ಜಿಲ್ಲೆಯಲ್ಲಿ ಚೈತನ್ಯಹೀನವಾದ ರಾಜಕೀಯ ಪಕ್ಷಗಳು

KannadaprabhaNewsNetwork |  
Published : Sep 28, 2026, 01:15 AM IST
 | Kannada Prabha

ಸಾರಾಂಶ

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲಾ ಘಟಕಗಳು ಇವ್ಯಾವುದನ್ನೂ ಮಾಡದೇ ಇರುವುದು ಮೂರು ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರಲ್ಲಿ ಅಸಮಾಧಾನವನ್ನು ಉಂಟುಮಾಡುತ್ತಿದೆ

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲಾ ಸಮಿತಿಗಳಲ್ಲಿ ರಾಜಕೀಯ ಚಟುವಟಿಕೆಗಳು ಮೂಲೆ ಗುಂಪು ಸೇರಿದ್ದು,ಇದರಿಂದಾಗಿ ಕೇಂದ್ರ (ಮೈತ್ರಿ) ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳು ಜಿಲ್ಲೆಯಲ್ಲಿ ಚೈತನ್ಯ ಕಳೆದುಕೊಂಡಂತಾಗಿದೆ.

ರಾಜಕೀಯ ಪಕ್ಷಗಳು ಎಂದರೆ ಸದಾ ಕಾರ್ಯೋನ್ಮುಖವಾಗಿರಬೇಕು, ಹೊಸಬರ ಸೇರ್ಪಡೆ, ವಿವಿಧ ತಾಲೂಕು, ಸಮಿತಿಗಳ ರಚನೆ, ಸಭೆ, ಸಮಾರಂಭಗಳು, ಚುನಾವಣಾ ಪೂರ್ವ ಸಿದ್ಧತೆಗಳಿಗೆ ಅಣಿಯಾಗುವುದು, ಎಲ್ಲ ಹಂತದ ಕಾರ್ಯಕರ್ತರನ್ನು ಪರಿಗಣಿಸಿ ಅವರಿಗೆ ಅಗತ್ಯಕ್ಕೆ ತಕ್ಕಂತೆ ಜವಾಬ್ದಾರಿಗಳನ್ನು ವಹಿಸಿಕೊಡಬೇಕು ಆದರೆ ಜಿಲ್ಲೆಯಲ್ಲಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲಾ ಘಟಕಗಳು ಇವ್ಯಾವುದನ್ನೂ ಮಾಡದೇ ಇರುವುದು ಮೂರು ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರಲ್ಲಿ ಅಸಮಾಧಾನವನ್ನು ಉಂಟುಮಾಡುತ್ತಿದೆ.

ಚುನಾವಣೆಗಳ ಪರ್ವ; ಸಿದ್ಧತೆಗಳು ಗೌಣ: ಪ್ರಸಕ್ತ ಸಾಲಿನ ಕೊನೆಯಲ್ಲಿ ಚುನಾವಣೆಗಳ ಪರ್ವ ಶುರುವಾಗಲಿವೆ. ಅದರ ಭಾಗವಾಗಿಯೇ ಈಗಾಗಲೇ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಘೋಷಣೆಗೊಂಡಿದ್ದು, ತದನಂತರ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳು ಘೋಷಣೆ ಆಗುವ ಸಾಧ್ಯತೆ ಗಳಿದ್ದು, ಇದರೊಟ್ಟಿಗೆ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಸಹ ಎದುರಿಸ ಬೇಕಾಗಿದ್ದರಿಂದ ರಾಜಕೀಯ ಪಕ್ಷಗಳು ಈಗಲಿಂದಲೇ ಎಚ್ಚೆತ್ತುಕೊಂಡು ಅಗತ್ಯವಾದ ಸಿದ್ಧತೆ ನಡೆಸಲು ಕ್ರಮವಹಿಸಬೇಕು ಆದರೆ ಜಿಲ್ಲೆಯ ರಾಜಕೀಯ ಪಕ್ಷಗಳು ಮಾತ್ರ ಗೌಣ ವಹಿಸಿರುವುದು ಕಾರ್ಯಕರ್ತರಲ್ಲಿ ಬೇಸರ ತರಿಸಿದೆ.

ಆಂತರಿಕ ಸಮಸ್ಯೆಗಳು-ಸವಾಲುಗಳು: ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲಾ ಸಮಿತಿಗಳು ತಮ್ಮದೇ ಆದಂತಹ ಆಂತರಿಕ ಸಮಸ್ಯೆಗಳಿಂದ ಬಳಲುತ್ತಿವೆ. ಇದರಿಂದಾಗಿಯೇ ಪಕ್ಷಗಳ ಸಂಘಟನೆಗೆ ಹಿನ್ನಡೆ ಉಂಟಾಗಿದೆ. ಅದಕ್ಕಾಗಿಯೇ ಪಕ್ಷಗಳನ್ನು ತಳಮಟ್ಟದಿಂದ ಸಂಘಟಿಸುವುದು, ಕಾರ್ಯಕರ್ತರನ್ನು ಒಗ್ಗೂಡಿ ಸುವುದು, ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವುದು, ಹಳೆ ಕಾರ್ಯಕರ್ತರಿಗೆ, ಮುಖಂಡರು, ಹಾಗೂ ಪದಾಧಿಕಾರಿಗಳಿಗೆ ಹೊಸ ಹೊಸ ಜವಾಬ್ದಾರಿ ಗಳನ್ನು ನೀಡುವುದು‌ ಸೇರಿ ಹತ್ತು ಹಲವು ಬಗೆಯ ಕೆಲಸಗಳು ಮಾಡದೇ ದೂರ ಉಳಿದಿದ್ದು, ಮಹತ್ತರವಾದ ಜವಾಬ್ದಾರಿಯನ್ನು ಹೊಂದಿರುವಂತಹ ಜಿಲ್ಲಾ ಘಟಕ ಗಳು ತಾವುಗಳು ಹೊಂದಿರುವ ಜವಾಬ್ದಾರಿಯನ್ನು ಮರೆತಂತೆ ವರ್ತಿಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತರುವುದರಿಂದಲೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನೊಂದುಕೊಳ್ಳುವಂತೆ ಮಾಡುತ್ತಿದೆ.

ಡಿಸಿಸಿ ಅಧ್ಯಕ್ಷರ ಮುಂದೆ ಸವಾಲುಗಳ ಸಾಲು: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹೊಸದಾಗಿ ಆಯ್ಕೆಯಾಗಿರುವ ಕೆ.ಶಾಂತಪ್ಪ ಅವರ ಮುಂದೆ ಸಾಲು ಸಾಲು ಸವಾಲುಗಳಿವೆ. ಡಿಸಿಸಿಯಲ್ಲಿ ದಶಕಗಳಿಂದ ಬೇರು ಬಿಟ್ಟಿರುವ ಗುಂಪುಗಾರಿಕೆಯನ್ನು ಕರಗಿಸುವ ಕಷ್ಟಕರ ಕಾರ್ಯ ಇವರ ಹೆಗಲೇರಿದೆ.

ಇತ್ತೀಚೆಗಷ್ಟೇ ಡಿಸಿಸಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವಂತಹ ಕೆ.ಶಾಂತಪ್ಪ ಅವರು ಎಲ್ಲರನ್ನು ಬೆರಗಾಗಿಸುವಂತೆ ಪದಗ್ರಹಣ ಸಮಾರಂಭವನ್ನು ಆಯೋಜಿಸಿ ಒಂದು ಹೊಸ ಭರವಸೆಯನ್ನು ಉಂಟುಮಾಡಿದ್ದಾರೆ. ಆದರೆ ವಾಸ್ತವದಲ್ಲಿ ಡಿಸಿಸಿಯಲ್ಲಿ ಹಲವು ವರ್ಷಗಳಿಂದ ಬೇರು ಬಿಟ್ಟಿರುವಂತಹ ಗುಂಪು ಸಂಘರ್ಷ, ಆಂತರಿಕ ಕಲಹ ಹಾಗೂ ಒಬ್ಬರನ್ನು ಕಂಡರೆ ಮತ್ತೊಬ್ಬರು ಆಗದಂತಹ ಸನ್ನಿವೇಶದಿಂದ ಹೊರಬಂದು ಭವಿಷ್ಯದ ಚುನಾವಣೆಗಳನ್ನು ಎದುರಿಸುವುದು, ಕಾರ್ಯಕರ್ತರಿಗೆ ಜವಾಬ್ದಾರಿಗಳನ್ನು ವಹಿಸುವುದು, ಉನ್ನತ ಮಟ್ಟದ ಸ್ಥಾನಮಾನ ನೀಡುವುದು ಮತ್ತು ಗುಂಪುಗಳ ಮುಖಂಡರನ್ನು ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಸಮಿತಿಯನ್ನು ಮುಂದು ಒರೆಸಿಕೊಂಡು ಹೋಗುವುದಂತಹ ದೊಡ್ಡ ದೊಡ್ಡ ಸವಾಲುಗಳು ಹೊಸ ಅಧ್ಯಕ್ಷರು ಎದುರಿಸಬೇಕಾಗಿದ್ದು, ಪದಗ್ರಹಣ ಸಮಾರಂಭದಲ್ಲಿ ಎಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸಿದ್ದರು ಸಜ ವಾಸ್ತವಿಕವಾಗಿ ಅದರ ಆಚರಣೆಯು ಸವಾಲಾಗಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲಿ ಭವಿಷ್ಯದ ಚುನಾವಣೆಗಳನ್ನು ಯಾವ ರೀತಿ ಎದುರಿಸಬೇಕಪ್ಪ ಎನ್ನುವಂತಹ ಆತಂಕವು ಉಂಟಾಗಿದೆ.

ಅಲ್ಲಿದೆ ನಮ್ಮ ಮನೆ ಅಧ್ಯಕ್ಷನಾದೆ ಸುಮ್ಮನೆ: ಇನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇನಗೌಡ ಪಾಟೀಲ್ ಲೆಕ್ಕಿಹಾಳ ಅವರ ಪರಿಸ್ಥಿತಿಯಂತೂ ಹೇಳತೀರದಾಗಿದೆ.ಮೂಲತಹ ಲಿಂಗಸುಗುರು ತಾಲೂಕಿನವರಾಗಿದ್ದರಿಂದ, ಜಿಲ್ಲಾ ಕೇಂದ್ರವಾದ ರಾಯಚೂರು ನಲ್ಲಿ ಇರದ ಕಾರಣಕ್ಕೆ ಬಿಜೆಪಿಯ ಸಂಘಟನೆಗೆ ಹಿನ್ನಡೆಯಾಗುತಿದೆ, ಆಗೊಮ್ಮೆ ಈಗೊಮ್ಮೆ ಪತ್ರಿಕಾ ಗೋಷ್ಠಿಗಳನ್ನು ನಡೆಸಿ ಚೀರಾಟ-ಹಾರಾಟ, ಕೂಗಾಟದಲ್ಲಿಯೇ ತಾವು ಅಧ್ಯಕ್ಷರು ಎಂದು ಬಿಂಬಿಸಿಕೊಳ್ಳುವುದು ಬಿಟ್ಟರೇ ಯಾವುದೇ ಕೆಲಸ ಕಾರ್ಯ ಮಾಡಿದ ಉದಾಹಾರಣೆಗಳು ಇಲ್ಲ ಎಂದು ಖುದ್ದು ಬಿಜೆಪಿಗರೇ ಮಾತನಾಡಿಕೊಳ್ಳುತ್ತಿದ್ದಾರೆ.

ಸಂಘಟನೆ, ವಿವಿಧ ಮೋರ್ಚೆಗಳ ಪ್ರಮುಖರನ್ನು ಪರಿಗಣಿಸಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವುದನ್ನೇ ಮರೆತು ಹೋಗಿರುವ ಅವರು ಇತ್ತೀಚಿಗೆ ಲಿಂಸುಗೂರಿನಿಂದ ಆರಂಭ ಕಂಡಿದ್ದ ಬಿಜೆಪಿ ಬಳ್ಳಾರಿ ಚಲೋ ಐತಿಹಾಸಿಕ ಪಾದಯಾತ್ರೆ ಉದ್ಘಾಟನೆ ಸಮಾರಂಭದ ಆಯೋಜನೆ ವಿಚಾರದಲ್ಲಿ ತಮ್ಮ ಗಮನಕ್ಕೆ ಇಲ್ಲದಂತೆ ವರ್ತಿಸಿದ್ದು, ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಗುರಿಯಾಗಿಸಿದ್ದು, ಅವರು ಪಕ್ಷವನ್ನು ಸಂಘಟಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವುದರಿಂದಲೆಯೇ ಅಲ್ಲಿದೆ ನಮ್ಮ ಮನೆ ಅಧ್ಯಕ್ಷನಾದೆ ಸುಮ್ಮನ್ನೆ ಅವರ ಬಗ್ಗೆ ಅದೇ ಪಕ್ಷದವರೇ ಲೇವಡಿ ಮಾಡುತ್ತಿದ್ದಾರೆ.

ಜಿಡ್ಡುಗಟ್ಟಿದ ಜೆಡಿಎಸ್ : ಜಿಲ್ಲೆಯಲ್ಲಿ ಜೆಡಿಎಸ್ ಜಿಡ್ಡುಗಟ್ಟಿ ಹೋಗಿದೆ. ಪಕ್ಷದಲ್ಲಿ ಯಾರಿದ್ದಾರೆ? ಯಾರಿಲ್ಲ? ಇರುವವರು ಯಾವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಎನ್ನುವ ಸ್ಪಷ್ಟತೆ ಇಲ್ಲದಾಗಿದೆ.ಹಲವು ದಶಕಗಳಿಂದ ಜಿಲ್ಲಾ ಅಧ್ಯಕ್ಷರ ಬದಲಾಗದ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಅವರ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದು, ಹೊಸ ಅಧ್ಯಕ್ಷರ ಆಯ್ಕೆಯು ಪಕ್ಷದ ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ.

ಒಟ್ಟಾರೆ ಜಿಲ್ಲೆಯ ಮೂರು ರಾಜಕೀಯ ಪಕ್ಷಗಳು ತಮ್ಮದೇ ಆಂತರಿಕ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ, ಭವಿಷ್ಯದಲ್ಲಿ ಎದುರಾಗಲಿರುವ ಚುನಾವಣೆಗಳನ್ನು ಯಾವ ರೀತಿಯಾಗಿ ನಡೆಸಬೇಕು, ಆ ಮಟ್ಟಕ್ಕೆ ಪಕ್ಷಗಳನ್ನು ಸಂಘಟಿಸುವ ನಿಟ್ಟಿನಲ್ಲಿ ಯಾವ ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಅನುಷ್ಠಾನಗೊಳಿಸಬೇಕು, ಸಭೆ,ಸಮಾವೇಶ, ಸಮಾರಂಭಗಳನ್ನು ನಡೆಸಬೇಕು, ಕಾರ್ಯಕರ್ತರನ್ನು ಒಗ್ಗೂಡಿಸುವಂತಹ ಪ್ರಯತ್ನಗಳು ಈಗಲಾದರು ಆರಂಭಿಸಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೨೦೩೫ ಕ್ಕೆ ೪೦೦ ಕೋಟಿ ಜನರು ಬೊಜ್ಜಿನ ಸಮಸ್ಯೆ: ಕೆ.ಟಿ.ಹನುಮಂತು
ದೇಶಕ್ಕೆ ಮಾದರಿಯಾಗುವ ಸಂವಿಧಾನ ಭವನ: ಪಿ.ರವಿಕುಮಾರ್