ಕನ್ನಡಪ್ರಭ ವಾರ್ತೆ ಮೈಸೂರು
ದೇಶದ ಸುಭದ್ರತೆ ಮತ್ತು ಅಭಿವೃದ್ಧಿಗೆ ಪೊಲೀಸ್ ಮತ್ತು ಭದ್ರತಾ ಪಡೆಗಳು ಪೂರಕ ಎಂದು ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ತಿಳಿಸಿದರು.ನಗರದ ಎಸ್ಪಿ ಕಚೇರಿ ಪಕ್ಕದಲ್ಲಿರುವ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ದಕ್ಷಿಣ ವಲಯ ಡಿಐಜಿ, ಮೈಸೂರು ನಗರ, ಜಿಲ್ಲಾ ಪೊಲೀಸ್, ಕರ್ನಾಟಕ ಪೊಲೀಸ್ ಅಕಾಡೆಮಿ, ಕೆಎಸ್ಆರ್ ಪಿ ಮತ್ತು ಕೆಎಆರ್ ಪಿ ಘಟಕಗಳು ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದೇಶದ ಒಳಗೆ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಪತ್ತೆ ಮತ್ತು ನಿಯಂತ್ರಣ ಸೇರಿದಂತೆ ಆಂತರಿಕ ಭದ್ರತೆಯನ್ನು ಪೊಲೀಸ್ ಮತ್ತು ಅರೆಸೇನಾ ಪಡೆಗಳು ನಿರ್ವಹಿಸುತ್ತಿವೆ. ಹಾಗೆಯೇ, ದೇಶದ ಗಡಿಯಲ್ಲಿ ಬಾಹ್ಯ ಭದ್ರತೆಯನ್ನು ಸೇನಾ ಪಡೆಗಳು ಮಾಡುತ್ತಿವೆ. ಯಾವ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿರುತ್ತದೆಯೊ ಆ ದೇಶದ ಅಭಿವೃದ್ಧಿ ಹೊಂದಿರುತ್ತದೆ ಎಂದು ಅವರು ಹೇಳಿದರು.ಕಾನೂನು ಸುವ್ಯವಸ್ಥೆ, ಅಪರಾಧ ಪತ್ತೆ- ನಿಯಂತ್ರಣ ಜೊತೆಗೆ ಪೊಲೀಸರಿಗೆ ಭಯೋತ್ಪಾದನೆ, ಸೈಬರ್ ದಾಳಿಯಂತಹ ಹೊಸ ಹೊಸ ಸವಾಲುಗಳನ್ನು ನಿಭಾಯಿಸಬೇಕಿದೆ. ಜೊತೆಗೆ ಪ್ರಕೃತಿ ವಿಕೋಪ ಸೇರಿದಂತೆ ಯಾವುದೇ ಘಟನೆ ಸಂದರ್ಭದಲ್ಲಿ ಮೊದಲು ಸ್ಪಂದಿಸುವವರು ಪೊಲೀಸರು. ಇಂತಹ ಸಂದರ್ಭದಲ್ಲಿ ತ್ಯಾಗ ಮಾಡಬೇಕಾಗಿರುತ್ತದೆ. ಅಂತಹ ತ್ಯಾಗ ಮತ್ತು ಬಲಿದಾನ ಮಾಡಿದರನ್ನು ಸ್ಮರಿಸಲು ಹುತಾತ್ಮರ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಹಾಗೆಯೇ, ಹುತಾತ್ಮರ ಕುಟುಂಬದೊಂದಿಗೆ ಪೊಲೀಸ್ ಇಲಾಖೆ ಬೆಂಬಲವಾಗಿರುತ್ತದೆ ಎಂದು ಅವರು ತಿಳಿಸಿದರು.
ಹುತಾತ್ಮರಿಗೆ ನಮನಹುತಾತ್ಮರ ಸ್ಮಾರಕಕ್ಕೆ ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಮೈಸೂರು ಎಸ್ಪಿ ಎನ್. ವಿಷ್ಣುವರ್ಧನ್, ಕೆಪಿಎ ಉಪ ನಿರ್ದೇಶಕ ಚನ್ನಬಸವಣ್ಣ ಲಂಗೋಟಿ, ಕೆಎಸ್ಆರ್ ಪಿ ಕಮಾಂಡೆಂಟ್ ಕೆ.ಬಿ. ದೊರೆಮಣಿ ಭೀಮಯ್ಯ, ಏರ್ ಫೋರ್ಸ್ ಸೆಲೆಕ್ಷನ್ ಬೋರ್ಡ್ ಚೀಫ್ ಅಡ್ಮಿನಿಷ್ರೇಟಿವ್ ಬಿಲ್ಲೋರ್ ಹೇಮಂತ್ ಕುಮಾರ್, ಡಿಸಿಪಿಗಳಾದ ಆರ್.ಎನ್. ಬಿಂದುಮಣಿ, ಕೆ.ಎಸ್. ಸುಂದರ್ ರಾಜ್, ಸಿದ್ದನಗೌಡ ಪಾಟೀಲ್, ಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್, ಅಶ್ವರೋಹಿ ದಳದ ಕಮಾಂಡೆಂಟ್ ಎ. ಮಾರುತಿ, ಡಿವೈಎಸ್ಪಿ ಗೋಪಾಲಕೃಷ್ಣ ಮೊದಲಾದವರು ಪೊಲೀಸ್ ಬ್ಯಾಂಡ್ ವಾದ್ಯ ಹಿನ್ನೆಲೆಯಲ್ಲಿ ಸಾಗಿ ಪುಷ್ಪಗುಚ್ಛ ಸಮರ್ಪಿಸಿದರು.
ನಂತರ ಕರ್ನಾಟಕದ 8 ಮಂದಿ ಸೇರಿದಂತೆ ದೇಶದ ಒಟ್ಟು 191 ಮಂದಿ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಟ್ಟಿಯನ್ನು ಎಸ್ಪಿ ಎನ್. ವಿಷ್ಣುವರ್ಧನ್ ವಾಚಿಸಿದರು. ಬಳಿಕ ಪೆರೇಡ್ ಕಮಾಂಡರ್ ಮಹಾದೇವಸ್ವಾಮಿ ವಂದನೆ ಸಲ್ಲಿಸಿದ ಬಳಿಕ 3 ಸುತ್ತಿನ ವಾಲಿ ಫೈರಿಂಗ್ ನಡೆಸಿ ಹುತಾತ್ಮರಿಗಾಗಿ ಮೌನಾಚರಣೆ ಮಾಡಲಾಯಿತು.ಅಂತಿಮವಾಗಿ ವೀರಪ್ಪನ್ ಕಾರ್ಯಾಚರಣೆಯಲ್ಲಿ ಮಡಿದ ಎಸ್ಪಿ ಹರಿಕೃಷ್ಣ ಪುತ್ಥಳಿ ಹಾಗೂ ಸ್ಮಾರಕಕ್ಕೆ ಪೊಲೀಸ್ ಅಧಿಕಾರಿಗಳು ಮಾಲಾರ್ಪಣೆ ಮಾಡಿದರು. ಕುಮಾರಸ್ವಾಮಿ ನಿರೂಪಿಸಿದರು.