ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತದಲ್ಲಿ ರಾಜಕಾರಣ ಸಂಪೂರ್ಣ ಕಲುಷಿತಗೊಂಡಿದೆ. ಇಂದಿನ ತಲೆಮಾರಿನ ರಾಜಕಾರಣಿಗಳು ಹಳೇ ತಲೆಮಾರಿನ ರಾಜಕೀಯ ಮುತ್ಸದ್ದಿ ನಾಯಕರನ್ನ್ನು ಅನುಸರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ವಿಷಾದಿಸಿದರು.ಜನತಾ ಶಿಕ್ಷಣ ಸಂಸ್ಥೆಯಿಂದ ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ನಿತ್ಯ ಸಚಿವ ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರ ಸಭಾಂಗಣದಲ್ಲಿ ನಡೆದ ನಿತ್ಯಸಚಿವ ಕೆ.ವಿ.ಶಂಕರಗೌಡರ ೧೧೦ನೇ ಜನ್ಮದಿನಾಚರಣೆ, ೨೦೨೫ನೇ ಸಾಲಿನ ರಾಜ್ಯ ಮಟ್ಟದ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಹಾಗೂ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಹೊಸ ತಲೆಮಾರಿನ ರಾಜಕಾರಣಿಗಳು ಹಿರಿಯ ಮುತ್ಸದ್ದಿಗಳನ್ನು ಅನುಸರಿಸುವ ಪ್ರಯತ್ನಕ್ಕೂ ಮುಂದಾಗುತ್ತಿಲ್ಲ. ಅಭಿವೃದ್ಧಿ ವಿಷಯದಲ್ಲಿ, ಜನಪರವಾದ ಯೋಜನೆ ಜಾರಿಗೊಳಿಸುವಲ್ಲಿ, ರೈತಪರ ನಿಲುವುಗಳನ್ನು ಕೈಗೊಳ್ಳುವಲ್ಲಿ ಹಿಂದಿನ ತಲೆಮಾರಿನ ರಾಜಕಾರಣಿಗಳ ರೀತಿಯಲ್ಲಿ ಬದ್ಧತೆ, ಪ್ರೌಢಿಮೆಯನ್ನು ಪ್ರದರ್ಶಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ರಾಜಕೀಯ ಕಲುಷಿತಗೊಳ್ಳುವ ಮುನ್ನ ಹಿರಿಯ ಮುತ್ಸದ್ದಿಯಾಗಿ ಗುಣಧರ್ಮದ ರಾಜಕೀಯ ನಡೆಸಿದ ಕೆ.ವಿ.ಶಂಕರಗೌಡ ಅವರು ಜನತೆಗೆ ಸಾಂಸ್ಕೃತಿಕ ಚಿಂತನೆಗಳನ್ನು ಮೂಡಿಸಿ ಜನಮಾನಸದಲ್ಲಿ ನಿತ್ಯ ಸಚಿವರಾಗಿಯೇ ಉಳಿದಿದ್ದಾರೆ ಎಂದು ಬಣ್ಣಿಸಿದರು.
ಜನರಿಗೆ ದುಡಿಯುವ ಶಕ್ತಿ ಇದೆ. ವ್ಯವಸಾಯಕ್ಕೆ ಅಷ್ಟೋ ಇಷ್ಟು ನೀರಿದ್ದರೂ ಜ್ಞಾನವಿಲ್ಲ. ಶಿಕ್ಷಣವೇ ಮೂಲ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ನಮ್ಮ ಜನರು ಬುದ್ದಿವಂತರಾಗಲೆಂದು ಜನತಾ ಶಿಕ್ಷಣ ಟ್ರಸ್ಟ್ ತೆರೆದು ಉಪಕಾರ ಮಾಡಿದ ಏಕೈಕ ವ್ಯಕ್ತಿ ಕೆ.ವಿ.ಶಂಕರಗೌಡ ಅವರು, ಅವರ ಮೊಮ್ಮಗ ಕೆ.ಎಸ್.ವಿಜಯ್‌ಆನಂದ್ ಅವರು ಕಪ್ಪು ಚುಕ್ಕೆ ತರದ ಹಾಗೆ ಸಂಸ್ಥೆಯನ್ನು ನೋಡಿಕೊಂಡು ಬರುತ್ತಿದ್ದಾರೆ ಎಂದರು.ಕಲೆ, ಸಾಹಿತ್ಯ, ಸಂಸ್ಕೃತಿ ವಿಚಾರದಲ್ಲಿ ಕೆ.ವಿ.ಶಂಕರಗೌಡರು ಮಾದರಿಯಾಗಿ ನಿಲ್ಲುತ್ತಾರೆ, ಸಮಾಜಕ್ಕೋಸ್ಕರವಾಗಿಯೇ ಜೀವನವನ್ನೇ ಮುಡುಪಾಗಿಟ್ಟವರು. ಜಿ.ಮಾದೇಗೌಡ, ಸಿಂಗಾರಿಗೌಡರು ಸೇರಿದಂತೆ ಎಸ್.ಎಂ.ಕೃಷ್ಣವರೆಗೂ ನೋಡಿದರೆ ಕೆವಿಎಸ್ ಕೂಡ ದೊಡ್ಡ ನಾಯಕರಾಗಿ ಕಾಣುತ್ತಾರೆ ಎಂದರು.
ರಾಜ್ಯ ಮಟ್ಟದ ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಜಯ್ ನೀನಾಸಂ, ಕೆ.ವಿ.ಶಂಕರಗೌಡ ಅವರನ್ನು ನೋಡಿಲ್ಲ, ಅವರ ಬಗ್ಗೆ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ, ಅವರನ್ನು ನಾನು ಶೇ.೧೦೦ರಲ್ಲಿ ಕೇವಲ ಶೇ.೧ ರಷ್ಟು ಮಾತ್ರ ತಿಳಿದುಕೊಂಡಿದ್ದೇನೆ ಎಂಬ ಭಾವನೆ ಮೂಡಿದೆ, ಏಕೆಂದರೆ ಕೆವಿಎಸ್ ಅವರ ಸಾಧನೆಗಳನ್ನು ನೋಡಿದರೆ ನಾವು ಅವರ ಹಾದಿಯಲ್ಲಿಯೇ ಸಾಗಬೇಕೆನಿಸುತ್ತದೆ. ಆರೇಳು ಕ್ಷೇತ್ರದಲ್ಲಿ ಕೆಲಸ ಮಾಡಿ ಸಾಧಿಸಿದ ಕೆವಿಎಸ್ ಅವರ ಹೆಸರಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದರು.ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಮಾತನಾಡಿ, ನಮ್ಮ ತಂದೆ ಸಚ್ಚಿದಾನಂದ ಅವರು ರಂಗಭೂಮಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಜನತಾ ಶಿಕ್ಷಣ ಟ್ರಸ್ಟ್ ಕಟ್ಟಲು ಶ್ರಮ ಪಟ್ಟಿರುವುದನ್ನು ಉಳಿಸಿಕೊಂಡು ಹೋಗಬೇಕಿದೆ. ಅದನ್ನು ಮಾಡಲು ನಿಮ್ಮೆಲ್ಲರ ಸಹಕಾರ ಬೇಕು. ಅಜಯ್ ನೀನಾಸಂ ಮತ್ತು ಮಹೇಶ್‌ಚಂದ್ರಗುರು ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆ ಎನಿಸಿದೆ. ಇವರೆಲ್ಲರೂ ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿಕೊಂಡು ಬಂದಿದ್ದಾರೆ. ಅವರ ಸಾಧನೆ ಮುಂದುವರಿಯಲಿ ಎಂದು ಶುಭ ಕೋರಿದರು.
ರಾಜ್ಯ ಮಟ್ಟದ ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಪ್ರಶಸ್ತಿಯನ್ನು ಅಜಯ್ ನೀನಾಸಂ ಮತ್ತು ಸಮಾಜ ಸೇವಾ ಪ್ರಶಸ್ತಿಯನ್ನು ಮಂಡ್ಯದ ವಿಕಸನ ಜೋಗುಳ ದತ್ತು ಸೇವಾ ಕೇಂದ್ರದ ಮಹೇಶ್‌ಚಂದ್ರಗುರು ಅವರಿಗೆ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಬಸವಯ್ಯ, ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ನಿರ್ದೇಶಕ ರಾಮಲಿಂಗಯ್ಯ ಭಾಗವಹಿಸಿದ್ದರು. ಬಳಿಕ ವಿಕಸನ ಮಕ್ಕಳಿಂದ ಪಟದ ಕುಣಿತ, ಕಂಸಾಳೆ ನೃತ್ಯ ನಡೆಯಿತು. ತರಬೇತುದಾರ ಗಿರೀಶ್ ಮೇಲುಕೋಟೆ ಹಾಗೂ ಹನುಮಂತು ನೀನಾಸಂ ಅವರು ಎಲ್ಲರ ಗಮನ ಸೆಳೆದರು.