ಜಿಲ್ಲೆಯ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಸೋಮವಾರ 4ನೇ ದಿನದ ಉತ್ಖನನ ಕಾರ್ಯ ಮಹತ್ವದ ತಿರುವು ಪಡೆದುಕೊಂಡಿದೆ.
ಕನ್ನಡಪ್ರಭ ವಾರ್ತೆ ಗದಗ
ಜಿಲ್ಲೆಯ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಸೋಮವಾರ 4ನೇ ದಿನದ ಉತ್ಖನನ ಕಾರ್ಯ ಮಹತ್ವದ ತಿರುವು ಪಡೆದುಕೊಂಡಿದೆ. ಒಂದೆಡೆ ಶಿಲಾಯುಗದ ಆಯುಧ ಮಾದರಿಯ ಕಲ್ಲು ಪತ್ತೆಯಾಗಿ ಸಂಶೋಧಕರಲ್ಲಿ ಕುತೂಹಲ ಮೂಡಿಸಿದ್ದರೆ, ಮತ್ತೊಂದೆಡೆ ಕೂಲಿ ಹೆಚ್ಚಳಕ್ಕೆ ಕಾರ್ಮಿಕರು ಆಗ್ರಹಿಸುವ ಮೂಲಕ ಗಮನ ಸೆಳೆದರು.ಸೋಮವಾರ ಬೆಳಗ್ಗೆ ಉತ್ಖನನ ಕಾರ್ಯ ಆರಂಭವಾದ ಕೆಲವೇ ಸಮಯದಲ್ಲಿ ಆಯುಧ ಮಾದರಿಯ ವಿಶಿಷ್ಟ ಕಲ್ಲೊಂದು ಪತ್ತೆಯಾಗಿದೆ. ಅಂಡಾಕಾರದಲ್ಲಿದ್ದು, ಒಂದು ಭಾಗ ಮೊನಚಾಗಿರುವ ಈ ಕಲ್ಲು ಶಿಲಾಯುಗದಲ್ಲಿ ಮಾನವರು ಬಳಸುತ್ತಿದ್ದ ಆಯುಧದಂತಿದೆ. ಇದರೊಂದಿಗೆ ಭಾನುವಾರ ಸಂಜೆ ಉತ್ಖನನ ಮುಗಿಸುವ ವೇಳೆ ಒಂದೂವರೆ ಅಡಿ ಆಳದಲ್ಲಿ ಪುರಾತನ ಕಾಲದ ಲೋಹದ ಗಂಟೆಯೂ ಲಭ್ಯವಾಗಿದೆ.
ಕೂಲಿ ಹೆಚ್ಚಳಕ್ಕೆ ಆಗ್ರಹ:ಈ ಮಧ್ಯೆ, ಉತ್ಖನನಕ್ಕೆ ಬರುವ ಕಾರ್ಮಿಕರು ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಬೇಡಿಕೆ ಮಂಡಿಸಿದರು. ಸದ್ಯ ನೀಡಲಾಗುತ್ತಿರುವ ₹374 ಕೂಲಿ ಸಾಲದು, ಇದನ್ನು ₹600ಕ್ಕೆ ಹೆಚ್ಚಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು. ದಿನಕ್ಕೆ 8 ಗಂಟೆ ಕಠಿಣ ಕೆಲಸ ಮಾಡುತ್ತಿದ್ದು, ಈಗಿನ ದರ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ಕಾರ್ಮಿಕರು ಮೇಲ್ವಿಚಾರಕರ ಬಳಿ ಅಳಲು ತೋಡಿಕೊಂಡರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ, ಉತ್ಖನನ ಕಾರ್ಯ ಮುಂದುವರಿಯಿತು. ಇದರಿಂದಾಗಿ ಬೆಳಗ್ಗೆ ಕೆಲಸ ಪ್ರಾರಂಭಿಸುವುದು ತಡವಾಯಿತು.
ಕಿತ್ತೂರು ಚೆನ್ನಮ್ಮನ ಮಗ ನಾನು ಎಂದ ಕಾವಿಧಾರಿ: ಹೈಡ್ರಾಮಾ! ಇದೇ ವೇಳೆ, ಉತ್ಖನನ ಸ್ಥಳದಲ್ಲಿ ಹೈಡ್ರಾಮಾ ಸೃಷ್ಟಿಸಿದ್ದ ಕಾವಿಧಾರಿ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಓಡಿಸಿದ ಘಟನೆಯೂ ನಡೆದಿದೆ. ತಾನು ಕಿತ್ತೂರು ಚೆನ್ನಮ್ಮನ ಮಗನೆಂದು ಹೇಳಿಕೊಂಡ ಆ ವ್ಯಕ್ತಿ, ಇಲ್ಲಿ 100 ಕೆಜಿ ಚಿನ್ನದ ಮೂರ್ತಿಯಿದೆ, ಅದನ್ನು ಹೊರತೆಗೆದರೆ ಜಗತ್ತಿಗೆ ಮಳೆಯಾಗುವುದಿಲ್ಲ ಎಂದು ಹೇಳುತ್ತಾ ಒಂದೇ ಕಾಲಿನಲ್ಲಿ ನಿಂತು ವಿಚಿತ್ರ ವರ್ತನೆ ತೋರಿದ್ದಾನೆ. ಆತನ ಚಿತ್ರ, ವಿಚಿತ್ರವಾದ ಮಾತುಗಳಿಂದ ರೊಚ್ಚಿಗೆದ್ದ ಸ್ಥಳೀಯರು ಸರಿಯಾದ ಎಚ್ಚರಿಕೆ ನೀಡುತ್ತಿದ್ದಂತೆ ಆ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದರಿಂದಲೂ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು.ಕೋಟ್...ಉತ್ಖನನ ಕಾರ್ಯದಲ್ಲಿ ಯಾವುದೇ ಗೊಂದಲಗಳಿಲ್ಲ. ಉತ್ಖನನ ಕಾರ್ಯ ಸಹಜವಾಗಿಯೇ ನಡೆಯುತ್ತಿದೆ. ಸಿಕ್ಕಿರುವ ಎಲ್ಲ ವಸ್ತುಗಳನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ಸಂರಕ್ಷಿಸಿ, ಪರಿಶೀಲಿಸುತ್ತಿದ್ದಾರೆ.
- ಸಿದ್ದಲಿಂಗೇಶ್ವರ ಪಾಟೀಲ. ಜಿಪಂ ಮಾಜಿ ಅಧ್ಯಕ್ಷ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ.