ಕನ್ನಡಪ್ರಭ ವಾರ್ತೆ, ಶಿಕಾರಿಪುರ
ರಾಜಕೀಯ ಪಕ್ಷಗಳು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಬಾರದು. ಕ್ರೀಡೆ, ಸಾಂಸ್ಕೃತಿಕ ಕಾರ್ಯಗಳಿಗೆ ಕಾರ್ಯಕರ್ತರು ಹೆಚ್ಚಿನ ಉತ್ತೇಜನ ನೀಡುವ ಮೂಲಕ ನಾಡಿಗೆ ಕೀರ್ತಿ ತರುವಂತಹ ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಪಟ್ಟಣದ ದಿ. ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಭಾನುವಾರ ಸಂಜೆ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ರವರ ಹುಟ್ಟುಹಬ್ಬ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಹಾಗೂ ವಿಜಯೇಂದ್ರ ಅಭಿಮಾನಿ ಬಳಗ ವತಿಯಿಂದ ಆಯೋಜಿಸಲಾದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ದಿಸೆಯಲ್ಲಿ ಸ್ವಾತಂತ್ರ್ಯ ದೊರೆತ 75 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಒಲಂಪಿಕ್ ಕ್ರೀಡೆಯಲ್ಲಿ 108 ಪದಕ ಗಳಿಸಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮೆರೆದಿದೆ. ಕೇವಲ ಜನಸಂಖ್ಯೆಯಲ್ಲಿ ಹೆಚ್ಚಾಗಿದ್ದ ಭಾರತ ಇದೀಗ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮೂಲಕ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೈಗೊಂಡ ಏತ ನೀರಾವರಿ ಯೋಜನೆಯಿಂದಾಗಿ ಬರಗಾಲದಲ್ಲಿಯೂ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಪುರದಕೆರೆಯಿಂದ ತಾಲೂಕಿನ ಕೆರೆಗೆ ನೀರು ತುಂಬಿಸುವ ಕಾರ್ಯದಿಂದಾಗಿ ಈಗಾಗಲೇ 200ಕ್ಕೂ ಹೆಚ್ಚು ಕೆರೆಗೆ ನೀರು ತುಂಬಿಸಲಾಗಿದೆ. 500 ಎಚ್‌ಪಿ ಮೋಟಾರ್‌ನಿಂದ ನಿತ್ಯ ನೀರನ್ನು ತುಂಬಿಸಲಾಗುತ್ತಿದ್ದು, ಮಳೆಯ ಅಭಾವದಿಂದ ಕೆಲವು ದಿನದಿಂದ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ ಎಂದು ತಿಳಿಸಿದರು.
ಮಹಿಳೆ ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಆರಂಭಿಸಲಾದ ನೂತನ ಮಹಿಳಾ ಮಕ್ಕಳ ಆಸ್ಪತ್ರೆಯಲ್ಲಿ ಶಾಸಕರ ಹುಟ್ಟುಹಬ್ಬದ ಅಂಗವಾಗಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ನೇತೃತ್ವದಲ್ಲಿ ಹಣ್ಣು ವಿತರಿಸಲಾಗಿದೆ. ದೇವಸ್ಥಾನ ರೀತಿಯಲ್ಲಿಯೇ ಮಹಿಳಾ ಮಕ್ಕಳ ಆಸ್ಪತ್ರೆ ಪರಿಗಣಿಸಲಾಗುತ್ತಿದೆ. ನಿತ್ಯ ಮಹಿಳೆಯರು ಮಕ್ಕಳಿಗೆ ಉತ್ತಮ ಚಿಕಿತ್ಸೆ ದೊರಕಿಸಲು ಆರಂಭಿಸಲಾದ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ತೆರಳಲು ಹುಟ್ಟುಹಬ್ಬದ ಜ್ಞಾಪಕಾರ್ಥವಾಗಿ ಶಾಸಕರ ಹೆಸರಿನಲ್ಲಿ ಬಸ್ ಬೆಳಗಿನಿಂದ ಸಂಜೆವರೆಗೆ ಸಂಚರಿಸುವ ಮೂಲಕ ಶೀಘ್ರದಲ್ಲಿಯೇ ಅನುಕೂಲ ಕಲ್ಪಿಸಲಾಗುವುದು ಎಂದರು.ತಾಲೂಕಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈಯಲು ಸಹಕಾರಿ ಆಗುವಂತೆ ಉತ್ತೇಜನ ನೀಡಲು ಯುವ ಮೋರ್ಚಾ ಸಿದ್ಧವಾಗಿರಬೇಕು. ರಾಜಕೀಯ ಪಕ್ಷ ಕೇವಲ ಚುನಾವಣೆಗೆ ಮಾತ್ರ ಸೀಮಿತ ಆಗಬಾರದು. ಕ್ರೀಡೆ, ಸಾಂಸ್ಕೃತಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ತಾಲೂಕಿನ ತಿಮ್ಲಾಪುರದ ಹೆಸರಾಂತ ಡೊಳ್ಳು ಕಲಾವಿದರ ತಂಡಕ್ಕೆ ಪ್ರದರ್ಶನ ನೀಡಲು ಶಿವಮೊಗ್ಗ ಹಾಗೂ ಮೈಸೂರು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಅವಕಾಶ ಕಲ್ಪಿಸಲಾಗಿದೆ. ಕಲಾವಿದರಿಗೆ ಅವಕಾಶ ದೊರಕಿಸುವುದು ಕರ್ತವ್ಯವಾಗಿದೆ. ದೆಹಲಿಯಲ್ಲಿ ಜಿ.20 ಸಭೆ ಆರಂಭದ ಮುನ್ನಾ 8 ಸಾವಿರ ಪ್ರೇಕ್ಷಕರು ಆಸೀನರಾಗಲು ನಿರ್ಮಿಸಲಾದ ನೂತನ ಒಳಾಂಗಣ ಕ್ರೀಡಾಂಗಣದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದೇಶದ ಹೆಸರಾಂತ ಕೈಗಾರಿಕೋಧ್ಯಮಿಗಳು,ಕಲಾವಿದರು, ರಾಜಕಾರಣಿಗಳು ಪಾಲ್ಗೊಂಡಿದ್ದು. ಈ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಗರ ತಾಲೂಕಿನ ಮಹಿಳಾ ಡೊಳ್ಳು ತಂಡ ದೊರೆತ ಅವಕಾಶದಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿನ ಕಾರ್ಯಕ್ಷಮತೆಗೆ ಡೊಳ್ಳು ತಂಡ ಪ್ರತ್ಯಕ್ಷ ಸಾಕ್ಷಿಯಾಗಿತ್ತು ಎಂದರು.ವೇದಿಕೆಯಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಮುಖಂಡ ಎಚ್.ಟಿ. ಬಳಿಗಾರ್, ಚನ್ನವೀರಪ್ಪ, ವಸಂತಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಹನುಮಂತಪ್ಪ ಸಂಕ್ಲಾಪುರ, ಯುವ ಮೋರ್ಚಾ ಅಧ್ಯಕ್ಷ ಶಿವರಾಜ್, ಕನ್ನಡ ಯುವಕ ಸಂಘದ ಅಧ್ಯಕ್ಷ ರಾಜು, ಸುಧೀರ ಮಾರವಳ್ಳಿ, ರಾಜಶೇಖರ ಗೌಡ, ಗಿರೀಶ ಧಾರವಾಡದ ಮತ್ತಿತರರು ಉಪಸ್ಥಿತರಿದ್ದರು.
- - -ಕೋಟ್ ರಾಜಕೀಯ ಪಕ್ಷ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವುದು ಮಾತ್ರವಲ್ಲದೇ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಈ ದಿಸೆಯಲ್ಲಿ ಶಾಸಕ ವಿಜಯೇಂದ್ರ ಹುಟ್ಟುಹಬ್ಬದ ಸಂದರ್ಭದಲ್ಲಿ ವಾಲಿಬಾಲ್ ಕ್ರೀಡೆ ಆಯೋಜಿಸುವ ಮೂಲಕ ಯುವ ಮೋರ್ಚಾ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಉತ್ತಮ ಕಾರ್ಯವನ್ನು ಕೈಗೊಂಡಿದೆ
- ಬಿ.ವೈ.ರಾಘವೇಂದ್ರ, ಸಂಸದ- - - -5ಕೆಎಸ್.ಕೆಪಿ2:
ಶಿಕಾರಿಪುರದ ನರಸಪ್ಪ ಸ್ಮಾರಕ ರಂಗಮಂದಿರದಲ್ಲಿ ಭಾನುವಾರ ಸಂಜೆ ಕ್ಷೇತ್ರದ ಶಾಸಕ ವಿಜಯೇಂದ್ರ ಹುಟ್ಟುಹಬ್ಬದ ಅಂಗವಾಗಿ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಸಂಸದ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.