ಹೊಸಪೇಟೆ: ಜಿಲ್ಲಾದ್ಯಂತ ಡಿ. 21ರಿಂದ 24ರ ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಆಯೋಜಿಸಿದ್ದು, ಐದು ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನಿಗಾ ವಹಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ಪೊಲೀಯೋ ಮುಕ್ತ ಭಾರತ ನಿರ್ಮಾಣಕ್ಕೆ ಸರ್ಕಾರಗಳು ಹೆಚ್ಚಿನ ಉತ್ತೇಜನ ನೀಡಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ದೇಶದಲ್ಲಿ ಪ್ರಕರಣಗಳು ದಾಖಲಾಗದಿರುವುದು ಹೆಮ್ಮೆಯ ವಿಷಯ. ಆದರೂ ನೆರೆಯ ದೇಶಗಳಲ್ಲಿ ಪೊಲೀಯೋ ಹಾವಳಿ ಇರುವುದರಿಂದ ನಮ್ಮಲ್ಲಿ ನಿರ್ಲಕ್ಷ್ಯ ಸಲ್ಲದು. ವಿವಿಧ ಇಲಾಖೆಗಳ ಸಹಕಾರ ತೆಗೆದುಕೊಂಡು ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಬಗ್ಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಲಸಿಕೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಆರೋಗ್ಯ ಇಲಾಖೆ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಯಶಸ್ವಿಗೊಳಿಸಬೇಕು.ಎಲ್ಲ ಶಾಲೆಗಳಲ್ಲಿ ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳಿಗೆ ಪೊಲೀಯೋ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ. ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಧ್ವನಿ ಮುದ್ರಿಕೆ ಮೂಲಕ ವ್ಯಾಪಕ ಪ್ರಚಾರ ನೀಡಬೇಕು. ಡಿ. 21ರಂದು ಗರಿಷ್ಟ ಪ್ರಮಾಣದ ಗುರಿ ಸಾಧಿಸಬೇಕು. 24ರೊಳಗೆ ಸಂಪೂರ್ಣ ಗುರಿ ಸಾಧಿಸಲು ಅಗತ್ಯ ಕ್ರಮವಹಿಸಬೇಕು. ಕಾರ್ಯಕ್ರಮಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ವಾಹನಗಳ ಪೂರೈಕೆ ಮಾಡಬೇಕು. ಅಧಿಕಾರಿಗಳು ವಿವಿಧ ಇಲಾಖೆಗಳ ಮತ್ತು ಸಂಘ ಸಂಸ್ಥೆಗಳ ಸಹಕಾರ ತೆಗೆದುಕೊಂಡು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಶೇ. 100ಕ್ಕೆ 100ರಷ್ಟು ಪ್ರಗತಿ ಸಾಧಿಸಬೇಕು ಎಂದರು.
ಈ ವೇಳೆ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಬಿ. ಜಂಬಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖ ನಾಯ್ಕ, ಜಿಲ್ಲಾ ವೈದ್ಯಾಧಿಕಾರಿ ಡಾ. ಭಾಸ್ಕರ್, ಡಾ. ರಾಧಿಕಾ ಸೇರಿದಂತೆ ತಾಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.