ಪೊಲೀಸರ ಸೇವೆ ಶ್ಲಾಘನೀಯ: ಜಯಂತಕುಮಾರ್

KannadaprabhaNewsNetwork |  
Published : Oct 22, 2025, 01:03 AM IST
್ಿ್ಿ್ಿ್ಿ | Kannada Prabha

ಸಾರಾಂಶ

ದೇಶಕ್ಕಾಗಿ ಕರ್ತವ್ಯ ನಿರ್ವಹಿಸಿ ಪ್ರಾಣಾರ್ಪಣೆ ಮಾಡಿದ ಪೊಲೀಸ್ ಸಿಬ್ಬಂದಿಯ ತ್ಯಾಗ, ಸೇವೆಯನ್ನು ಗೌರವಿಸಲು ಈ ದಿನ ಮೀಸಲಾಗಿದೆ ಎಂದು ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುದೇಶಕ್ಕಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಸದಾ ತ್ಯಾಗ ಮನೋಭಾವದಿಂದ ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಜಯಂತಕುಮಾರ್ ಹೇಳಿದರು.ನಗರದ ಬಿ.ಎಚ್. ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರ ಸ್ಮಾರಕದ ಪುತ್ಥಳಿಗೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿ ಅವರು ಮಾತನಾಡಿದರು.ದೇಶಕ್ಕಾಗಿ ಕರ್ತವ್ಯ ನಿರ್ವಹಿಸಿ ಪ್ರಾಣಾರ್ಪಣೆ ಮಾಡಿದ ಪೊಲೀಸ್ ಸಿಬ್ಬಂದಿಯ ತ್ಯಾಗ, ಸೇವೆಯನ್ನು ಗೌರವಿಸಲು ಈ ದಿನ ಮೀಸಲಾಗಿದೆ ಎಂದು ಅವರು ತಿಳಿಸಿದರು.ದೇಶದಲ್ಲಿ ನಾವುಗಳು ರಾತ್ರಿ ವೇಳೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದೇವೆ. ಎಂದರೆ ಅದಕ್ಕೆ ಪೊಲೀಸರ ಸೇವೆಯೇ ಕಾರಣ. ಪೊಲೀಸರು ದೇಶಕ್ಕಾಗಿ, ಸಮಾಜಕ್ಕಾಗಿ ದಿನದ 24 ಗಂಟೆಯೂ ಸಾಕಷ್ಟು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಲ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಕಾರ್ಯನಿರ್ವಹಿಸುವ ಸನ್ನಿವೇಶಗಳು ಎದುರಾಗುತ್ತವೆ ಎಂದರು. ದೇಶ ಮತ್ತು ಸಮಾಜದ ರಕ್ಷಣೆಗಾಗಿ ಪ್ರತಿ ಕ್ಷಣವೂ ಸೇವೆ ಸಲ್ಲಿಸುತ್ತಿರುವ ಪೊಲೀಸರ ಕಾರ್ಯವನ್ನು ನಾವೆಲ್ಲರೂ ಸ್ಮರಿಸಬೇಕು. ಒಮ್ಮೊಮ್ಮೆ ತಮ್ಮ ಕುಟುಂಬದ ಹಿತವನ್ನು ಬದಿಗೊತ್ತಿ ಸಮಾಜದ ರಕ್ಷಣೆ ಕಾಪಾಡುವ ಪೊಲೀಸರ ಸೇವೆ ಶ್ಲಾಘನೀಯ ಎಂದರು.1959 ರ ಅ. 21ರಂದು ದೇಶದ ಗಡಿ ಕಾಯುವಾಗ ಲಡಾಕ್‌ನಲ್ಲಿ ಚೀನಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕೇಂದ್ರೀಯ ಮೀಸಲು ಪಡೆದ 10 ಪೊಲೀಸರು ಹುತಾತ್ಮರಾದರು. ಅಂದಿನಿಂದ ಪ್ರತಿ ವರ್ಷ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ. ಹುತಾತ್ಮರಾಗಿರುವ 191 ಪೊಲೀಸರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುರಣಿಸಲಿ ಎಂದು ಪ್ರಾರ್ಥಿಸಿದರು.ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕಾದರೆ ಪೊಲೀಸ್ ಸಿಬ್ಬಂದಿ, ನ್ಯಾಯಾಲಯಗಳು ಹಾಗೂ ನ್ಯಾಯಾಧೀಶರು ಎಲ್ಲರೂ ಅಗತ್ಯ ಎಂದು ಅವರು ಪ್ರತಿಪಾದಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ನಮ್ಮ ದೇಶದ ಉತ್ತರದ ಗಡಿ ಭಾಗವು ವರ್ಷವಿಡೀ ಹಿಮದಿಂದ ಆವೃತವಾಗಿರುವ ದುರ್ಗಮ ಪ್ರದೇಶವಾಗಿದೆ. ಇಂತಹ ಸಂದರ್ಭದಲ್ಲಿ 1959 ರ ಅ.21 ರಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಕರಣ್‌ಸಿಂಗ್ ಎಂಬ ಡಿವೈಎಸ್ಪಿ ರವರ ನಾಯಕತ್ವದಲ್ಲಿ ಸಿಆರ್‌ಪಿ ತಂಡದವರು ನಮ್ಮ ದೇಶದ ಗಡಿ ಭಾಗದ ಲಡಾಕ್ ಹಾಟ್‌ಸ್ಟ್ರಿಂಗ್ ಎಂಬಲ್ಲಿ ಕಾವಲು ಕಾಯುತ್ತಿರುವಾಗ ಚೀನಾ ದೇಶದ ಅಸಂಖ್ಯಾತ ಸೈನಿಕರು ನಮ್ಮ ದೇಶದ ಗಡಿ ಭಾಗದಲ್ಲಿ ಒಳನುಗ್ಗಿದರು. ಅಲ್ಲಿದ್ದ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಕೊನೆಯ ಹನಿ ರಕ್ತ ಇರುವವರೆಗೂ ಅಪ್ರತಿಮವಾಗಿ ಹೋರಾಡಿ ವೀರ ಮರಣ ಹೊಂದಿದರು ಎಂದು ಸ್ಮರಿಸಿದರು.

ಈ ರೀತಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಸಾವನ್ನಪ್ಪುತ್ತಿರುವ ವೀರ ಯೋಧರ ನೆನಪಿಗೋಸ್ಕರ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ನಮ್ಮ ಇಲಾಖೆ ವತಿಯಿಂದ ಪ್ರತಿ ವರ್ಷ ಅ. 21ರಂದು ಆಚರಿಸುತ್ತಾ ಬಂದಿದ್ದೇವೆ ಎಂದರು. ನಮ್ಮ ದೇಶದಲ್ಲಿ ಪ್ರತಿ ವರ್ಷ ದೇಶ ರಕ್ಷಣೆಯಲ್ಲಿ ಹುತಾತ್ಮರಾದವರ ಹೆಸರುಗಳನ್ನು ಪಟ್ಟಿ ಮಾಡಿ ಹೆಸರುಗಳನ್ನು ಓದಿ ಸ್ಮರಣೆ ಮಾಡುತ್ತೇವೆ ಎಂದು ಹೇಳಿದ ಅವರು, ಪ್ರಸಕ್ತ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣತೆತ್ತ 191 ಪೊಲೀಸರ ಹೆಸರುಗಳನ್ನು ಪಠಿಸಿ ಅವರ ಸೇವೆಯನ್ನು ಸ್ಮರಿಸಿದರು.ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅಡಿಷಲ್ ಎಸ್ಪಿಗಳಾದ ಸಿ. ಗೋಪಾಲ್, ಪುರುಷೋತ್ತಮ್, ಕೆಎಸ್‌ಆರ್‌ಪಿ ಕಮಾಂಡೆಂಟ್ ನಿಸಾರ್ ಅಹಮದ್ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ
ಹುಟ್ಟು ಸಾವಿನ ಮಧ್ಯೆ ಸಾಧನೆ ಮಹತ್ವದ್ದು: ಡಾ.ಮುರುಗೇಶ ನಿರಾಣಿ