ಮಾ. 3ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ । ಜಿಲ್ಲಾಡಳಿತ ಭವನದಲ್ಲಿ ಟಾಸ್ಕ್ ಪೋರ್ಸ್ ಸಭೆ
ನವಜಾತ ಶಿಶುವಿನಿಂದ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಪಲ್ಸ್ ಪೋಲಿಯೋ ಕಾರ್ಯಕ್ರಮವು ಮಾ.೩ರಂದು ಆರಂಭವಾಗಲಿದ್ದು, ಈ ಸಂಬಂಧ ತಾಲೂಕು ಮಟ್ಟದ ಸಂಬಂಧಪಟ್ಟ ಅಧಿಕಾರಿಗಳು ಸೇರಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದ ಅಂಗವಾಗಿ ನಡೆದ ತಾಲೂಕುಮಟ್ಟದ ಟಾಸ್ಕ್‌ಪೋರ್ಸ್ ಸಭೆಯ ಆಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚಾಮರಾಜನಗರ ತಾಲೂಕಿನಲ್ಲಿ ಈ ಬಾರಿ ಪೋಲಿಯೋ ಲಸಿಕೆಗೆ ೨೦ ಸಾವಿರಕ್ಕೂ ಹೆಚ್ಚಿನ ಮಕ್ಕಳ ಗುರಿ ಹೊಂದಲಾಗಿದ್ದು, ಪಟ್ಟಣ ಪ್ರದೇಶದಲ್ಲಿ ೩೯ ಹಾಗೂ ಗ್ರಾಮೀಣ ಭಾಗದಲ್ಲಿ ೧೫೦ ಸೇರಿ ಒಟ್ಟು ೧೮೯ ಬೂತ್‌ಗಳನ್ನು ತೆರೆಯಲಾಗುವುದು. ನಿರ್ವಹಣೆಗಾಗಿ ೪೧ ಮೇಲ್ವಿಚಾರಕರು, ೭೭೯ ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ತಾಲೂಕಿನಲ್ಲಿ ೭ ಟ್ರಾನ್ಸಿಟ್ ಬೂತ್ ಹಾಗೂ ಒಂದು ಸಂಚಾರಿ ಬೂತ್ ಕಾರ್ಯನಿರ್ವಹಿಸಲಿದ್ದು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಶೇ. ೧೦೦ರಷ್ಟು ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಮತ್ತು ಜನನಿಬಿಡ ಸ್ಥಳಗಳಲ್ಲಿ ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿದ್ದು, ಪ್ರತಿ ಬಸ್ಸುಗಳನ್ನು ನಿಲ್ಲಿಸಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಪೊಲೀಸ್ ಪೇದೆಗಳನ್ನು ನಿಯೋಜಿಸಬೇಕು. ಅವಶ್ಯವಿರುವ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಪೊಲಿಯೋ ಲಸಿಕೆ ಹಾಕಲು ಸ್ಥಳಾವಕಾಶ ನೀಡಬೇಕು. ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಲಸಿಕೆಯ ಬಗ್ಗೆ ಮಕ್ಕಳಿಗೆ ಅರಿವು ಹಾಗೂ ಜಾಗೃತಿ ಜಾಥಾ ಏರ್ಪಡಿಸಬೇಕು ಎಂದು ತಿಳಿಸಿದರು.
ಚಂದಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ನಂದಿನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಮಹಿಳಾ ಮೇಲ್ವಿಚಾರಕಿ ಶಿವಲೀಲಾ ಬೆಟಗೇರಿ, ನಗರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ್ ಸೇರಿ ತಾಲೂಕುಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
25ಸಿಎಚ್ಎನ್12