ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ಮುಖ್ಯ ಬಜಾರದಲ್ಲಿ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ಇಲಾಖೆ ಹಾಗೂ ಪುರಸಭೆ ಸಂಯಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ₹ 15 ಕೋಟಿ ವೆಚ್ಚದ ನೂತನ ಮೆಗಾ ಮಾರ್ಕೆಟ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂದು ರಾಜಕೀಯ ಕಲುಷಿತಗೊಂಡಿದ್ದು, ಒಬ್ಬರಿಗೊಬ್ಬರು ಬೈದಾಡಿಕೊಂಡು ಕಾಲ ಕಳೆಯಲು ದುರ್ಬಳಕೆಯಾಗುತ್ತಿದೆ ಎಂದು ದೂರಿದರು.
ಈ ಹಿಂದೆ ಎಸ್.ಎಂ.ಗುರಡ್ಡಿ, ಎಂ.ಎಂ.ಸಜ್ಜನ, ಜೆ.ಎಸ್.ದೇಶಮುಖ ಹಾಗೂ ವಿಮಲಾಬಾಯಿ ದೇಶಮುಖ ಸೇರಿದಂತೆ ಅನೇಕರು ಶಾಸಕರಾಗಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಉತ್ತಮ ಆಡಳಿತ ನೀಡುವ ಮೂಲಕ ಶ್ರಮಿಸಿದ್ದಾರೆ. ಯಾರು ಕೂಡ ನಾನೇ ಮಾಡಿದ್ದೆ, ನನ್ನ ಕಾಲದಲ್ಲಿ ಕೆಲಸ ಆಗಿದೆ ಎನ್ನುವ ಅಹಂ ಮಾತುಗಳನ್ನಾಡಿಲ್ಲ. ಯಾರೇ ಶಾಸಕರಾಗಿರಲಿ ಜನರ ಬೆವರಿನಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಮತಕ್ಷೇತ್ರದ ಅಭಿವೃದ್ಧಿಗೆ ಬಳಸಿದ್ದೇವೆ. ವಿನಃ ನಾನಾಗಲಿ ಅಥವಾ ಇನ್ನಾರದ್ದೋ ಸ್ವಂತ ಹಣವನ್ನು ಖರ್ಚು ಮಾಡೋದಿಲ್ಲ ಎಂಬುವುದನ್ನು ತಿಳಿದುಕೊಳ್ಳಬೇಕು ಎಂದರು.ಈ ಮೊದಲು 1983ರಲ್ಲಿ ನನ್ನ ರಾಜಕೀಯ ಜೀವನ ಪ್ರಾರಂಭವಾದಾಗ ಕೇವಲ ₹25 ಸಾವಿರ ರಾಜ್ಯದ ಒಂದು ವರ್ಷದ ಬಜೆಟ್ ಇತ್ತು. ಇಂದು ಔದ್ಯೋಗಿಕವಾಗಿ, ಆರ್ಥಿಕವಾಗಿ ತುಂಬ ಬದಲಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಮ್ಮ ಸಿಎಂ ಸಿದ್ದರಾಮಯ್ಯನವರು ₹4 ಲಕ್ಷ ಕೋಟಿಗೂ ಅಧಿಕ ಅಂದಾಜು ಬಜೆಟ್ ಮಂಡಿಸಲು ಸಿದ್ಧತೆ ಕೈಗೊಂಡಿದ್ದಾರೆ ಎಂದರು.ಮುದ್ದೇಬಿಹಾಳ ಪಟ್ಟಣ ಸೇರಿದಂತೆ ಇಡೀ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಆಯಾ ವರ್ಷಕ್ಕೆ ತಕ್ಕಂತೆ ಸರ್ಕಾರದ ಅನುದಾನ ಬಿಡುಗಡೆ ಮಾಡುತ್ತದೆ, ಅಭಿವೃದ್ಧಿ ಮಾಡಲಾಗುತ್ತದೆ. ಅದರಂತೆ ಮುಂಬರುವ ದಿನಗಳಲ್ಲಿ ರಸ್ತೆ, ಚರಂಡಿ, ಪಟ್ಟಣ ಹಾಗೂ ಗ್ರಾಮೀಣ ಜನರಿಗೆ ಕುಡಿಯುವ ನೀರು, ಬೀದಿ ವಿದ್ಯುದೀಪ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಾಲಾ ಕಟ್ಟಡಗಳು, ಸ್ಮಾರ್ಟ್‌ಕ್ಲಾಸ್ ರೂಮ್‌ಗಳು, ರೈತರ ಅನುಕೂಲಕ್ಕಾಗಿ ಸಮಗ್ರ ನೀರಾವರಿ ಯೋಜನೆ, ಕೆರೆ ತುಂಬಿಸುವುದು ಹೀಗೆ ಅನೇಕ ಅಭಿವೃದ್ಧಿ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ಗ್ಯಾರಂಟಿಗಳನ್ನು ನೀಡುವುದರ ಮೂಲಕ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಆದರೆ, ವಿರೋಧ ಪಕ್ಷದವರಿಗೆ ಸಹಿಸಿಕೊಳ್ಳು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಳೆದೆರಡು ವರ್ಷಗಳಲ್ಲಿ ಮತಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದೇನೆ. ಏನೆಲ್ಲ ಅಭಿವೃದ್ಧಿ ಮಾಡಲಾಗಿದೆ ಎಂಬುವುದನ್ನು ಮಾರ್ಚ್‌ನಲ್ಲಿ ನಡೆಯವ ಅಧಿವೇಶನ ನಂತರ ದಾಖಲೆಯ ಸಮೇತ ಶ್ವೇತಪತ್ರ ಹೊರಡಿಸುತ್ತೇನೆ. ಅದನ್ನು ಬಿಟ್ಟು ಸುಳ್ಳು ಹೇಳಿಕೊಂಡು ಜೀವನ ಮಾಡುವ ಅವಶ್ಯಕತೆ ನನಗಿಲ್ಲ. ನಾನೂ ಕೂಡ ಮಾದರಿ ಮತಕ್ಷೇತ್ರ ಮಾಡುವ ಗುರಿ ಹೊಂದಿದ್ದೇನೆ.