ಕ್ರಿಮಿನಲ್‌ಗಳ ಜತೆ ಪೊಲೀಸರ ಸ್ನೇಹ ಸಹಿಸಲ್ಲ: ಆಯುಕ್ತ

KannadaprabhaNewsNetwork |  
Published : Sep 13, 2025, 02:04 AM ISTUpdated : Sep 13, 2025, 09:01 AM IST
Seemanth Kumar

ಸಾರಾಂಶ

ಕ್ರಿಮಿನಲ್‌ಗಳ ಜತೆ ಪೊಲೀಸರ ಸ್ನೇಹ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನರ ಸಮಸ್ಯೆ ಬಗೆಹರಿಸಬೇಕಾದ ಪೊಲೀಸರೇ ಸಮಸ್ಯೆಯಾದರೆ ಇಲಾಖೆ ಸುಮ್ಮನೆ ಇರುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು :  ಕ್ರಿಮಿನಲ್‌ಗಳ ಜತೆ ಪೊಲೀಸರ ಸ್ನೇಹ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನರ ಸಮಸ್ಯೆ ಬಗೆಹರಿಸಬೇಕಾದ ಪೊಲೀಸರೇ ಸಮಸ್ಯೆಯಾದರೆ ಇಲಾಖೆ ಸುಮ್ಮನೆ ಇರುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಉತ್ತರ ವಿಭಾಗದ ಸಶಸ್ತ್ರ ಮೀಸಲು ಪಡೆಯ (ಸಿಎಆರ್‌) ಮೈದಾನದಲ್ಲಿ ಶುಕ್ರವಾರ ನಡೆದ ಮಾಸಿಕ ಕವಾಯತ್ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಆಯುಕ್ತರು ಮಾತನಾಡಿದರು.

ಕೆಲ ದಿನಗಳಿಂದ ನಿರಂತರವಾಗಿ ಬಂದೋಬಸ್ತ್ ಕೆಲಸಗಳು ಎದುರಾದವು. ಇಂಥ ಪರಿಸ್ಥಿತಿಯಲ್ಲಿ ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಪ್ರತಿಯೊಂದು ವಿಭಾಗದ ಅಧಿಕಾರಿ-ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಣೆ ತೋರಿದ್ದಾರೆ. ಪ್ರಧಾನ ಮಂತ್ರಿ ಅವರು ರಸ್ತೆಯಲ್ಲೇ ಸಾಗಿದರು. ಎಲ್ಲೂ ಸಹ ತೊಂದರೆಯಾಗಲಿಲ್ಲ. ಭದ್ರತೆ ಕೆಲಸದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ ನೀವೆಲ್ಲ (ಪೊಲೀಸರು) ಅಭಿನಂದನಾರ್ಹರು ಎಂದು ಅವರು ಶ್ಲಾಘಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಹಾಗೂ ಅಪರಾಧ ಪ್ರಕರಣಗಳ ಪತ್ತೆದಾರಿಕೆಯಲ್ಲಿ ಒಳ್ಳೆಯ ಪ್ರಗತಿ ಕಾಣುತ್ತಿದ್ದೇವೆ. ಆದರೆ ಕೆಲವು ಲೋಪದೋಷಗಳಾಗುತ್ತಿವೆ. ಅವುಗಳನ್ನು ಸರಿಪಡಿಸಲು ಪ್ರತಿ ಮಂಗಳವಾರ ನಡೆಯುವ ಡಿಸಿಪಿಗಳ ಸಭೆಯಲ್ಲಿ ಸಮಾಲೋಚಿಸಿ ಸೂಚನೆಗಳನ್ನು ಕೊಡಲಾಗಿದೆ. ಆದರೆ ಬೆರವಣಿಕೆಯಷ್ಟು ಅಧಿಕಾರಿ-ಸಿಬ್ಬಂದಿ ಸೂಚನೆ ಪಾಲಿಸದೆ ಉದಾಸೀನತೆ ತೋರುತ್ತಿರುವುದು ಗಮನಕ್ಕೆ ಬಂದಿದೆ. ಇಂಥವರ ಮೇಲೆ ಅಧಿಕಾರಿಗಳ ವರದಿ ಆಧರಿಸಿ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಕಟುವಾಗಿ ನುಡಿದರು.

ಕ್ರಿಮಿನಲ್‌ಗಳ ಜತೆ ಪೊಲೀಸರು ಶಾಮೀಲಾದರೆ ಸಹಿಸುವುದಿಲ್ಲ. ಅಂಥವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ನೀವು ಇಲಾಖೆಗೆ ಸೇರಿರುವುದು ಕ್ರಿಮಿನಲ್‌ಗಳಿಂದ ಜನರನ್ನು ರಕ್ಷಿಸಲು. ಹೀಗಿರುವಾಗ ನೀವೇ (ಪೊಲೀಸರು) ಕ್ರಿಮಿನಲ್‌ಗಳ ಜತೆ ಸೇರಿದರೆ ತಪ್ಪಾಗುತ್ತದೆ. ಕೆಲವು ವಿಷಯಗಳು ನಡೆದಿವೆ. ಅದನ್ನು ಚರ್ಚಿಸಲು ಈ ವೇದಿಕೆ ಸೂಕ್ತವಲ್ಲ. ನಿಮಗೆ ಎಲ್ಲ ವಿಷಯ ಗೊತ್ತಿದೆ. ಅಂಥಹದ್ದು ಮತ್ತೆ ಮರುಕಳಿಸಬಾರದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

ನೀವು ಪೊಲೀಸ್ ಇಲಾಖೆಗೆ ಸೇರಿಕೊಂಡಿದ್ದೀರಿ. ನಾವೆಲ್ಲ ಒಂದು ತಂಡವಾಗಿ ಕೆಲಸ ಮಾಡಬೇಕಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆದರೆ ನೀವೇ (ಪೊಲೀಸರು) ಸಮಸ್ಯೆಯಾದರೆ ಇಲಾಖೆ ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು.

ಲಾಠಿ-ಹೆಲ್ಮೆಟ್‌ ಹಿಡಿಯೋದು ಚೆಂದ ಕಾಣುವುದಕ್ಕಲ್ಲ

ಇತ್ತೀಚೆಗೆ ಬಂದೋಬಸ್ತ್ ವೇಳೆ ಪೊಲೀಸರು ಲಾಠಿ ಹಾಗೂ ಹೆಲ್ಮೆಟ್ ಬಳಸದಿರುವುದನ್ನು ಗಮನಿಸಿದೆ. ನಿಮಗೆ ಲಾಠಿ ಕೊಟ್ಟಿರುವುದು ನೀವು ಧರಿಸುವ ಉಡುಪು ಚೆಂದ ಕಾಣಲಿ ಅಥವಾ ಬೇರೆಯವರ ರಕ್ಷಣೆಗೆ ಕೊಟ್ಟಿಲ್ಲ. ನಿಮ್ಮ ರಕ್ಷಣೆಗೆ ಲಾಠಿ ಹಾಗೂ ಹೆಲ್ಮೆಟ್‌ ಇರುವುದು. ಬಂದೋಬಸ್ತ್‌ಗೆ ಕರ್ತವ್ಯಕ್ಕೆ ಕಾಟಾಚಾರಕ್ಕೆ ಹೋಗಬೇಡಿ ಎಂದು ತರಾಟೆ ತೆಗೆದುಕೊಂಡರು.

5 ಕೋಟಿ ವೆಚ್ಚದ ಕಲ್ಯಾಣ ಮಂಟಪ

ಉತ್ತರ ವಿಭಾಗದ ಸಿಎಎಆರ್‌ ಮೈದಾನವು 35 ಎಕರೆ ಹೊಂದಿದ್ದು, ಇಲ್ಲಿ 5 ಕೋಟಿ ರು. ವೆಚ್ಚದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಇದೇ ವೇಳೆ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಇದೇ ವೇಳೆ ಉತ್ತಮವಾಗಿ ಕೆಲಸ ಮಾಡಿದ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಿ ಆಯುಕ್ತರು ಅಭಿನಂದಿಸಿದರು. ಜಂಟಿ ಆಯುಕ್ತ (ಆಡಳಿತ) ಕುಲದೀಪ್ ಕುಮಾರ್.ಆರ್‌.ಜೈನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Read more Articles on

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ