ಕಲ್ಯಾಣ ಕರ್ನಾಟಕದ ಇತಿಹಾಸ ಬದಲಿಸಲು ಕಾಂಗ್ರೆಸ್ ಪಕ್ಷ ರಕ್ತ- ಬೆವರು ಹರಿಸಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ಗುರುವಾರ ನಡೆದ 79ನೇ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕದ ಇತಿಹಾಸ ಬದಲಿಸಲು ಕಾಂಗ್ರೆಸ್ ಪಕ್ಷ ರಕ್ತ- ಬೆವರು ಹರಿಸಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ಗುರುವಾರ ನಡೆದ 79ನೇ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸತ್ಯಕ್ಕೆ ಸಮನಿಲ್ಲ. ಹಸ್ತಕ್ಕಿಂತ ಅಧಿಕ ಹಿತವಿಲ್ಲ. ಈ ಹಸ್ತದಿಂದಲೇ ದೇಶದ ಅಭಿವೃದ್ಧಿಯಾಗಿದೆ. ಕರ್ನಾಟಕದ ಅಭಿವೃದ್ಧಿಯಾಗಿದೆ. ಕಾಂಗ್ರೆಸ್‌ನಿಂದಲೇ ಕಲ್ಯಾಣ ನಾಡಿನ ಹಣೆ ಬರಹ ಬದಲಾಗುತ್ತಿದೆ ಎಂದು ಪ್ರತಿಪಾದಿಸಿದರು.ಕಲ್ಯಾಣ ಕರ್ನಾಟಕದ ಕಲ್ಯಾಣ ತಮ್ಮ ಸರ್ಕಾರದ ಆದ್ಯತೆ ಎಂದು ಹೇಳಿದ ಮುಖ್ಯಮಂತ್ರಿಗಳು, ಬೆಂಗಳೂರು ಕರ್ನಾಟಕದ ಕಿರೀಟ, ಕಲ್ಯಾಣ ಕರ್ನಾಟಕ ರಾಜ್ಯದ ಶಕ್ತಿಪೀಠ ಎಂದು ಬಣ್ಣಿಸಿದರು.
ಕಳೆದ 12 ವರ್ಷದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸುಮಾರು 25 ಸಾವಿರ ಕೋಟಿ ರುಗಳ ವಿಶೇಷ ಅನುದಾನ ನೀಡಲಾಗಿದೆ. ಕೊಪ್ಪಳದ ನವಲಿಯಲ್ಲಿ ತುಂಗಭದ್ರಾ ಆಣೆಕಟ್ಟೆಗೆ ಸಮತೋಲನ ಜಲಾಶಯ ನಿರ್ಮಿಸಲು ನಿರ್ಧರಿಸಲಾಗಿದೆ.ಇದಕ್ಕಾಗಿ ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ನೇತೃತ್ವದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ರಕ್ತ- ಬೆವರು ಹರಿಸಿದೆ: ಕಲ್ಯಾಣ ಕರ್ನಾಟಕದ ಇತಿಹಾಸ ಬದಲಾಯಿಸಲು ಕಾಂಗ್ರೆಸ್ ಪಕ್ಷ ರಕ್ತ, ಬೆವರು ಹರಿಸಿದೆ. ಕಲ್ಯಾಣ ಕರ್ನಾಟಕಕ್ಕೆ ವಿಮೋಚನೆ ದೊರೆತಿದ್ದು, ನಮ್ಮ ಕಾಂಗ್ರೆಸ್‌ನಿಂದ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಕಲ್ಯಾಣ ಕರ್ನಾಟಕಕ್ಕೆ ನಿಜಾಮರು ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ಆಗ ಕಾಂಗ್ರೆಸ್ ಹೋರಾಟದಿಂದ ಈ ಭಾಗಕ್ಕೆ ಸ್ವಾತಂತ್ರ ಬಂತು. ಸರ್ದಾರ್ ವಲ್ಲಭಭಾಯಿ ಪಟೇಲ್, ನೆಹರು ಅವರು ಕಲ್ಯಾಣ ಕರ್ನಾಟಕವನ್ನು ಕಾಪಾಡಿದರೆಂದು ಶಿವಕುಮಾರ್ ಇತಿಹಾಸದ ಘಟನಾವಳಿಗಳನ್ನು ಸ್ಮರಿಸಿದರು.ಧರಂಸಿಂಗ್ ವರದಿಯ ಆಧಾರದ ಮೇಲೆ 1990ರಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು.
ಕಲ್ಯಾಣಕ್ಕೆ 371 (ಜೆ) ಆರ್ಟಿಕಲ್ ರಕ್ಷೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ. ನಾವು ಮತಕ್ಕಾಗಿ ಅಲ್ಲ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಪ್ರಜಾಸೇವೆಯೇ ದೇವರ ಸೇವೆ. ಅದಕ್ಕಾಗಿ ಪ್ರಜಾ ಸೇವೆ ಇಲಾಖೆಯನ್ನೇ ಸ್ಥಾಪಿಸಿದ್ದೇವೆ. ಸರಕಾರವನ್ನೇ ನಿಮ್ಮ ಮನೆಬಾಗಿಲಿಗೆ ತಂದು ನಿಮ್ಮ ಸಮಸ್ಯೆ ಪರಿಹರಿಸುತ್ತಿದ್ದೇವೆ. ಪ್ರತಿ 2ನೇ ಹಾಗೂ 4ನೇ ಶನಿವಾರ ನಾನೂ ಸೇರಿದಂತೆ ನಮ್ಮ ಮಂತ್ರಿಗಳು, ಶಾಸಕರು ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಪ್ರಜಾಸೇವೆ ಅಭಿಯಾನ ಮಾಡುತ್ತಿದ್ದೇವೆಂದರು.ಬಸವಣ್ಣನವರ ಹೋರಾಟದ ನೆಲ, ಸಮಾನತೆ, ಮಾನವೀಯತೆ, ಸಹಬಾಳ್ವೆಯ ಸಂದೇಶ ನೀಡಿದ ಪುಣ್ಯಭೂಮಿ ಈ ಕಲ್ಯಾಣ ಕರ್ನಾಟಕ. ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ನೆಲ ಕಲ್ಯಾಣ ಕರ್ನಾಟಕ. ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರ ಶ್ರಮದಿಂದ ಕಲ್ಯಾಣವಾಗುತ್ತಿದೆ ಎಂದರು.
ಕಲ್ಯಾಣ ನಾಡಿನವರು ಉಪಕಾರ ಸ್ಮರಣೆ ಮಾಡುತ್ತೀರಿ ಎಂಬ ನಂಬಿಕೆ ಇದೆ. 2028ರಲ್ಲಿ ರಾಜ್ಯ ಚುನಾವಣೆಯಲ್ಲಿ ಈ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಕೈ ಹಿಡಿಯಿರಿ, ದೇಶದಲ್ಲಿಯೂ 2029ರಲ್ಲಿ ಬದಲಾವಣೆಗೆ ತಾವೆಲ್ಲರೂ ಸಾಕ್ಷಿಯಾಗಿರಿ ಎಂದು ಕಾಂಗ್ರೆಸ್‌ಗೆ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಖನೀಜ್ ಫಾತೀಮಾ, ಮೇಯರ್ ಅಜ್ಮಲ್ ಗೋಲಾ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ್, ಕುಡಾ ಅಧ್ಯಕ್ಷ ಮಜರ್ ಅಲಂ ಖಾನ್, ಡೀಸಿ ಇಕ್ರಂ ಶರೀಫ್, ಪೊಲೀಸ್ ಕಮೀಶ್ನರ್ ಡಾ. ಶರಣಪ್ಪ ಢಗೆ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಐಜಿಪಿ ಶಾಂತನು ಸಿನ್ಹಾ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಇದ್ದರು.
ಸಿಎಂ 9 ಹೊಸ ಘೋಷಣೆಗಳು1. ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್: ಕೈಗಾರಿಕಾ ಬೆಳವಣಿಗೆ, ಹೂಡಿಕೆಗೆ ವೇಗ ನೀಡಲು ಸೆಕ್ಷನ್ 8 ಕಂಪನಿಯಾಗಿ ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ ಸ್ಥಾಪಿಸಿ ಹೂಡಿಕೆಗಳನ್ನು ಆಕರ್ಷಿಸಿ ಹೊಸ ಆರ್ಥಿಕ ಅವಕಾಶಗಳ ಸೃಷ್ಟಿಗೆ ಒತ್ತು
2. ಜೈವಿಕ ಆರ್ಥಿಕ ಮಿಷನ್: ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ರೈತರ ಆದಾಯ ಹೆಚ್ಚಿಸಲು ಜೈವಿಕ ಆರ್ಥಿಕ ಮಿಷನ್ ಸ್ಥಾಪನೆ, ತೊಗರಿ ಬೇಳೆ, ಕಮಲಾಪುರ ಬಾಳೆಹಣ್ಣು, ಒಣದ್ರಾಕ್ಷಿ ಮತ್ತು ಸಿರಿಧಾನ್ಯಗಳು ಸೇರಿದಂತೆ ಈ ಪ್ರದೇಶದ ಪ್ರಮುಖ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ.3. ರಕ್ತಹೀನತೆ ವಿರುದ್ಧ ವಿಶೇಷ ಅಭಿಯಾನ: ಈ ಪ್ರದೇಶದಲ್ಲಿ ರಕ್ತಹೀನತೆಯ ಪ್ರಮಾಣವನ್ನು ಕಡಿಮೆ ಮಾಡಲು ಮುಂದಿನ 2 ವರ್ಷಗಳ ಕಾಲ ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ವಿಶೇಷ ಅಭಿಯಾನ.
4. ಕಲಬುರಗಿ ನಗರದ ಮೂಲಸೌಕರ್ಯ: ವೇಗವಾಗಿ ಬೆಳೆಯುತ್ತಿರುವ ಕಲಬುರಗಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಸೇಡಂ ರಸ್ತೆಯ ರಿಂಗ್ ರೋಡ್‌ನಲ್ಲಿ ಮೇಲ್ಸೇತುವೆ ನಿರ್ಮಾಣ, ಹೊಸ ಪೆರಿಫೆರಲ್ ರಿಂಗ್ ರೋಡ್ ಡಿಪಿಆರ್ ಸಿದ್ಧಪಡಿಸಲು ಕ್ರಮ, ₹30 ಕೋಟಿ ವೆಚ್ಚದಲ್ಲಿ ಹಸಿರು ಮತ್ತು ಸಾರ್ವಜನಿಕ ವಿಹಾರ ತಾಣವಾಗಿ ಅಪ್ಪನ ಕೆರೆ, ಉದ್ಯಾನ ಅಭಿವೃದ್ಧಿ.5. ನಿವೇಶನರಹಿತ ಕುಟುಂಬಗಳಿಗೆ 50,000 ನಿವೇಶನಗಳು.
6. ಕಲಬುರಗಿಯಲ್ಲಿ ಐಟಿ ಪಾರ್ಕ್ ಮತ್ತು KRIYA: ಐಟಿ ಮತ್ತು ನಾವೀನ್ಯತಾ ಕ್ಷೇತ್ರದ ಬೆಳವಣಿಗೆಯನ್ನು ಬೆಂಗಳೂರಿನಾಚೆಗೂ ವಿಸ್ತರಿಸಲು ಕಲಬುರಗಿಯಲ್ಲಿ 30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಅಭಿವೃದ್ಧಿ, ನಾವೀನ್ಯತೆ, ಸ್ಟಾರ್ಟ್‌ಅಪ್‌ಗಳು ಮತ್ತು ಯುವ ಉದ್ಯಮಿಗಳನ್ನು ಉತ್ತೇಜಿಸಲು KRIYA - Kalaburagi Research, Innovation and Youth Accelerator ಸ್ಥಾಪನೆ.7 . ಪ್ರವಾಸೋದ್ಯಮ ಮತ್ತು ಪಾರಂಪರಿಕ ತಾಣಗಳ ಅಭಿವೃದ್ಧಿ: ಕಲಬುರಗಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ್ ದರ್ಗಾ, ಬುದ್ಧ ವಿಹಾರ, ಮಳಖೇಡ, ಸನ್ನತಿ ಮತ್ತು ಗಾಣಗಾಪುರವನ್ನು ಸಂಪರ್ಕಿಸುವ ಪುಣ್ಯ ಯಾತ್ರಾ ಸರ್ಕ್ಯೂಟ್ ಅಭಿವೃದ್ಧಿ. ಕೆಕೆಆರ್‌ಡಿಬಿ ಅನುದಾನದಲ್ಲಿ ಮಳಖೇಡ, ನಾಗಾವಿ, ಕಾಳಗಿ ಮತ್ತು ಸನ್ನತಿಯ ಪಾರಂಪರಿಕ ತಾಣಗಳ ಪುನರಾಭಿವೃದ್ಧಿ. ಗಾಣಗಾಪುರದಲ್ಲಿ ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಯೋಜನೆ, ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪನೆ.
8. ಕ್ರೀಡಾ ಮೂಲಸೌಕರ್ಯ: ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಆಧುನಿಕ ಕ್ರೀಡಾ ಮೂಲಸೌಕರ್ಯದೊಂದಿಗೆ ಸಮಗ್ರ ಪುನರಾಭಿವೃದ್ಧಿ ಕ್ರಿಕೆಟ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕೆಎಸ್‌ಸಿಎ ಜೊತೆ ಒಡಂಬಡಿಕೆ, ಹಡಗಿಲ ಹಾರುತಿ ಗ್ರಾಮದಲ್ಲಿ “ಸ್ಪೋಟ್ಸ್ ಸಿಟಿ” ಸ್ಥಾಪನೆ.9. ಕೋಟಿ ವೃಕ್ಷ ಅಭಿಯಾನ: ಹಸಿರು ಹೊದಿಕೆಯನ್ನು ಹೆಚ್ಚಿಸಲು ಮುಂದಿನ ಎರಡು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಕೋಟಿ ವೃಕ್ಷ ಅಭಿಯಾನ