ರಾಜ್ಯೋತ್ಸವ, ಪುಸ್ತಕ ಬಿಡುಗಡೆ, ಜಿಲ್ಲಾ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಷರೀಫಾ ಅನಿಸಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆಮಹಿಳೆಯರಿಗೆ ಶೇ.33 ಮೀಸಲಾತಿಯನ್ನು ಸರ್ಕಾರ ಘೋಷಿಸಿರುವುದರ ಹಿಂದೆ ಹುನ್ನಾರವಿದ್ದು, ಇದರ ಹಿಂದೆ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೆ.ಷರೀಫಾ ಹೇಳಿದ್ದಾರೆ.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಹಾಗೂ ಜನತಾವಾಣಿ ದಿನಪತ್ರಿಕೆಯಿಂದ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ, ಪುಸ್ತಕ ಬಿಡುಗಡೆ ಹಾಗೂ ಜಿಲ್ಲಾ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, 27 ವರ್ಷಗಳ ಹಿಂದೆಯೇ ಜಾರಿಗೊಳ್ಳಬೇಕಿದ್ದ ಮಹಿಳೆಯರಿಗೆ ಶೇ.33 ರಾಜಕೀಯ ಮೀಸಲಾತಿ ಈಗಷ್ಟೇ ಮುನ್ನಲೆಗೆ ಬಂದಿದ್ದು, ಏನೋ ರಾಜಕೀಯ ಲೆಕ್ಕಾಚಾರ ಇದರ ಹಿಂದಿದೆ ಎಂದರು. ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ವಿಚಾರ ಹಿಂದೆ ಎಚ್.ಡಿ.ದೇವೇಗೌಡರು ಪ್ರಧಾನಿ ಆಗಿದ್ದಾಗ ಚರ್ಚೆಯಾಗಿತ್ತು. ಆದರೆ, ಆಗಿನಿಂದ ಈವರೆಗೂ ಜಾರಿಗೊಳ್ಳದ ಮಹಿಳಾ ಮೀಸ ಲಾತಿಯು ಈಗ ಘೋಷಿಸುತ್ತಾರೆಂದರೆ ಇದು ಮುಂಬರುವ ಲೋಕಸಭಾ ಚುನಾವಣೆಯ ಗೆಲುವಿಗಾಗಿ ಎಂಬುದು ಸ್ಪಷ್ಟ. ಇದು ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆಯಷ್ಟೇ. ಮಹಿಳೆಯರು ಈಗ ಬುದ್ಧಿವಂತರಾಗಿದ್ದು, ಚುನಾವಣೆಯಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.ಸಾಧನೆ ಮೂಲಕ ಸದ್ದು:
ಮಹಿಳಾ ಸಾಹಿತ್ಯವನ್ನು ಅಡುಗೆ ಮನೆಯ ಸಾಹಿತ್ಯವೆಂದು ಹೀಗೆಳೆಯುವ ಕಾಲವೂ ಇತ್ತು. ಅದರ ಅರ್ಥ ಅಡುಗೆ ಮನೆಗೆ ಮಹಿಳಾ ಸಾಹಿತ್ಯವನ್ನೂ ಮೀಸಲಾಗಿಡಲಾಗುತ್ತಿತ್ತು. ಆದರೆ, ಮಹಿಳೆಯು ತನ್ನ ಸ್ವಪ್ರತಿಭೆಯಿಂದ ಒತ್ತಡದಿಂದ ಕುಕ್ಕರ್ ಹೇಗೆ ಶಿಳ್ಳೇ ಹೊಡೆಯುವೋ ಹಾಗೆ ಮಹಿಳೆಯರು ತಮ್ಮ ಸಾಧನೆ ಮೂಲಕ ಸದ್ದು ಮಾಡುತ್ತಿದ್ದಾರೆ. ಇಂತಹ ಸಾಧನೆ ನಿರಂತರವಾಗಿ ಆಗಬೇಕು. ಓದು, ಬರಹ, ರಾಜಕೀಯದಲ್ಲೂ ಮಹಿಳೆ ಎಚ್ಚೆತ್ತುಕೊಳ್ಳಬೇಕು ಎಂದು ಷರೀಫಾ ಕಿವಿಮಾತು ಹೇಳಿದರು.ವೇದಿಕೆ ಅಧ್ಯಕ್ಷೆ ಮಲಮ್ಮ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ವನಿತಾ ಸಮಾಜದ ಅಧ್ಯಕ್ಷೆ ಪದ್ಮಾ ಪ್ರಕಾಶ, ಎಸ್ಸೆಸ್ ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಿದರು. ಅನ್ನಪೂರ್ಣ ಪಾಟೀಲ, ಸುನಿತಾ ಪ್ರಕಾಶ, ಸಾಹಿತಿ ಟಿ.ಶೈಲಜಾ ಕಾರ್ಯಕ್ರಮ ನಡೆಸಿಕೊಟ್ಟರು. ಹರಿಹರದ ಸಾಹಿತಿ ಸೀತಾ ನಾರಾಯಣರಿಗೆ ಜಿಲ್ಲಾ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಡಿ.ಎಂ.ಕುಮುದಾ ರಚಿತ ಶ್ರೀಕೃಷ್ಣ ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲ, ಡಾ.ರೂಪಶ್ರೀಯವರ ಶ್ರೀಕೃಷ್ಣ ಧ್ಯಾನಾಮೃತ ಹಾಗೂ ಕೆ.ಆರ್.ಸುಮತೀಂದ್ರರ ಕನ್ನಡ ಕಸ್ತೂರಿ ಕೃತಿ ಲೋಕಾರ್ಪಣೆ ಮಾಡಲಾಯಿತು.
ರಾಜಕಾರಣ ಕೋಮುವಾದ ಹುಟ್ಟು ಹಾಕುತ್ತಿದೆಹಿಂದೂ-ಮುಸ್ಲಿಮರೆಂದು ಬಾಂಧವ್ಯದ ಮಧ್ಯೆ ಗೋಡೆ ಕಟ್ಟುತ್ತಿರುವ ರಾಜಕಾರಣಿಗಳನ್ನು ದೂರವಿಟ್ಟು, ಗುರು ಗೋವಿಂದ ಭಟ್ಟರು-ಸಂತ ಶಿಶುನಾಳ ಷರೀಫರಂತೆ ಬಾಂಧವ್ಯವನ್ನು ನಾವೆಲ್ಲರೂ ಮುಂದುವರಿಸೋಣ, ಹಿಂದೂ-ಮುಸ್ಲಿಮರ ಮಧ್ಯೆ ಉತ್ತಮ ಬಾಂಧವ್ಯವೇ ಇದೆ. ಮುಸ್ಲಿಮರೇ ಇಲ್ಲದ ಊರುಗಳಲ್ಲಿ ಹಿಂದೂಗಳು ಅಲಿ ಹಬ್ಬ ಆಚರಿಸುತ್ತಾರೆ. ಹಿಂದೂಗಳಿಲ್ಲದ ಊರಲ್ಲಿ ಮುಸ್ಲಿಮರು ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಾರೆ. ಹೀಗೆ ಸೌಹಾರ್ದದ ನಡೆ ಹೊಂದಿರುವ ಉಭಯ ಧರ್ಮಯರ ಮಧ್ಯೆ ರಾಜಕಾರಣವು ಕೋಮುವಾದ ಹುಟ್ಟು ಹಾಕುತ್ತಿದೆ ಎಂದು ಸಾಹಿತಿ ಕೆ.ಷರೀಫಾ ಕಿಡಿಕಾರಿದರು. ..............