ಹಗರಿಬೊಮ್ಮನಹಳ್ಳಿ: ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ, ಬುದ್ಧಿ ಹೇಳಿ ಎಂದು ನನ್ನ ಪತಿಯನ್ನು ಠಾಣೆಗೆ ಕರೆ ತಂದರೆ ನನ್ನ ಪತಿಯ ಮೇಲೆ ರಾಘವೇಂದ್ರ ಮತ್ತು ವೆಂಕಟೇಶ್ ಎಂಬ ಇಬ್ಬರು ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆಗೈದರು. ಪತಿಯನ್ನು ಹತ್ಯೆಗೈದಿರುವ ಪೊಲೀಸರಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಲಾಕಪ್ ಸಾವಿಗೀಡಾದ ಖಲೀಲ್ ಸಾಬ್ ಪತ್ನಿ ಶೈನಾಜ್ ಬೇಗಂ ಆಗ್ರಹಿಸಿದರು.
ಠಾಣೆಯಲ್ಲಿಯೇ ಸತ್ತಿದ್ದರೂ ಚಿಕಿತ್ಸೆ ಕೊಡಿಸಬೇಕು ಎಂದು ನನ್ನ ಪತಿಯನ್ನು ಸರಕು ಸಾಗಾಣಿಕೆ ವಾಹನದಲ್ಲಿ ನಾಯಿಯಂತೆ ಒಯ್ದರು. ಸತ್ತಿರುವ ನನ್ನ ಪತಿಯನ್ನು ಯಾವುದಾದರೂ ಕಾಲುವೆಯಲ್ಲಿ ಎಸೆಯುತ್ತಾರೆ ಎಂಬ ಆತಂಕದಲ್ಲಿಯೇ ನಾನು ನನ್ನ ಮಕ್ಕಳಿಬ್ಬರನ್ನೂ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ ಎಂದು ಗದ್ಗದಿತರಾದರು.
ಆಸ್ಪತ್ರೆಯಲ್ಲಿ ನನ್ನ ಪತಿಯ ಬಾಯಿಯಿಂದ ಮತ್ತು ಕಿವಿಯಿಂದ ರಕ್ತ ಬಂದಿದ್ದು ಗಮನಿಸಿದ್ದೇನೆ. ಪತಿಯ ಸಾವು ಠಾಣೆಯಲ್ಲಿ ಪೊಲೀಸರಿಂದಲೇ ಆಗಿದೆ. ನನಗೆ ನ್ಯಾಯ ಬೇಕು. ಅದನ್ನಷ್ಟೇ ಕೇಳೋದು. ನನ್ನ ಬದುಕನ್ನು ನಾನು ಕಟ್ಟಿಕೊಳ್ಳುತ್ತೇನೆ, ನನಗೆ ಯಾವ ಪರಿಹಾರವೂ ಬೇಡ. ನನ್ನ ಪತಿಯನ್ನು ಕೊಂದ ಇಬ್ಬರೂ ಪೊಲೀಸರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ನನ್ನ ಪತಿ ಕಟ್ಟಡ ಕಾರ್ಮಿಕರಾಗಿದ್ದರು. ಯಾವಾಗಲೂ ಆರೋಗ್ಯದಿಂದಿದ್ದರು. ಮೂತ್ರ ವಿಸರ್ಜನೆಗೆಂದು ಹೋದಾಗ ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಫಿಟ್ಸ್ ಬಂದು ತೀರಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿರುವುದು ಕಟ್ಟುಕತೆ. ನ್ಯಾಯ ಸಿಗದಿದ್ದರೆ ಠಾಣೆಯ ಮುಂದೆ ಧರಣಿ ನಡೆಸುವುದಾಗಿ ಎಂದು ಎಚ್ಚರಿಸಿದರು.
ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಲಾಕಪ್ ಸಾವಿಗೀಡಾಗಿರುವ ಖಲೀಲ್ ಸಾಬ ಕುಟುಂಬದವರ ಕಾನೂನು ಹೋರಾಟಕ್ಕೂ ಜೊತೆಯಾಗುತ್ತೇನೆ. ಎರಡು ದಿನಗಳಲ್ಲಿ ತನಿಖೆಯ ಕುರಿತು ಮಾಹಿತಿ ಒದಗಿಸದಿದ್ದರೆ ಕುಟುಂಬದವರ ಜೊತೆ ಗೃಹಮಂತ್ರಿ ಪ್ರಿಯಾಂಕ ಖರ್ಗೆ ಅವರ ಬಳಿ ತೆರಳಿ ಪಟ್ಟಣದ ಪೊಲೀಸ್ ವೈಫಲ್ಯ ಕುರಿತು ದೂರು ದಾಖಲಿಸುವುದಾಗಿ ಎಚ್ಚರಿಸಿದರು.