪುರದಲ್ಲಿ ಒಂಟಿ ಮಹಿಳೆ ಕೊಲೆ ಪ್ರಕರಣದಲ್ಲಿ ಹಣ ಖರ್ಚು ಮಾಡಿರುವುದು, ರಾಮನಗರದಲ್ಲಿ ನಡೆದ ಮಹಿಳೆ ಕೊಲೆ ಪ್ರಕರಣದಲ್ಲಿ ಸಿಸಿ ಕ್ಯಾಮೆರಾ ಚಲನವಲನದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.ಸಿದ್ದಾಪುರದಲ್ಲಿ ಗೀತಾ ಹುಂಡೇಕರ ಡಿ.23ರಂದು ಎಂಬ ಮಹಿಳೆ ಹಾಗೂ ರಾಮನಗರದಲ್ಲಿ ನ. 17ರಂದು ಶಾಹಿಜಹಾನ ಉಸ್ಮಾನ್ ಶೇಖ್ ಕೊಲೆಯಾಗಿದ್ದು, ಕ್ರಮವಾಗಿ ಅಭಿಜಿತ ಗಣಪತಿ ಮಡಿವಾಳ, ಪ್ರತಿಮಾ ಪ್ರಕಾಶ ಮರಾಠೆ ಆರೋಪಿಗಳಾಗಿದ್ದಾರೆ ಎಂದರು.ಗೀತಾ ಕೊಲೆ: ಗೀತಾ ಕೊಲೆ ಪ್ರಕರಣದ ಬೆನ್ನುಹತ್ತಿದ ಪೊಲೀಸರು, ಈ ಹಿಂದೆ ಸಿದ್ದಾಪುರ, ಶಿರಸಿ ಭಾಗದಲ್ಲಿ ಮನೆಯ ಹೆಂಚನ್ನು ತೆಗೆದು ಕಳ್ಳತನ ನಡೆದ ಪ್ರಕರಣಗಳ ಹುಡುಕಾಟ ಮಾಡಿದ್ದಾರೆ. ಈ ವೇಳೆ ಆರೋಪಿ ಅಭಿಜಿತ ಈ ರೀತಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈತನ ಮೇಲೆ ನಿಗಾ ಇಟ್ಟ ವೇಳೆ ಹಣವಿಲ್ಲದೇ ಇದ್ದ ಅಭಿಜಿತ ಕಾರ್ತಿಕ ಹಬ್ಬವೆಂದು ಊರಿನ ಜನರನ್ನು ಕರೆದು ಊಟ ಹಾಕಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಮತ್ತಷ್ಟು ಸಂಶಯ ಬಲಗೊಂಡು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಅಭಿಜಿತ ಮೇಲೆ ಈಗಾಗಲೇ ಪ್ರಕರಣಗಳಿವೆ. ಗೀತಾ ಒಬ್ಬರೆ ಇರುವುದನ್ನು ಅರಿತಿದ್ದ ಆರೋಪಿ, ಪಿಗ್ಮಿ ಸಂಗ್ರಹಿಸಿದ ಹಣ ಕೂಡಾ ಅವರ ಬಳಿ ಇರುತ್ತದೆ ಎಂದು ತಿಳಿದುಕೊಂಡಿದ್ದ. ಅವರ ಮೇಲೆ ನಿಗಾ ಇಟ್ಟು ಕೊಲೆ ಮಾಡಿದ್ದಾನೆ ಎಂದು ಮಾಹಿತಿ ನೀಡಿದರು.ಶಾಹಿಜಹಾನ ಕೊಲೆ: ಶಾಹಿಜಹಾನ ಎನ್ನುವ ಮಹಿಳೆ ಕೂಡಾ ಒಬ್ಬಂಟಿಯಾಗಿ ಬದುಕುತ್ತಿದ್ದು, ಮೂಲತಃ ರಾಮನಗರದವರಾಗಿದ್ದರು. ಜೋಯಿಡಾ ತಾಲೂಕಿನ ಕ್ಯಾಸಲರಾಕ್- ಕಣಂಗಿನಿ ರಸ್ತೆಯಲ್ಲಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಬಿದ್ದಿದ್ದ ಇವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಆರಂಭಿಸಿದ್ದರು. ಆದರೆ ಆಕೆ ಕೊನೆಯುಸಿರೆಳೆದಿದ್ದು, ಸಾಯುವ ಮೊದಲು ರಾಮನಗರದವಳು ಎಂದಷ್ಟೇ ಹೇಳಿದ್ದರು. ಇದನ್ನೇ ಆಧರಿಸಿ ಪೊಲೀಸರು ಆಕೆಯ ಫೋಟೊ ಇಟ್ಟುಕೊಂಡು ಹುಡುಕಾಟ ನಡೆಸಿದಾಗ ಆಕೆಯ ಪುತ್ರಿ ತಮ್ಮ ತಾಯಿಯೆಂದು ಪೊಲೀಸರಿಗೆ ತಿಳಿಸಿದ್ದಾರೆ.
ಇದೇ ವೇಳೆ ಶಾಹಿಜಹಾನ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಮಹಿಳೆಯೊಂದಿಗೆ ಸುತ್ತಾಟ ಮಾಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅಲ್ಲಿಗೆ ತೆರಳಿ ಅಂಗಡಿಗಳಲ್ಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಪ್ರತಿಮಾ ಮರಾಠೆ ಜತೆಯಿರುವುದು ತಿಳಿದು ಅನುಮಾನಗೊಂಡು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದ ಪ್ರತಿಮಾಳನ್ನು ಆಸ್ಪತ್ರೆಗೆ ದಾಖಲಿಸಿದಾಗ ಪ್ರತಿಮಾಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವುದು, ವಿಥ್‌ಡ್ರಾ ಆಗಿರುವ ಸಂದೇಶ ಆಕೆಯ ಮೊಬೈಲ್‌ನಲ್ಲಿ ಕಂಡಿದೆ. ಆಕೆಯೇ ಕೊಲೆಗಾರ್ತಿ ಎನ್ನುವುದು ಪೊಲೀಸರಿಗೆ ಖಚಿವಾಗಿದೆ. ಪ್ರತಿಮಾ, ಶಾಹಿಜಹಾನ ಮೊದಲಿನಿಂದಲೂ ಪರಿಚಯಸ್ಥರಾಗಿದ್ದರು. ಪ್ರತಿಮಾ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಶಾಹಿಜಹಾನ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಸದಾ ಒಡವೆಗಳನ್ನು ಹಾಕಿಕೊಂಡಿರುತ್ತಿದ್ದ ಶಾಹಿಜಹಾನ ಅವರನ್ನು ನೆಪ ಹೇಳಿ ಖಾನಾಪುರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕೊಲೆ ಮಾಡಲು ಆಗದೇ ಇರುವಾಗ ವಾಪಸ್ ರಾಮನಗರಕ್ಕೆ ಕರೆದುಕೊಂಡು ಬಂದು ಕ್ಯಾಸಲರಾಕ್ ರಸ್ತೆಯಲ್ಲಿ ಇಬ್ಬರೇ ಇರುವಾಗ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ ಎಂದು ಮಾಹಿತಿ ನೀಡಿದರು.