ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವ ಇಲಾಖೆ, ಜಿಲ್ಲಾಡಳಿತ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಭೂಮಿಯ ಆಳದಲ್ಲಿ ಹೂತುಹೋಗಿದ್ದ ಪ್ರಾಚೀನ ಇತಿಹಾಸದ ಕುರುಹುಗಳು ಒಂದೊಂದಾಗಿ ಹೊರಬರುತ್ತಿದ್ದು, 7ನೇ ದಿನವೂ ಲೋಹದ ಹಣತೆ ಮತ್ತು ಮೂಳೆ ಪತ್ತೆಯಾಗಿವೆ.

​ಗದಗ : ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವ ಇಲಾಖೆ, ಜಿಲ್ಲಾಡಳಿತ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಭೂಮಿಯ ಆಳದಲ್ಲಿ ಹೂತುಹೋಗಿದ್ದ ಪ್ರಾಚೀನ ಇತಿಹಾಸದ ಕುರುಹುಗಳು ಒಂದೊಂದಾಗಿ ಹೊರಬರುತ್ತಿದ್ದು, 7ನೇ ದಿನವೂ ಲೋಹದ ಹಣತೆ ಮತ್ತು ಮೂಳೆ ಪತ್ತೆಯಾಗಿವೆ.

ಗ್ರಾಮದಲ್ಲಿ ಗುರುವಾರ ಉತ್ಖನನದ ಆರಂಭದಲ್ಲಿಯೇ ವಿಶಿಷ್ಟವಾದ ಲೋಹದ ತುಂಡೊಂದು ಗೋಚರವಾಗಿದೆ. ಇದು ಹಣತೆಯ ಆಕಾರದಲ್ಲಿದ್ದು, ಹಿಂದೆ ದೇವಸ್ಥಾನಗಳಲ್ಲಿ ಅಥವಾ ಶುಭ ಕಾರ್ಯಗಳಲ್ಲಿ ಕರ್ಪೂರ ಬೆಳಗಲು ಬಳಸುತ್ತಿದ್ದ ಉಪಕರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಪ್ರಸ್ತುತ ಸಿಬ್ಬಂದಿ ಇದನ್ನು ಸ್ವಚ್ಛಗೊಳಿಸಿ ಸುರಕ್ಷಿತವಾಗಿರಿಸಿದ್ದು, ಹೆಚ್ಚಿನ ಸಂಶೋಧನೆಯ ನಂತರ ಇದರ ಕಾಲಮಾನದ ಬಗ್ಗೆ ಸ್ಪಷ್ಟತೆ ಸಿಗಲಿದೆ. ಇದರೊಂದಿಗೆ ಮತ್ತೆ 2 ಇಂಚು ಉದ್ದದ ಮೂಳೆಯ ತುಂಡು ಪತ್ತೆಯಾಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ. ಉತ್ಖನನದ 6ನೇ ದಿನವಾದ ಬುಧವಾರ ಸಹ 5 ಸಣ್ಣ ಮೂಳೆಯ ತುಂಡುಗಳು ಪತ್ತೆಯಾಗಿದ್ದವು.

ಕಾರ್ಮಿಕರ ಬೆರಳು ಸವೆತ:

ಉತ್ಖನನ ಕಾರ್ಯದಲ್ಲಿ 35 ಜನ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಆದರೆ, ಮಣ್ಣು ಮತ್ತು ಕಲ್ಲಿನ ಕೆಲಸ ಮಾಡುವುದರಿಂದ ಕಾರ್ಮಿಕರ ಬೆರಳುಗಳು ಸವೆದುಹೋಗಿದ್ದು, ಬಯೋಮೆಟ್ರಿಕ್ ಮಷಿನ್‌ನಲ್ಲಿ ಹಾಜರಾತಿ ದಾಖಲಿಸಲು ಹೈರಾಣಾಗುತ್ತಿದ್ದಾರೆ. ಕೈಗಳನ್ನು ಕಲ್ಲು, ಮಣ್ಣಿಗೆ ಉಜ್ಜಿದರೂ ಬೆರಳಚ್ಚು ಮೂಡದ ಕಾರಣ ಕೊನೆಗೆ ಅಧಿಕಾರಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಪಡೆಯುವ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ.

ರಿತ್ತಿ ಕುಟುಂಬಕ್ಕೆ 30/40 ನಿವೇಶನ

ಭೂಮಿಯಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಲಕ್ಕುಂಡಿ ಗ್ರಾಮ ಪಂಚಾಯಿತಿಯು ​ಗ್ರಾಮದ ಮಾರುತಿ ನಗರದಲ್ಲಿ 30/40 ಅಳತೆಯ ನಿವೇಶನ ನೀಡಲು ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿದೆ.

ಸಿದ್ಧರ ಬಾವಿ ಅಭಿವೃದ್ಧಿಪಡಿಸಿ

ಉತ್ಖನನ ನಡೆಯುತ್ತಿರುವ ಜಾಗದ ಕೂಗಳತೆ ದೂರದಲ್ಲೇ ಇರುವ ಐತಿಹಾಸಿಕ ಸಿದ್ಧರ ಬಾವಿ ಈಗ ಅವ್ಯವಸ್ಥೆಯ ಆಗರವಾಗಿದೆ. 101 ಬಾವಿಗಳ ಖ್ಯಾತಿಯ ಲಕ್ಕುಂಡಿಯ ಪ್ರಮುಖ ಬಾವಿ ಇದಾಗಿದ್ದು, ಕೋಟೆ ವೀರಭದ್ರೇಶ್ವರ ಹಾಗೂ ಚಂದ್ರಮೌಳೇಶ್ವರ ದೇವಸ್ಥಾನದ ಬಳಿಯಿದೆ. ಪ್ರಸ್ತುತ ಈ ಬಾವಿ ಪಾಚಿ ಕಟ್ಟಿ ಮಲಿನವಾಗಿದ್ದು, ಸುತ್ತಲೂ ಗಿಡಗಂಟೆಗಳು ಬೆಳೆದಿವೆ. ಕೂಡಲೇ ಈ ಬಾವಿಯನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಬೇಕು.

- ಬಸನಗೌಡ ಬಿರಾದಾರ, ಗ್ರಾಮಸ್ಥರು.