ಕನ್ನಡಪ್ರಭವಾರ್ತೆ ಶಹಾಬಾದ
ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೊಳ್ಳುತ್ತಲೇ ನಗರದ ಪ್ರತಿ ವೃತ್ತದಲ್ಲಿ ಶ್ರೀರಾಮನ ವಿವಿಧ ಭಂಗಿಯ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಪ್ರತಿ ವೃತ್ತದಲ್ಲೂ ಮಹಾ ಪ್ರಸಾವ ವಿತರಣೆ ನಡೆಸಿದರು. ನಗರದ ಮಾರ್ವಾಡಿ ಸಮಾಜದ ಯುವಕರು ಸ್ವಯಂ ಪ್ರೇರಿತರಾಗಿ ಲಾಡು ಹಂಚಿ ತಮ್ಮ ಭಕ್ತಿಯನ್ನು ಮೆರೆದರು.
ಸೋಮವಾರ ಬೆಳಗ್ಗೆ ನಗರದ ಜೆಪಿ ಕಾಲೋನಿಯಲ್ಲಿರುವ 70 ದಶಕದ ಶ್ರೀರಾಮ ಮಂದಿರದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ ಮಾತಾ, ಹಣಮಂತ ದೇವರಿಗೆ ಅರ್ಚಕರಾದ ಶ್ರೀಪಾದ ಭಟ್ಟ ಸೋಮಯಾಜಿ, ಉಮೇಶ ಭಟ್ಟ ಸೋಮಯಾಜಿ, ದಾಮೋಧರ ಭಟ್ಟ ಅವರಿಂದ ವಿಶೇಷ ಪೂಜೆ, ಅಲಂಕಾರ ಮಾಡಲಾಯಿತು. ದೇವರಿಗೆ ಪುಷ್ಪಾರ್ಚನೆ, ಶ್ರೀರಾಮ ತಾರಕ ಮಂತ್ರಿ, ರಾಮರಕ್ಷಾಸ್ತ್ರೋತ್ರ ಪಠಿಸಲಾಯಿತು.ಸಂಜೆ ಸಾಮೂಹಿಕ ಶ್ರೀರಾಮ ತಾರಕ ಮಂತ್ರ ಪಠಣ, 1008 ದೀಪೋತ್ಸವ, ಪಲ್ಲಕ್ಕಿ ಉತ್ಸವ, ಗಣ್ಯರಿಗೆ ಸನ್ಮಾನ, ಮಹಾ ಪ್ರಸಾದ ವಿತರಣೆ ನಡೆಯಿತು.
ನಗರದ ಬಾಲಾಜಿ ಮಂದಿರ ಹಾಗೂ ಮಾರ್ವಾಡಿ ಸಮಾಜದ ವತಿಯಿಂದ ನಗರದಲ್ಲಿ ಶ್ರೀರಾಮ ವೇಷಧಾರಿಗಳ ಮೆರವಣಿಗೆ ಆಯೋಜಿಸಲಾಗಿತ್ತು, ಅದಕ್ಕಾಗಿ ಡಿಜೆ, ರಥದ ವ್ಯವಸ್ಥೆ, ಮಹಾರಾಷ್ಟ್ರ ಬಾರ್ಸಿಯಿಂದ ಬಾಲಕರ ವಿಶೇಷ ತಾಳ ಮೇಳದ ತಂಡವನ್ನು ಕರೆಸಲಾಗಿತ್ತು. ಅದರೆ, ತಹಶೀಲ್ದಾರ ಸುದರ್ಶನ ಚೌರ, ಪಿಐ ನಟರಾಜ ಲಾಡೆ ಅವರು ಮೆರವಣಿಗೆಗೆ ಎಸ್‍ಪಿ ಅವರಿಂದ ಪರವಾನಿಗೆ ಪಡೆಯಬೇಕಾಗುತ್ತದೆ ಎಂದು ಮೆರವಣಿಗೆಗೆ ತಡೆದರು.
ನಗರದ ಶ್ರೀರಾಮ ವೃತ್ತಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ಆದೇಶದ ಮೇರೆಗೆ ಶ್ರೀಜ್ಯೂವಲರ್ಸ್ ವತಿಯಿಂದ 200 ಕೆ.ಜೆ., ಬೊಂದಿ ಲಾಡು ಹಂಚಲಾಯಿತು.