ಕಲಬುರಗಿ ನಗರದ ಹೈಕೋರ್ಟ್‌ ಕ್ರಾಸ್‌ ಬಳಿ ರಾತ್ರೋರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ಥಳಿ ಸ್ಥಾಪನೆ ಮಾಡಿರುವ ಬೆಳವಣಿಗೆ ನಡೆದಿದ್ದು, ಇದು ರಾಜಕೀಯ ವಲಯದಲ್ಲಿ ಭಾರಿ ಸುದ್ದಿ ಮಾಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ನಗರದ ಹೈಕೋರ್ಟ್‌ ಕ್ರಾಸ್‌ ಬಳಿ ರಾತ್ರೋರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ಥಳಿ ಸ್ಥಾಪನೆ ಮಾಡಿರುವ ಬೆಳವಣಿಗೆ ನಡೆದಿದ್ದು, ಇದು ರಾಜಕೀಯ ವಲಯದಲ್ಲಿ ಭಾರಿ ಸುದ್ದಿ ಮಾಡಿದೆ.

ಏತನ್ಮಧ್ಯೆ ಏಕಾಏಕಿ ಪ್ರತ್ಯಕ್ಷವಾಗಿದ್ದ ಸಿದ್ದರಾಮಯ್ಯನವರ ಪುತ್ಥಳಿ ಅನುಮತಿ ಪಡೆಯದೆ ಸ್ಥಾಪಿಸಿದ್ದಾರೆಂಬ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.

ಕಲಬುರಗಿಯಿಂದ ಅಫಜಲ್ಪುರ ಹೋಗುವ ದಾರಿಯಲ್ಲಿರುವ ತಿರುವಿನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ಥಳಿ ರಾತ್ರೋರಾತ್ರಿ ಪ್ರತ್ಯಕ್ಷವಾಗಿ ಸಾರ್ವಜನಿಕ ಗಮನ ಸೆಳೆದಿತ್ತಲ್ಲದೆ ರಾಜಕೀಯ ವಲಯದಲ್ಲಿಯೂ ಭಾರಿ ಸಂಚಲನವನ್ನೂ ಮೂಡಿಸಿತ್ತು.

ಸೆ. 17ರ ದ್ವಜಾರೋಹಣಕ್ಕೆಂದು ಕಲಬುರಗಿಯಲ್ಲಿ ವಾಸ್ತವ್ಯ ಹೂಡಿರುವ ಸಿಎಂ ಡಿಕೆ ಶಿವಕುಮಾರ್‌ ಅವರು ಧ್ವಜಾರೋಹಣ ನಂತರ ಇದೇ ಮಾರ್ಗದ ಮೂಲಕ ಗಾಣಗಾಪೂರಕ್ಕೆ ತೆರಳುವುದಿತ್ತು. ಈ ಸಂದರ್ಭಲ್ಲೇ ಏಕಾಏಕಿ ಮೂರ್ತಿ ಸ್ಥಾಪನೆಯಾಗಿರೋದು ಜಿಲ್ಲಾಡಳಿತಕ್ಕೆ ಬಿಸಿತುಪ್ಪವಾಗಿತ್ತು.

ವಿಷಯ ಗೊತ್ತಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತವಾದ ಪಾಲಿಕೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹೋಗಿ ಸಿಎಂ ಡಿಕೆ ಶಿವಕುಮಾರ್‌ ಅವರು ಆ ಮಾರ್ಗವಾಗಿ ಗಾಣಗಾಪೂರಕ್ಕೆ ಹೋಗುವ ಪೂರ್ವದಲ್ಲೇ ಸ್ಥಾಪನೆ ಮಾಡಲಾಗಿದ್ದ ಸಿದ್ದರಾಮಯ್ಯನವರ ಪುತ್ಥಳಿಯನ್ನು ತೆರವುಗೊಳಿಸಿದ್ದಾರೆ.

ಯಾವುದೇ ತೆರನಾದ ಅನುಮತಿ ಪಡೆಯದೆ ಏಕಾಏಕಿ ಪುತ್ಥಳಿ ಸ್ಥಾಪನೆ ಮಾಡಿದ್ದರಿಂದ ಪಾಲಿಕೆ ಕಾರ್ಯಾಚರಣೆ ನಡೆಸಿ ಸದರಿ ಪುತ್ಥಳಿ ತೆರವು ಮಾಡಿರೋದಾಗಿ ಗೊತ್ತಾಗಿದೆ.

ಈ ಬೆಳವಣಿಗೆ ರಾಜಕೀಯವಾಗಿ ಸಾಕಷ್ಟು ಗಮನ ಸೆಳೆದಿದೆ. ಸಿಎಂ ಡಿಕೆ ಶಿವಕುಮಾರ್‌ ಅವರು ಕಲಬುರಗಿಯಲ್ಲಿರುವಾಗ, ಅದೂ ಅವರು ಸಾಗುವ ರಸ್ತೆಯಲ್ಲೇ ಇರುವ ಸರ್ಕಲ್‌ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ಥಳಿ ಸ್ಥಾಪನೆ ಮಾಡಿರೋದು ಸುದ್ದಿಗೆ ಗ್ರಾಸವಾಗಿದೆ. ಈ ಪ್ರತಿಮೆ ಸ್ಥಾಪನೆಯ ಹಿಂದೆ ಯಾರಿದ್ದಾರೆಂಬ ಬಗ್ಗೆ ನಿಖರ ಮಾಹಿತಿ ದೊರಕಿಲ್ಲ.

ಈ ಹಿಂದೆಯೂ ಈ ಕ್ರಾಸ್‌ನಲ್ಲಿ ಸಿದ್ದರಾಮಯ್ಯ ಸರ್ಕಲ್‌ ಎಂದು ಅಳವಡಿಸಿದ್ದ ಫ್ಲೆಕ್ಸ್‌ ಕೂಡಾ ಸುದ್ದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.