ಅಭಿವೃದ್ಧಿ ವಿಷಯದಲ್ಲಿ ರಾಜಕಾರಣಿಗಳಿಗೆ ದೂರದೃಷ್ಟಿ ಅಗತ್ಯ: ಶಾಸಕ ಸವದಿ

KannadaprabhaNewsNetwork | Published : Oct 22, 2024 12:13 AM

ರಾಜಕಾರಣಿಗಳಿಗೆ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ದೂರದೃಷ್ಟಿ ಇರಬೇಕು. ಕ್ಷೇತ್ರದಲ್ಲಿ ತಾವು ಮಾಡುವ ಅಭಿವೃದ್ಧಿ ಕಾರ್ಯಗಳು ಶತಮಾನದವರೆಗೆ ಜನರ ಹೃದಯದಲ್ಲಿ ಅಮರವಾಗಿರಬೇಕು. ಮಾಡಿದ ಕೆಲಸ ಶಾಶ್ವತವಾಗಿ ಉಳಿಯಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ರಾಜಕಾರಣಿಗಳಿಗೆ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ದೂರದೃಷ್ಟಿ ಇರಬೇಕು. ಕ್ಷೇತ್ರದಲ್ಲಿ ತಾವು ಮಾಡುವ ಅಭಿವೃದ್ಧಿ ಕಾರ್ಯಗಳು ಶತಮಾನದವರೆಗೆ ಜನರ ಹೃದಯದಲ್ಲಿ ಅಮರವಾಗಿರಬೇಕು. ಮಾಡಿದ ಕೆಲಸ ಶಾಶ್ವತವಾಗಿ ಉಳಿಯಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸೋಮವಾರ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಪೈಪ್‌ಲೈನ್‌ ಕಾಮಗಾರಿಗೆ ವಿಜಯಪುರ ರಸ್ತೆಯ ಅರಟಾಳ ಕ್ರಾಸ್ ಬಳಿ ಭೂಮಿಪೂಜೆ ನೆರವೇರಿಸಿ ಮತ್ತು ಸಾರ್ವಜನಿಕ ಸಮಾವಶ ಉದ್ಘಾಟಿಸಿ ಮಾತನಾಡಿದರು.

ಅಕ್ಟೋಬರ್‌ ಇಲ್ಲವೆ ನವೆಂಬರ್‌ ಒಳಗೆ ಯೋಜನೆ ಪೂರ್ಣಗೊಳಿಸಿ ಪ್ರಾಯೋಗಿಕ ನೀರು ಹರಿಸಿದರೆ ರೈತರೆಲ್ಲ ಸೇರಿ 101 ಗ್ರಾಂ ( ಹತ್ತು ತೊಲಿ) ಬಂಗಾರದ ಕೈಗಡಗವನ್ನು ಗುತ್ತಿಗೆದಾರರಿಗೆ ಹಾಕಿ ಸನ್ಮಾನಿಸಲಾಗುವುದು ಎಂದು ಹೇಳಿದರು.

ಯೋಜನೆಯಲ್ಲಿ ಹೊಸ ತಂತ್ರಜ್ಞಾನ ಬಳಸಲಾಗುತ್ತದೆ. ಇದರಿಂದ ಪೂರ್ವಭಾಗದ ಒಟ್ಟು 19000 ಹೆಕ್ಟೇರ್‌ ಪ್ರದೇಶ ನೀರಾವರಿ ಆಗುವುದರ ಜೊತೆಗೆ 13 ಕೆರೆ ತುಂಬಿಸುವುದು ಯೋಜನೆಯಲ್ಲಿ ಅಡಗಿವೆ. ₹1500 ಕೋಟಿ ವೆಚ್ಚದ ಯೋಜನೆಯ ಮೊದಲನ ಹಂತದ ಯೋಜನೆ ವೆಚ್ಚ ₹900 ಕೋಟಿ ಇದ್ದು, ನಬಾರ್ಡ್‌ದಿಂದ ₹550 ಕೋಟಿ ಅನುದಾನ ಬಿಡುಗಡೆ ಆಗಿದ್ದು. ಇನ್ನುಳಿದ ಅನುದಾನವನ್ನು ರಾಜ್ಯ ನೀರಾವರಿ ಇಲಾಖೆ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಯೋಜನೆಗೆ ಬೇಕಾಗುವ ಪಂಪಹೌಸ್ ಮತ್ತು ಹೆಸ್ಕಾಂ 110 ಕೆವಿ ಸ್ಟೇಷನ್ ನಿರ್ಮಾಣ ಮಾಡಲಾಗುವದು. ಕೆನಾಲ್‌ ಬದಲಾಗಿ ಪೈಪಲೈನ್ ಮೂಲಕ ನೀರು ರೈತರ ಜಮೀನಿಗೆ ತಲುಪಲಿದೆ. ಪೈಪಲೈನ್‌ ನಿಂದಾಗಿ ರೈತರ ಭೂಮಿ ನಾಶವಾಗುದಿಲ್ಲ ಎಂದ ಅವರು, ಈ ಯೋಜನೆ ಮಂಜೂರಾತಿಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರ ಬಹಳಷ್ಟು ಶ್ರಮಪಟ್ಟಿದ್ದಾರೆ. ಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಹಣ ವೆಚ್ಚ ಮಾಡಿದ್ದಾರೆ. ಅನುದಾನ ಬಿಡುಗಡೆ ಮಾಡಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಗೆ ಅಭಿನಂದನೆ ತಿಳಿಸಿದರು.

ಪಶು ವೈದ್ಯಕೀಯ ಕಾಲೇಜು ಕಟ್ಟಡ ಮುಗಿದಿದೆ. ಭಾರತೀಯ ಪಶು ವೈದ್ಯಕೀಯ ಸಮಿತಿ ಸಹ ಬಂದು ಪರಿಶೀಲನೆ ನಡೆಸಿ ಪ್ರವೇಶ ನೀಡುವುದಕ್ಕೆ ಅಭ್ಯಂತರ ಇಲ್ಲವೆಂದು ಶಿಫಾರಸು ಮಾಡಿದೆ. ಪ್ರಸ್ತುತ ವರ್ಷದಿಂದಲೇ ಪ್ರವೇಶ ನೀಡುವ ಸಾಧ್ಯತೆ ಇದೆ. ಈ ವರ್ಷ ಪ್ರವೇಶ ನೀಡಿದರೆ ಕಾಲೇಜ ಆರಂಭವಾಗುತ್ತದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಶಿದರಾಯ ಯಲಡಗಿ, ಅಮೋಘಸಿದ್ದ ಖೋತ್ರಿ, ಶಿವು ಗುಡ್ಡಾಪೂರ ಮಾತನಾಡಿದರು. ಶೇಖರ ನೇಮಗೌಡರ ಸ್ವಾಗತಿಸಿದರು. ಶ್ರೀಶೈಲ ಸೆಲ್ಲಪ್ಪಗೋಳ ವಂದಿಸಿದರು. ವೇದಿಕೆ ಮೇಲೆ ನೀರಾವರಿ ಮುಖ್ಯ ಎಂಜಿನಿಯರ್‌ ಪ್ರವೀಣ ಹುಣಸಿಕಟ್ಟಿ, ಶಂಕರ ನಾರಾಯಣ ಕನಸ್ಟ್ರಕ್ಷನ್‌ ಮುಖ್ಯಸ್ಥ ಸುರೇಶ ಪನ್ನಿಕರ ಇತರರು ಇದ್ದರು.

ಅಭಿವೃದ್ಧಿ ವಿಷಯದಲ್ಲಿ ವಿರೋಧ ಸಲ್ಲ: ಬಿಜೆಪಿಯಲ್ಲಿದ್ದಾಗ ಅಥಣಿ ಮತಕ್ಷೇತ್ರಕ್ಕೆ ಒಂದು ಕೃಷಿ ಕಾಲೇಜು ಮಂಜೂರು ಮಾಡಿಸಿದ್ದೆ. ಕೆಲವರ ವಿರೋಧದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಶೀಘ್ರದಲ್ಲಿ ಅನುದಾನ ಮಂಜೂರ ಮಾಡಿಸುವೆ. ಅಭಿವೃದ್ಧಿ ವಿಷಯದಲ್ಲಿ ಸ್ವಪಕ್ಷವರೆ ಇರಲಿ, ವಿರೋಧಿ ಪಕ್ಷದಲ್ಲಿ ಇರಲಿ ಸಹಕಾರ ಇರಬೇಕು ಎಂದು ಹೇಳಿದರು.