ಪೊಲೀಸ್‌ ನೇಮಕಾತಿ; ತಿಕೋಟಾ ಪರೀಕ್ಷಾ ಕೇಂದ್ರದಲ್ಲಿ ಹೈಡ್ರಾಮಾ!

KannadaprabhaNewsNetwork |  
Published : Aug 03, 2026, 03:00 AM IST
2ದವದವದ | Kannada Prabha

ಸಾರಾಂಶ

ವಿಜಯಪುರ: ಪೊಲೀಸ್ ಕಾನ್ಸಟೆಬಲ್ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಒಎಂಆರ್ ಶೀಟ್ ಹಾಗೂ ಪ್ರಶ್ನೆಪತ್ರಿಕೆಯ ನಂಬರ್ ಹೊಂದಾಣಿಕೆ ಆಗದ ಕಾರಣ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿ ಕೆಲವರು ಪರೀಕ್ಷೆ ಬಹಿಷ್ಕರಿಸಿದ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ಪಟ್ಟಣದಲ್ಲಿರುವ ಶಾರದಾಂಬ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪೊಲೀಸ್ ಕಾನ್ಸಟೆಬಲ್ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಒಎಂಆರ್ ಶೀಟ್ ಹಾಗೂ ಪ್ರಶ್ನೆಪತ್ರಿಕೆಯ ನಂಬರ್ ಹೊಂದಾಣಿಕೆ ಆಗದ ಕಾರಣ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿ ಕೆಲವರು ಪರೀಕ್ಷೆ ಬಹಿಷ್ಕರಿಸಿದ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ಪಟ್ಟಣದಲ್ಲಿರುವ ಶಾರದಾಂಬ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ನಡೆದಿದೆ.

ಪೊಲೀಸ್ ನೇಮಕಾತಿ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಭಾನುವಾರ ತಿಕೋಟಾ ಪಟ್ಟಣದಲ್ಲಿರುವ ಶಾರದಾಂಬ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 9.30ಗೆ ಸರಿಯಾದ ಸಮಯಕ್ಕೆ ಪ್ರಶ್ನೆ ಪತ್ರಿಕೆ ತಲುಪಿದ್ದು, ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಸೀಟ್ ಹಂಚಿಕೆಯೂ ಆಗಿತ್ತು. ಪರೀಕ್ಷೆ ವೇಳೆ ಒಎಂಆರ್ ಶೀಟ್ ಹಾಗೂ ಪ್ರಶ್ನೆಪತ್ರಿಕೆಯ ಮೇಲಿನ ನಂಬರ್‌ಗಳು ಹೊಂದಾಣಿಕೆ ಆಗದ ಕಾರಣ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಪ್ರಶ್ನೆ ಪತ್ರಿಕೆ, ಒಎಂಆರ್ ಶೀಟ್ ಹೊಂದಾಣಿಕೆ ಆಗ್ತಿಲ್ಲ ಎಂದು ಪರೀಕ್ಷಾರ್ಥಿಗಳು ಗದ್ದಲ ಆರಂಭಿಸಿದ್ದಾರೆ. ಈ ವೇಳೆ ಸೇಂಟರ್‌ ಮುಖ್ಯಸ್ಥರು ಒಎಂಆರ್‌ ಶೀಟ್‌ ಹಾಗೂ ಪ್ರಶ್ನೆಪತ್ರಿಕೆ ನಂಬರ್‌ ಒಂದೇ ಇರಬೇಕೆಂಬ ಯಾವುದೇ ನಿಯಮವಿಲ್ಲ. ಒಎಂಆರ್‌ ಶೀಟ್‌ನಲ್ಲಿ ನಿಮ್ಮ ಪ್ರಶ್ನೆ ಪತ್ರಿಕೆ ನಂಬರ್‌ ನಮೂದಿಸಿದರೆ ಯಾವುದೇ ತೊಂದರೆ ಇಲ್ಲ ಎಂದು ಮನವರಿಕೆ ಮಾಡಲು ಯತ್ನಿಸಿದರು. ಇದರಿಂದ ಹಲವು ಪರೀಕ್ಷಾರ್ಥಿಗಳು ಮರಳಿ ಕೊಠಡಿಯೊಳಗೆ ತೆರಳಿ ಪರೀಕ್ಷೆ ಬರೆದರೆ, ಇನ್ನೂ ಕೆಲವು ಪರೀಕ್ಷಾರ್ಥಿಗಳು ಇದಕ್ಕೆ ಇದಕ್ಕೆ ಒಪ್ಪದೇ ಪರೀಕ್ಷೆ ಬಹಿಷ್ಕರಿಸಿ ಕೇಂದ್ರದಿಂದ ಹೊರ ಬಂದಿದ್ದಾರೆ. ಕೇಂದ್ರದ ಎದುರು ಪ್ರತಿಭಟನೆ‌ ನಡೆಸಿ, ಪರೀಕ್ಷಾ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದರು.ಕೆಲ ಸಮಯದ ಬಳಿಕ ಪರೀಕ್ಷೆ ಬರೆಯಲು ಒಳಹೋಗಲು ಯತ್ನಿಸಿದರಾದರೂ ಕೆಇಎ ನಿಯಮದ ಪ್ರಕಾರ ಒಮ್ಮೆ ಪರೀಕ್ಷಾ ಕೇಂದ್ರದಿಂದ ಹೊರಹೋದರೆ ಒಳಗೆ ಬಿಡಲು ಅನುಮತಿ ನೀಡಲ್ಲ ಎಂದು ಪೊಲೀಸರು ತಡೆದರು. ಕ್ಲೋಸ್‌ ಮಾಡಿದ ಗೇಟ್‌ ನೊಳಗೆ ನುಗ್ಗಲು ಪರೀಕ್ಷಾರ್ಥಿಗಳು ನೂಕಾಟ ತಳ್ಳಾಟ ಮಾಡಿದ್ದು, ಈ ವೇಳೆ ಪೊಲೀಸರಿಗೂ ಪರೀಕ್ಷಾರ್ಥಿಗಳ ಮಧ್ಯೆ ಗದ್ದಲ ಏರ್ಪಟ್ಟಿದೆ. ಪರಿಸ್ಥಿತಿ ಕೈಮೀರುವುದರನ್ನು ಅರಿತ ಪೊಲೀಸ್ ಅಧಿಕಾರಿಗಳು ಲಾಠಿ ಬೀಸಿ ಪರೀಕ್ಷಾರ್ಥಿಗಳನ್ನು ಚದುರಿಸಿದರು.ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಭ್ಯರ್ಥಿಗಳಿಗೆ ಮನವರಿಕೆ ಮಾಡಲು ಯತ್ನಿಸಿದರು. ಸರಿಯಾದ ಸಮಯಕ್ಕೆ ಪ್ರಶ್ನೆಪತ್ರಿಕೆ ಕೊಟ್ಟಿಲ್ಲ. ಸುಮಾರು 45 ನಿಮಿಷ ತಡವಾಗಿ ಪ್ರಶ್ನೆಪತ್ರಿಕೆ ವಿತರಿಸಿದ್ದರಿಂದ ನಾವು ಪರೀಕ್ಷೆ ಬಹಿಷ್ಕರಿಸಿದ್ದೇವೆ ಎಂದು ಕೆಲವು ಪರೀಕ್ಷಾರ್ಥಿಗಳು ಆರೋಪಿಸಿದ್ದಾರೆ.

ಬೆಳಗ್ಗೆ 10.30ಕ್ಕೆ ಕೊಡಬೇಕಿದ್ದ ಪ್ರಶ್ನೆಪತ್ರಿಕೆ ಹಾಗೂ ಒಎಂಆರ್ ಶೀಟ್ ವಿಳಂಬವಾಗಿ 10.45ಕ್ಕೆ ಕೊಟ್ಟಿದ್ದಾರೆ. ತಿಕೋಟಾದ ಶಾರದಾಂಬ ಪಿಯು ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರದವರು ಕೊಟ್ಟಿರುವ ಪ್ರಶ್ನೆಪತ್ರಿಕೆ ಹಾಗೂ ಓಎಂಆರ್ ನಂಬರ್‌ಗಳು ಹೊಂದಾಣಿಕೆ ಆಗದ ಕಾರಣ ನಾವು ಪರೀಕ್ಷೆ ಬರೆದಿಲ್ಲ. ಸುಮಾರು 200ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದೇವೆ. 150 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ. ಅದರಲ್ಲೂ ಕೆಲವರು ನಮ್ಮೊಂದಿಗೆ ಹೊರಗೆಬಂದು ಪ್ರಶ್ನೆಗಳಿಗೆ ಉತ್ತರ ನೋಡಿಕೊಂಡು ಮತ್ತೆ ಒಳಗೆ ಹೋಗಿ ಪರೀಕ್ಷೆ ಬರೆದಿದ್ದಾರೆ. ಹೀಗಾಗಿ ನಮಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

- ಈರಣ್ಣ ಇಂಡಿ, ಪರೀಕ್ಷಾರ್ಥಿ

ಒಎಂಆರ್ ಶೀಟ್ ಹಾಗೂ ಪ್ರಶ್ನೆಪತ್ರಿಕೆ‌ ಮೇಲಿನ ನಂಬರ್ ಗಳು ಹೊಂದಾಣಿಕೆ ಆಗ್ತಿಲ್ಲ ಎಂದು ಅಭ್ಯರ್ಥಿಗಳು ಗಲಾಟೆ ಮಾಡಿದ್ದಾರೆ. ಆದರೆ ಎರಡೂ ಸಂಖ್ಯೆಗಳು ಒಂದೇ ಆಗಿರಬೇಕೆಂಬ ನಿಯಮವಿಲ್ಲ. ಒಎಂಆರ್ ಶೀಟ್ ಮೇಲೆ ಅವರ ಪ್ರಶ್ನೆ ಪತ್ರಿಕೆ ವರ್ಶನ್ ಕೋಡ್ ನಮೂದು ಮಾಡಿ ಪರೀಕ್ಷೆ ಮುಂದುವರಿಸಬಹುದಿತ್ತು. ಪ್ರಶ್ನೆ ಪತ್ರಿಕೆ, ಒ‌ಎಂಆರ್ ಶೀಟ್‌ಗೂ ಟ್ಯಾಗಿಂಗ್, ಬಾಡಿಂಗ್ ಇರೋದಿಲ್ಲ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ತಿಳಿವಳಿಕೆ ಹೇಳಿದ ನಂತರ 115ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹೊರಗೆ ಬಂದವರು ಕೆಲ ಸಮಯದ ಬಳಿಕ ಮತ್ತೆ ಒಳಗೆ ಹೋಗಲು ಬೇಡಿಕೆ ಇಟ್ಟಿದ್ದಾರೆ. ಒಮ್ಮೆ ಪರೀಕ್ಷಾ ಕೇಂದ್ರದಿಂದ ಹೊರಗೆ ಹೋದರೆ ವಾಪಸ್ ಒಳಗೆ ಬರೋದು ಪರೀಕ್ಷಾ ಕಾನೂನಿನ ಪ್ರಕಾರ ವಿರುದ್ಧ. ಲಾಸ್ಟ್ ಬೆಲ್ ಆಗುವ ವರೆಗೂ ಹೊರಗೆ ಬರಬಾರದು ಎನ್ನುವ ಸೂಚನೆ ಇದೆ. ಇದೆಲ್ಲವೂ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಇದರ ಸಂಪೂರ್ಣ ವರದಿಯನ್ನು ವಿವರವಾಗಿ ಪರೀಕ್ಷಾ ಮಂಡಳಿಗೆ ನೀಡಲಾಗುವುದು.- ಡಾ.ಆನಂದ.ಕೆ, ವಿಜಯಪುರ ಜಿಲ್ಲಾಧಿಕಾರಿ

ಪೊಲೀಸ್ ಕಾನ್ಸಟೇಬಲ್ ನೇಮಕಾತಿ ಪರೀಕ್ಷೆಯ ವೇಳೆ ಗೊಂದಲ ಉಂಟಾಗಿ ತಿಕೋಟಾದಲ್ಲಿ ಕೆಲವು ಅಭ್ಯರ್ಥಿಗಳು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಲು ಯತ್ನಿಸಿದ್ದರು. ಈ ವೇಳೆ ಕೆಲವರನ್ನು ವಶಕ್ಕೆ ಪಡೆದು, ಪರಿಸ್ಥಿತಿ ನಿಯಂತ್ರಿಸಲಾಗಿದೆ. ಒಳಗಡೆ ಇರುವ ಅಭ್ಯರ್ಥಿಗಳಿಗೆ ನಿರಾತಂಕದಿಂದ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ಸಮಯದಲ್ಲಿ ಕೊಠಡಿಯಿಂದ ಹೊರಗೆ ಹೋಗಿರುವ ಅಭ್ಯರ್ಥಿಗಳು ಮತ್ತೆ ಕೇಂದ್ರದೊಳಗೆ ಬಂದು ಪರೀಕ್ಷೆ ಬರೆಯಲು ಕೆಇಎ ನಿಯಮದ ಪ್ರಕಾರ ಅವಕಾಶವಿಲ್ಲ. ಹಾಗಾಗಿ ಒಮ್ಮೆ ಕೇಂದ್ರದಿಂದ ಹೊರಹೋದವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಯಾವುದೇ ವಿದ್ಯಾರ್ಥಿಗಳು, ಪರೀಕ್ಷಾರ್ಥಿಗಳು ಉದ್ವೇಗಕ್ಕೆ ಒಳಗಾಗಿ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು.

- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್.ಪಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಕಳ್ಳಸಾಗಾಣಿಕೆಯ ಜಾಗೃತಿ ಮೂಡಿಸುವುದು ಮುಖ್ಯ: ಅರವಿಂದ ಹಾಗರಗಿ
ಸಂಗ್ರಹಿಸಿಟ್ಟಿದ್ದ ಅಕ್ರಮ ಪಡಿತರ ಅಕ್ಕಿ ವಶಕ್ಕೆ