ಕಂದವಾರ ಬಾಗಿಲು ಪುಷ್ಪಲತಾ ಕೊಲೆ ಪ್ರಕರಣ । ಆರೋಪಿಗಳ ಬಂಧನ । ನಾದಿನಿಯ ಸಹವರ್ತಿಯಿಂದ ಸೊಸೆ ಕೊಲೆಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶುಕ್ರವಾರ ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರ ನಗರವನ್ನು ಭೀತಿಗೆ ತಳ್ಳಿದ್ದ ಬಾಪೂಜಿ ನಗರದ ವಿವಾಹಿತ ಮಹಿಳೆ ಪುಷ್ಪಲತಾ ಭೀಕರ ಹತ್ಯೆ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶುಕ್ರವಾರದಿಂದಲೇ ಕಾರ್ಯಾಚರಣೆ ನಡೆಸಿದ್ದು, ಕೊಲೆಗಾರರಿಗೆ ಬಲೆ ಬೀಸಿದ್ದರು. ನಗರದ ಬಾಪೂಜಿ ನಗರದಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಕೊಲೆಯಾದ ಮನೆಯ ಸುತ್ತ ಜನ ಜಾತ್ರೆಯೇ ನಡೆದಿತ್ತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು.ಜಿಲ್ಲಾ ಎಸ್‌ಪಿ ಮಾಹಿತಿ ನೀಡಿದಂತೆ ಮೃತ ಪುಷ್ಪಲತಾ ಅವರ ನಾದಿನಿ ಭವ್ಯ ಅವರನ್ನು ಹೊಸಕೋಟೆಯ ಸಮೀಪದ ಊರಿಗೆ ಮದುವೆ ಮಾಡಿಕೊಡಲಾಗಿತ್ತು. ಗಂಡನ ಜತೆಗಿದ್ದ ಭವ್ಯ ಕೃಷ್ಣ ಎಂಬ ಕಾರ್ ಡ್ರೈವರ್ ಜೊತೆ ಒಡವೆ ತೆಗೆದುಕೊಂಡು ಓಡಿ ಹೋಗಿದ್ದರು ಎನ್ನಲಾಗಿದೆ. ಆಗ ಗಂಡನ ಮನೆಯವರು ಪತ್ತೆಯಾದರೆ ಮಾನಹೋಗುತ್ತೆ ಎನ್ನುವ ಉದ್ದೇಶದಿಂದ ಆಕೆಯನ್ನು ತವರು ಮನೆಯಾದ ಚಿಕ್ಕಬಳ್ಳಾಪುರಕ್ಕೆ ವಾಪಸ್ಸು ಕಳಿಸಿದ್ದರು. ಆಕೆ ಇಲ್ಲಿಯೇ ತಂದೆತಾಯಿ ಜತೆ ವಾಸವಿದ್ದರು ಎನ್ನಲಾಗಿದೆ.
ನೆರವಿಗೆ ಬರುವುದಾಗಿ ಬಂದಿದ್ದ ಲಲ್ಲುಗೆ ಈಕೆಯೇ ಆ ಎಲ್ಲಾ ವಿಡಿಯೋಗಳನ್ನು ಕಳುಹಿಸಿದ್ದಳು ಎನ್ನಲಾಗಿದೆ. ಲಲ್ಲೂ ಕೂಡ ಕ್ರಮೇಣ ಆಕೆಯನ್ನು ಅದೇ ವಿಡಿಯೋಗಳನ್ನು ತೋರಿಸಿ ಬೆದರಿಸಿ ಹಣ ಪಡೆಯುತ್ತಿದ್ದ ಎನ್ನಲಾಗಿದೆ.
ಇದರಂತೆ ಮೇ 28ರ ರಾತ್ರಿ ತನ್ನ ಕುಟುಂಬದವರೆಲ್ಲರೂ ದೇವಾಲಯಕ್ಕೆ ಹೋಗುತ್ತಿದ್ದಾರೆ. ನಾದಿನಿಯನ್ನು ನನ್ನೊಂದಿಗೆ ಇಟ್ಟುಕೊಂಡಿರುತ್ತೇನೆ. ನೀನು ಬಂದು ಆಭರಣ ತೆಗೆದುಕೊಂಡು ಹೋಗು ಎಂದು ಹೇಳಿದ್ದಳು. ಈಕೆಯ ಯೋಜನೆಯಂತೆ ಲಲ್ಲು ತಡರಾತ್ರಿ ಇವರಿದ್ದ ಮನೆಗೆ ಬಂದು ನಿದ್ರೆಗೆ ಜಾರಿದ್ದ ಪುಷ್ಪಲತಾ ಅವರ ಮೇಲೆ ದಾಳಿ ಮಾಡಿ ಉಸಿರುಗಟ್ಟಿಸಿ ಕೊಂದು, ನಂತರ ಕುತ್ತಿಗೆ ಸೀಳಿ ಕೊಲೆಯಂತೆ ಬಿಂಬಿಸಿ ಆಭರಣವನ್ನು ಕದ್ದಿದ್ದರು.
ವಿಚಾರ ತಿಳಿದ ಪೊಲೀಸರು ಆಸ್ಪತ್ರೆಗೆ ತೆರಳಿ ಆಕೆಯ ಹೇಳಿಕೆ ಪಡೆದಾಗ ಒಂದೊಂದು ಸಮಯಕ್ಕೆ ಒಂದೊಂದು ರೀತಿ ಹೇಳಿಕೆ ನೀಡಿದ್ದಾಳೆ. ಮೇಲಾಗಿ ಮನೆಗೆ ಹಾಕಿಸಿದ್ದ ಸಿಸಿ ಕ್ಯಾಮೆರಾ ಆ ದಿನವೇ ಆಫ್ ಆಗಿತ್ತು. ಇವೆಲ್ಲವುಗಳಿಂದ ಅನುಮಾನಗೊಂಡ ಪೊಲೀಸರು ತಮ್ಮದೇ ಶೈಲಿಯಲ್ಲಿ ತೀವ್ರ ವಿಚಾರಣೆಗೆ ಮುಂದಾದಾಗ ಕೊಲೆಯ ಸತ್ಯಾಂಶ ಹೊರಬಂದಿದೆ ಎಂದು ಎಸ್ಪಿ ತಿಳಿಸಿದರು.
ಈ ಸಂಬಂಧ ಹೊಸಕೋಟೆಯಲ್ಲಿ ತಲೆಮರಿಸಿಕೊಂಡಿದ್ದ ಲಾಲು ಯಾದವ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭವ್ಯ ಅವರನ್ನು ವಶಕ್ಕೆ ಪಡೆದು ಜೈಲಿಗೆ ತಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಸಿಕೆಬಿ-6 ನಾದಿನಿ ಕೊಲೆಗೆ ಕಾರಣವಾದ ಭವ್ಯ