ಕನ್ನಡಪ್ರಭ ವಾರ್ತೆ ನಂಜನಗೂಡು
ಮೈಸೂರು ತಾಲೂಕಿನ ಜಯಪುರ ಪೊಲೀಸರಿಗೆ ಅಕ್ರಮವಾಗಿ ಜಾನುವಾರುಗಳನ್ನ ಸಾಗಿಸುತ್ತಿರುವ ಮಾಹಿತಿ ಬಂದಿದ್ದು, ಪಿಎಸ್‌ಐ ಹೇಮಾವತಿ ಅವರು ವಾಹನವನ್ನು ಸಿನಮೀಯ ಶೈಲಿಯಲ್ಲಿ ಚೇಸ್ ಮಾಡಿದ್ದಾರೆ. ಅತಿ ವೇಗದಿಂದ ಚಾಲನೆ ಮಾಡುತ್ತಿದ್ದ ಖದೀಮರು ಹುಲ್ಲಹಳ್ಳಿ ರಸ್ತೆ ಕಡೆಗೆ ತಿರುಗಿದ್ದಾರೆ. ಕೂಡಲೇ ಹೇಮಾವತಿ ಅವರು ಹುಲ್ಲಹಳ್ಳಿ ಪಿಎಸ್ಸೈ ಚೇತನ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಲರ್ಟ್ ಆದ ಚೇತನ್ ಕುಮಾರ್ ಸಹ ಸಿಬ್ಬಂದಿಗಳ ಸಮೇತ ಜಾನುವಾರುಗಳನ್ನ ಸಾಗಿಸುತ್ತಿದ್ದ ವಾಹನ ಹಿಡಿಯಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಅಹಲ್ಯಾ ಗ್ರಾಮದ ಬಳಿ ಜಾನುವಾರುಗಳನ್ನ ತುಂಬಿದ್ದ ವಾಹನ ಪಲ್ಟಿಯಾಗಿದೆ. ಈ ವೇಳೆ ವಾಹನದಲ್ಲಿದ್ದ ವ್ಯಕ್ತಿಗಳು ಪರಾರಿಯಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದಾಗ ವಾಹನದಲ್ಲಿದ್ದ ಕರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯ ಕಂಡು ಬಂದಿದೆ. ಕೂಡಲೇ ಸ್ಥಳೀಯರ ಸಹಾಯದಿಂದ 20 ಕರುಗಳನ್ನು ರಕ್ಷಿಸಿ ಪಿಂಜರಾಪೋಲ್ ಗೆ ರವಾನಿಸಿ ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ. ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.