ಕನ್ನಡಪ್ರಭ ವಾರ್ತೆ ಹಾಸನ
ಮೊಸಳೆಹೊಸಹಳ್ಳಿಯಲ್ಲಿ ಗಣೇಶೋತ್ಸವದ ವೇಳೆ ಸಂಭವಿಸಿದ ದುರಂತಕ್ಕೆ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಮತ್ತು ಸರ್ಕಾರದ ಸಂಪೂರ್ಣ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವ ನಡೆಯುವ ವೇಳೆ 500 ಮೀಟರ್ ದೂರದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರೇ ಈ ದುರಂತ ಸಂಭವಿಸುತ್ತಿರಲಿಲ್ಲ. ಈ 10 ಜನರ ಜೀವ ಉಳಿಸಬಹುದಿತ್ತು. ಪೊಲೀಸ್ ಇಲಾಖೆ ಸರ್ಕಾರದ ಅಡಿಯಲ್ಲಿ ಬರುತ್ತದೆ. ಆದ್ದರಿಂದ ಇದು ಕೇವಲ ಇಲಾಖೆಯ ದೋಷವಲ್ಲ, ಸರ್ಕಾರದ ನೇರ ವೈಫಲ್ಯ. ಕೇವಲ 5 ನೂರು ಮೀಟರ್ ಹಿಂದೆ ಬ್ಯಾರಿಕೇಡ್ ಹಾಕಿ ಇಬ್ಬರು ಪೊಲೀಸರನ್ನು ನಿಯೋಜಿಸಿದ್ದರೆ, ಮೆರವಣಿಗೆಯ ಅವಧಿಯಲ್ಲಿ ಟ್ರಾಫಿಕ್ ಬಂದ್ ಮಾಡಿದ್ದರೆ ಹತ್ತು ಮಂದಿ ಅಮೂಲ್ಯ ಜೀವಗಳು ಉಳಿಯುತ್ತಿತ್ತು ಎಂದು ಆರೋಪಿಸಿದರು.ರೇವಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ, ತನಿಖೆ ನಡೆಸುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎಂದು ಮಾತ್ರ ಹೇಳುವುದರಿಂದ ಪ್ರಯೋಜನವಿಲ್ಲ. ತನಿಖೆಯ ವರದಿ ಏನು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲೇಬೇಕು. ಗೃಹಸಚಿವರು ಸ್ವತಃ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಬ್ಬದ ವೇಳೆ ಐದು- ಆರು ಸಾವಿರ ಜನರು ಸೇರುವ ಸಾಧ್ಯತೆ ಇತ್ತು. ಇಂತಹ ಸಂದರ್ಭದಲ್ಲಿ ಮುಂಚಿತವಾಗಿ ಎಸ್ಪಿ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿತ್ತು. ಡ್ಯೂಟಿಯವರು ಯಾವ ವರದಿ ನೀಡಿದ್ದಾರೆ ಎಂಬುದನ್ನೂ ಬಹಿರಂಗಪಡಿಸಬೇಕು. ಯಾವ ಅಧಿಕಾರಿಯ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ರೇವಣ್ಣ ಗರಂ ಆದರು.ದುರಂತದಲ್ಲಿ ಸಾವನ್ನಪ್ಪಿದವರೊಂದಿಗೆ, ಇನ್ನೊಬ್ಬ ವಿದ್ಯಾರ್ಥಿಯ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿಸಿದ ರೇವಣ್ಣ, ಮೃತರ ಕುಟುಂಬಗಳಿಗೆ ಅಪಘಾತ ವಿಮೆ ಪರಿಹಾರದ ಹಣ ತಲುಪುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ಜೊತೆಗೆ ಹೆಚ್ಚಿನ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.ರೇವಣ್ಣ ತಮ್ಮ ಆರೋಪಗಳನ್ನು ತೀವ್ರಗೊಳಿಸಿ, ಅಮಾಯಕರನ್ನು ಕರೆತಂದು ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ. ಮಹಿಳಾ ಪಿಎಸ್‌ಐ ಒಬ್ಬ ವಿದ್ಯಾರ್ಥಿಯ ಶರ್ಟ್ ಬಿಚ್ಚಿಸಿ ಹೊಡೆದಿರುವ ಘಟನೆ ನಡೆದಿದೆ. ಈ ರೀತಿಯ ಕ್ರೌರ್ಯವನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಸರ್ಕಾರಕ್ಕೆ ಒಂದು ವಾರದ ಗಡುವು ನೀಡುತ್ತಿದ್ದೇನೆ. ಆ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ನಮ್ಮ ಶಾಸಕರು ಸೇರಿ ಚರ್ಚಿಸಿ ಮುಂದೇನು ಮಾಡಬೇಕೆಂದು ತೀರ್ಮಾನಿಸುತ್ತೇವೆ. ಜನರ ಜೀವಗಳೊಂದಿಗೆ ಆಟವಾಡುವ ನಿರ್ಲಕ್ಷ್ಯವನ್ನು ಯಾವತ್ತಿಗೂ ಮನ್ನಿಸಲು ಸಾಧ್ಯವಿಲ್ಲ ಎಂದು ರೇವಣ್ಣ ಎಚ್ಚರಿಕೆ ನೀಡಿದರು.