ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಲಾಗಿದೆ. ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಗಸ್ತು ಇರುತ್ತದೆ. ಆದ್ದರಿಂದ ಅಕ್ರಮದಲ್ಲಿ ತೊಡಗಿರುವವರು ಎಚ್ಚೆತ್ತುಕೊಂಡು ಒಳ್ಳೆಯ ದಾರಿ ಕಂಡುಕೊಳ್ಳಬೇಕೆಂದು ಪಿಎಸ್‌ಐ ಅನೀಲ ಕುಂಬಾರ ಹೇಳಿದರು.ಶಹರ ಠಾಣೆ ಆವರಣದಲ್ಲಿ ನಡೆದ ಎಸ್‌ಸಿ, ಎಸ್‌ಟಿ ಸಮಾಜದ ಕುಂದು ಕೊರತೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಚಟುವಟಿಕೆ ನಡೆಸುವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದಾಳಿ ನಡೆಸಿ ಪ್ರಕರಣ ದಾಖಲಿಸಲಾಗುವುದು. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಮಾಜ ಮುಖಿಯಾಗಿ ಕೆಲಸ ಮಾಡಬೇಕು. ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒತ್ತು ನೀಡಿ ಉನ್ನತ ಸ್ಥಾನದಲ್ಲಿ ಇರಬೇಕು. ಅಕ್ರಮ ಚಟುವಟಿಗಳಲ್ಲಿ ಭಾಗಿಯಾಗಿ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಟ್ರಾಫಿಕ್, ಬೈಕ್ ಪಾರ್ಕಿಂಗ್‌ಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಹಿರಿಯ ಅಧಿಕಾರಿಗಳ ಆದೇಶದಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಈ ವ್ಯವಸ್ಥೆಯನ್ನು ಎಲ್ಲರೂ ಪಾಲಿಸಬೇಕು ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂದರು. ನಿಗದಿತ ವಾರಗಳಲ್ಲಿ ರಸ್ತೆ ಒಂದುಬದಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಫಲಕಗಳನ್ನು ಅಳವಡಿಸಲಾಗಿದ್ದು ಅದರ ಪ್ರಕಾರ ವಾಹನ ನಿಲ್ಲಿಸುವಂತೆ ತಿಳಿಸಿದರು. ಸುಗಮ ಸಂಚಾರಕ್ಕಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಯಾವುದೇ ರೀತಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಹತ್ತಿರದ ಠಾಣೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.ಗ್ರಾಮೀಣ ಠಾಣೆ ಪಿಎಸ್‌ಐ ಗಂಗಾಧರ ಪೂಜಾರಿ, ಕ್ರೈಂ ಪಿಎಸ್‌ಐ ಕುಂಬಾರ ಹಾಗೂ ದಲಿತ ಮುಖಂಡರಾದ ಮುತ್ತಣ್ಣ ಮೈತ್ರಿ, ಶಶಿಕಾಂತ ತೇರದಾಳ, ರವಿ ದೊಡಮನಿ, ಅರುಣ ಲಗಳಿ, ವಿಲಾಸ ನಡುವಿನಮನಿ, ಯಶವಂತ ಕಲೂತಿ, ರವಿ ಶಿಂಗೆ, ನಾಗು ಮೀಸಿ, ಸದಾಶಿವ ಕಡಕೋಳ, ಸಂಗಮೇಶ ಕಾಂಬಳೆ, ಭರತೇಶ ಪಾನಕ್ಕನ್ನವರ, ಮುಸ್ತಾಕ ನಧಾಫ ಸೇರಿದಂತೆ ಅನೇಕ ದಲಿತಪರ ಸಂಘಟನೆಯ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.