ಡಂಬಳ:ಅನ್ನನೀಡುವ ಅನ್ನದಾತರು ಮಾಡುವ ಅತ್ಯಂತ ಶ್ರೇಷ್ಠ ಕಾಯಕವೆಂದರೆ ಕೃಷಿ ಕಾಯಕವಾಗಿದೆ. ಕೃಷಿ ಕಾಯಕ ಮಾಡುವವರ ತನು ಮನ ಭಾವನೆಗಳು ಶುದ್ಧವಾಗಿರುತ್ತವೆ. ಹಾಗಾಗಿ ಅವರು ಶ್ರೇಷ್ಠ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಡಂಬಳ ಗ್ರಾಮದ ಆರಾಧ್ಯ ದೇವ ಜಗದ್ಗುರು ತೋಂಟದ ಮದರ್ಧನಾರೀಶ್ವರರ 284ನೇ ಜಾತ್ರಾಮಹೋತ್ಸವದಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಬಳಿಕ ನಡೆದ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದರು.ಸತ್ಯ ಶುದ್ಧವಾಗಿರುವ ರೀತಿಯಲ್ಲಿ ಕಾಯಕ ಮಾಡಿದಾಗ ಮಾತ್ರ ಅವರ ಬದುಕು ಉತ್ತಮವಾಗಿರುತ್ತದೆ. ಆ ಹಿನ್ನೆಲೆಯಲ್ಲಿ ನಮ್ಮ ಗುರುಗಳಾದ ಲಿಂ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ತಾವೇ ಸ್ವತಃ ಕೃಷಿಯಲ್ಲಿ ತೊಡಗಿಸಿಕೊಂಡು ಈ ಭಾಗದಲ್ಲಿ ಕೃಷಿ, ತೋಟಗಾರಿಕೆಗೆ ಆದ್ಯತೆ ನೀಡುವುದರ ಈ ಭಾಗದ ಜನರಿಗೆ ಪ್ರೇರಣೆಯಾದರು ಎಂದರು. ಹೈದರಾಬಾದ ಸಿಂಹಾಸನರೂಢ ಮಹಾಸ್ವಾಮಿಗಳು ಮಾತನಾಡಿ, ರಥೋತ್ಸವ ಒಗ್ಗಟ್ಟಿಗೆ ಕಾರಣವಾದರೆ, ಜಾತ್ರಾಮಹೋತ್ಸವಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಶರಣರ ಗುರುಹಿರಿಯರ ಮಾತುಗಳನ್ನು ಆಲಿಸಿದಾಗ ನಾವು ಸದ್ವಿಚಾರಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕೆಆರ್‌ಡಿಸಿಎಲ್ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ್ ಮಾತನಾಡಿ, ಮುಂದಿನ ದಿನಮಾನಗಳಲ್ಲಿ ಈ ಭಾಗದಲ್ಲಿರುವ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಲಿಂ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಈ ಮಠಕ್ಕೆ ಶ್ರೀಗಳಾಗಿ ಬಂದಾಗ ಮಠ ಬಹಳ ತೋಂದರೆಯಲ್ಲಿತ್ತು. ಶ್ರೀಗಳು ಮಠದ ಜಮೀನಿನಲ್ಲಿ ತಾವೇ ಸ್ವತಃ ಬಾವಿಯನ್ನು ತೆಗೆದು, ದಾಳಿಂಬೆ, ಮಾವು, ಬಾರಿಹಣ್ಣು ಗಿಡಗಳನ್ನು ಬೆಳೆದರು. ಈ ಭಾಗದ ನೂರಾರು ಕೂಲಿಕಾರ್ಮಿಕರಿಗೆ ಕೆಲಸ ಒದಗಿಸುವುದರ ಮೂಲಕ ಕೃಷಿಕರಿಗೆ ಪ್ರೇರಣೆಯಾದರು ಎಂದರು.ಡೋಣಿ ತಾಂಡದ ಲಂಬಾಣಿಗರಿಂದ ಲಂಬಾಣಿ ಪದಗಳು, ವಿದ್ಯಾರ್ಥಿನಿಯರಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ್, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಬಸವಂತಪ್ಪ ಪಟ್ಟಣಶೆಟ್ಟರ, ಶಂಕರಗೌಡ ಜಾಯನಗೌಡರ, ಜಾತ್ರಾ ಸಮಿತಿ ಅಧ್ಯಕ್ಷ ಬಸುರಾಜ ಹಮ್ಮಿಗಿ, ಉಪಾಧ್ಯಕ್ಷ ಭೀಮಪ್ಪ ಗದಗಿನ, ಕಾರ್ಯದರ್ಶಿ ಅಶೋಕ ಮಾನೆ, ಖಜಾಂಚಿ ಮಲ್ಲಣ್ಣ ರೇವಡಿ, ಜಾತ್ರಾ ಸಮಿತಿಯ ಸದಸ್ಯರು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇದ್ದರು.