ಪೊಲೀಸ್‌ ಠಾಣೆಗಳು ವಸೂಲಿ ಕೇಂದ್ರಗಳಾಗಿವೆ: ಡಾ.ಕೆ. ಸುಧಾಕರ್‌

KannadaprabhaNewsNetwork |  
Published : Sep 18, 2026, 01:15 AM IST
    ಸಿಕೆಬಿ-3 ತಾಲ್ಲೂಕಿನ ಅರೂರು ಗ್ರಾಮದ ಬಳಿಯ ಸರ್ಕಾರಿ ನಂದಿ ಮೆಡಿಕಲ್‌ ಕಾಲೇಜಿನ ಹೊರರೋಗಿ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಮಾತನಾಡಿದರು | Kannada Prabha

ಸಾರಾಂಶ

ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ಸಾಮಾನ್ಯ ವಿಷಯವಾಗಿದೆ. ನಾನು ಈ ಬಗ್ಗೆ ಮಾತಾಡಿದರೆ ಹುಚ್ಚು ಹಿಡಿದಿದೆ ಎಂಬಂತೆ ನೋಡುತ್ತಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವ । ಇದು ಕೇವಲ ಕಟ್ಟಡ ಉದ್ಘಾಟನೆಯಲ್ಲ, ಕನಸು ನನಸಾದ ಕ್ಷಣ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸೂಚನೆಯನ್ನು ಯಾರೂ ಪಾಲಿಸುತ್ತಿಲ್ಲ ಎಂದು ಸಂಸದ ಡಾ.ಕೆ. ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಅರೂರು ಗ್ರಾಮದ ಬಳಿಯ ಸರ್ಕಾರಿ ನಂದಿ ಮೆಡಿಕಲ್‌ ಕಾಲೇಜಿನ ಹೊರರೋಗಿ ವಿಭಾಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ಸಾಮಾನ್ಯ ವಿಷಯವಾಗಿದೆ. ನಾನು ಈ ಬಗ್ಗೆ ಮಾತಾಡಿದರೆ ಹುಚ್ಚು ಹಿಡಿದಿದೆ ಎಂಬಂತೆ ನೋಡುತ್ತಾರೆ. ಅಕ್ರಮ ಮಾಡುವುದನ್ನು ತಮ್ಮ ಹಕ್ಕು ಎಂದು ಕಾಂಗ್ರೆಸ್‌ ಶಾಸಕರು ಹಾಗೂ ಸಚಿವರು ಭಾವಿಸಿದ್ದಾರೆ. ಕರ್ನಾಟಕವನ್ನು ಗುತ್ತಿಗೆ ಪಡೆದಿದ್ದು, ಅವಧಿ ಮುಗಿಯುವುದರೊಳಗೆ ಸಾಧ್ಯವಾದಷ್ಟು ಹಣ ಸಂಪಾದಿಸಬೇಕೆಂಬ ಗುರಿ ಕಾಂಗ್ರೆಸ್‌ ನಾಯಕರಿಗಿದೆ ಎಂದರು.

ಪೊಲೀಸ್‌ ಠಾಣೆಗಳು ವಸೂಲಿ ಕೇಂದ್ರಗಳಾಗಿವೆ. ಪೊಲೀಸರನ್ನು ಕೇಳಿದರೆ ಡಿವೈಎಸ್‌ಪಿಗೆ ಇಷ್ಟು ಫಿಕ್ಸ್‌ ಮಾಡಿದ್ದಾರೆ, ಅದಕ್ಕಾಗಿ ರೈತರ ಬಳಿ ವಸೂಲಿ ಮಾಡುತ್ತಿದ್ದೇವೆ ಎನ್ನುತ್ತಾರೆ. ಮೂಲಭೂತ ಸಮಸ್ಯೆ ಸರ್ಕಾರದಲ್ಲೇ ಇದೆ. ಒಂದು ರೂಪಾಯಿ ಭ್ರಷ್ಟಾಚಾರ ನಡೆಯಬಾರದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಆದರೆ ಆ ಮಾತಿನಂತೆ ಅಧಿಕಾರಿಗಳು ಹಾಗೂ ಶಾಸಕರು ನಡೆದುಕೊಳ್ಳುತ್ತಿಲ್ಲ. ಒಕ್ಕಲಿಗ ಸಮುದಾಯದ ಕಟ್ಟಡ ನಿರ್ಮಿಸಲು ಮುಂದಾದರೆ ನಗರಸಭೆ ಆಯುಕ್ತ 2 ಲಕ್ಷ ರು. ಲಂಚ ಪಡೆದಿದ್ದಾನೆ. ನಾನು ಅಧಿಕಾರದಲ್ಲಿದ್ದರೆ ಆ ಅಯೋಗ್ಯನನ್ನು ಅಮಾನತು ಮಾಡುತ್ತಿದ್ದೆ. ಲೋಕಾಯುಕ್ತದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಆಯುಕ್ತನಾಗಿ ನೇಮಕ ಮಾಡಲಾಗಿದೆ. ಆತ ಚಿಕ್ಕಬಳ್ಳಾಪುರಕ್ಕೆ ಬಂದಾಗಲೇ ಅತಿ ದೊಡ್ಡ ಭ್ರಷ್ಟ ಎಂದು ಹೇಳಿದ್ದೆ. ಯಾವ ಅಧಿಕಾರ ಕಳ್ಳ, ಯಾರು ಪ್ರಾಮಾಣಿಕರು ಎಂದು ನನಗೂ ತಿಳಿದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಆತನ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇಲ್ಲವಾದರೆ ನಾನೇ ತೀವ್ರ ಪ್ರತಿಭಟನೆ ಆರಂಭಿಸುತ್ತೇನೆ ಎಂದು ಹೇಳಿದರು.

ಕನಸು ನನಸಾದ ಕ್ಷಣ:

ನಂದಿ ಮೆಡಿಕಲ್ ಕಾಲೇಜಿನ ಹೊರರೋಗಿ ವಿಭಾಗ ಜನರ ಸೇವೆಗೆ ಸಮರ್ಪಣೆಯಾದ ಈ ದಿನ ನನ್ನ ಪಾಲಿಗೆ ಕೇವಲ ಒಂದು ಉದ್ಘಾಟನಾ ಕಾರ್ಯಕ್ರಮವಲ್ಲ, ಹಲವು ವರ್ಷಗಳ ಒಂದು ಕನಸು ನನಸಾದ ಭಾವನಾತ್ಮಕ ಕ್ಷಣ ಎಂದು ಸಂಸದ ಡಾ.ಕೆ.ಸುಧಾಕರ್‌ ಸಂತಸ ಹಂಚಿಕೊಂಡಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ನನ್ನ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಜಿಲ್ಲೆಗೆ ಮೆಡಿಕಲ್ ಕಾಲೇಜು ತಂದೆ. ಆದರೆ ನಂತರ ಒಪಿಡಿ ವಿಭಾಗ ಸೇರಿದಂತೆ ಬಾಕಿ ಇದ್ದ ಕಾಮಗಾರಿ ನಿಧಾನಗೊಂಡು, ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಜಿಲ್ಲೆಯ ಜನರಿಗೆ ಒಪಿಡಿ ಸೇವೆ ದೊರೆಯಲಿಲ್ಲವಲ್ಲ ಎಂಬ ನೋವು ನನ್ನಲ್ಲಿತ್ತು. ಆದರೆ, ದೈವಿಚ್ಛೆಯೇ ಬೇರೆ. ಅಂದು ನಾನು ಆರಂಭಿಸಿದ ಪ್ರಯತ್ನದ ಫಲವಾಗಿ, ಇಂದು ಅದೇ ಒಪಿಡಿ ಬಾಗಿಲುಗಳು ಚಿಕ್ಕಬಳ್ಳಾಪುರದ ಜನರಿಗಾಗಿ ತೆರೆದುಕೊಳ್ಳುವುದನ್ನು ಕಣ್ಣಾರೆ ಕಂಡಾಗ, ವರ್ಷಗಳ ಹಿಂದಿನ ಆ ಬೇಸರವೆಲ್ಲ ಒಂದೇ ಕ್ಷಣದಲ್ಲಿ ಸಂತೋಷವಾಗಿ ಬದಲಾಯಿತು ಎಂದು ಹೇಳಿದರು.

ಈ ಮಹತ್ವದ ಯೋಜನೆಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹೊರರೋಗಿ ಘಟಕಕ್ಕೆ ನನ್ನ ತಾಯಿಯ ಹೆಸರು ಇಡಬೇಕೆಂದು ನಾನು ಅಪೇಕ್ಷಿಸಲಿಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ತಾಯಿಯ ಹೆಸರು ಇಡುವ ಬಗ್ಗೆ ಹೇಳಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ ಎಂದರು.

ಸಂಪೂರ್ಣ ಸಹಕಾರ: ನಾನು ಬಯಲುಸೀಮೆಯ ಶಾಶ್ವತ ನೀರಾವರಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ, ಎತ್ತಿನಹೊಳೆ ಯೋಜನೆಗೆ ಬಿಜೆಪಿ ಕೂಡ ಕೊಡುಗೆ ನೀಡಿದೆ. ನಾನು ಸಚಿವನಾಗಿದ್ದಾಗಲೂ ಅನುದಾನ ತಂದಿದ್ದೇನೆ. ಮುಂದಿನ ವರ್ಷ ನೀರು ಬಂದರೆ ಸಂತೋಷ ಎಂದರು.

ಸಚಿವ ಕೃಷ್ಣ ಬೈರೇಗೌಡರಿಗೆ ಅರ್ಥಶಾಸ್ತ್ರದ ಬಗ್ಗೆಯೂ ತಿಳಿದಿಲ್ಲ, ದೇಶ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ತಿಳಿದಿಲ್ಲ. 100 ರು. ಕೊಟ್ಟರೆ 50 ರು. ವಾಪಸ್‌ ಬರಬೇಕೆಂದು ನಿರೀಕ್ಷೆ ಮಾಡಬಾರದು. ರಾಜ್ಯಕ್ಕೆ ರಕ್ಷಣೆ ಯಾರು ನೀಡುತ್ತಾರೆ? ರಕ್ಷಣಾ ವಲಯಕ್ಕೆ 5 ಲಕ್ಷ ಕೋಟಿ ರು. ನೀಡಲಾಗಿದೆ. ಪಾಕಿಸ್ತಾನದಿಂದ ಮೊದಲು ಪಂಜಾಬ್‌ ಬಾಧಿತವಾಗುತ್ತದೆಯೇ ಹೊರತು ಕರ್ನಾಟಕ ಆಗುವುದಿಲ್ಲ ಎಂದರು.

ಸಿಕೆಬಿ-3 ಅರೂರು ಗ್ರಾಮದ ಬಳಿಯ ಸರ್ಕಾರಿ ನಂದಿ ಮೆಡಿಕಲ್‌ ಕಾಲೇಜಿನ ಹೊರರೋಗಿ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದತ್ತಾತ್ರೇಯನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್‌
ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ; ಬೆಳಗ್ಗೆ ತೆರವು