ಪ್ರಾಥಮಿಕ ಶಾಲಾ ಶಿಕ್ಷಕರ ಬೀದಿ ರಂಪಾಟ..!

KannadaprabhaNewsNetwork |  
Published : Mar 01, 2025, 01:03 AM IST
೨೮ಕೆಎಂಎನ್‌ಡಿ-೭ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎರಡು ಬಣದ ಸದಸ್ಯರು ತಳ್ಳಾಟ-ನೂಕಾಟದಲ್ಲಿ ತೊಡಗಿರುವುದು. | Kannada Prabha

ಸಾರಾಂಶ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯಮಟ್ಟದ ಶೈಕ್ಷಣಿಕ ಅಧಿವೇಶನ ನಡೆಯುವ ಮುನ್ನಾ ದಿನ ನಗರದ ಖಾಸಗಿ ಸಮುದಾಯ ಭವನದಲ್ಲಿ ಶಿಕ್ಷಕರ ಬೀದಿ ರಂಪಾಟ, ಬಣ ರಾಜಕೀಯ, ಹೈಡ್ರಾಮಾ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯಮಟ್ಟದ ಶೈಕ್ಷಣಿಕ ಅಧಿವೇಶನ ನಡೆಯುವ ಮುನ್ನಾ ದಿನ ನಗರದ ಖಾಸಗಿ ಸಮುದಾಯ ಭವನದಲ್ಲಿ ಶಿಕ್ಷಕರ ಬೀದಿ ರಂಪಾಟ, ಬಣ ರಾಜಕೀಯ, ಹೈಡ್ರಾಮಾ ನಡೆಯಿತು.

ಎರಡೂ ಬಣಗಳ ಶಿಕ್ಷಕರ ನಡುವೆ ತಳ್ಳಾಟ- ನೂಕಾಟ ನಡೆದು, ಒಬ್ಬರ ಮೇಲೊಬ್ಬರು ಆರೋಪ- ಪ್ರತ್ಯಾರೋಪಗಳನ್ನು ಮಾಡುತ್ತಾ ತಾವು ಶಿಕ್ಷಕರೆಂಬುದನ್ನು ಮರೆತು ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡು ಕಾದಾಟಕ್ಕಿಳಿದಿದ್ದರು. ಶಿಕ್ಷಕರ ಈ ಪ್ರಹಸನ ಸಾರ್ವಜನಿಕರ ನಗೆಪಾಟಲಿಗೀಡಾಗಿತ್ತು.

ರಾಜ್ಯಮಟ್ಟದ ಶೈಕ್ಷಣಿಕ ಅಧಿವೇಶನ ನಡೆಯುವ ಮುನ್ನಾ ದಿನವಾದ ಶುಕ್ರವಾರ (ಫೆ.೨೮) ಸಂಜೆ ಖಾಸಗಿ ಸಮುದಾಯ ಭವನವೊಂದರಲ್ಲಿ ರಾಜ್ಯ ಸಂಘದ ಕಾರ್ಯಕಾರಿ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಖಜಾಂಚಿ ಸುರೇಶ್, ಸಂಘಟನಾ ಕಾರ್ಯದರ್ಶಿ ನಾಗಣ್ಣಗೌಡ, ಸಹ ಕಾರ್ಯದರ್ಶಿ ಸುಮತಿ ಅವರನ್ನು ಹೊರಗಿಡಲಾಗಿತ್ತು. ಇದನ್ನು ವಿರೋಧಿಸಿ ಮೂವರೂ ಪದಾಧಿಕಾರಿಗಳು ಸಮುದಾಯ ಭವನದ ಎದುರು ಧರಣಿ ಕುಳಿತರು.

ರಾಜ್ಯ ಕಾರ್ಯಕಾರಿ ಸಮಿತಿಯ ಕೆಲವು ಪದಾಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟು ಸಭೆ ನಡೆಸುತ್ತಿದ್ದಾರೆ. ಪದಾಧಿಕಾರಿಗಳನ್ನು ಸಭೆಯೊಳಗೆ ಬಿಡದೆ ಗೇಟಿನಲ್ಲೇ ಅಡ್ಡಗಟ್ಟಿ ದೌರ್ಜನ್ಯ ನಡೆಸುತ್ತಿದ್ದಾರೆ. ಇವರಿಗಿಷ್ಟ ಬಂದವರನ್ನು ಸಂಘದಿಂದ ಅಮಾನತುಗೊಳಿಸುವುದು, ಲೆಕ್ಕ ಕೇಳುವವರನ್ನು, ಪ್ರಶ್ನಿಸುವವರನ್ನು ಸಂಘದಿಂದಲೇ ತೆಗೆದುಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಇವರಿಗೆ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ, ಸಮಸ್ಯೆಗಳ ವಿರುದ್ಧ ಹೋರಾಡುವ ಮನಸ್ಥಿತಿಯೇ ಇಲ್ಲವೆಂದು ಆರೋಪಿಸಿದರು.

ಇದರ ನಡುವೆ ಗೇಟನ್ನು ತಳ್ಳಿಕೊಂಡು ಒಳನುಗ್ಗುವ ಪ್ರಯತ್ನ ನಡೆಸಿದರಾದರೂ ಸಮುದಾಯದ ಒಳಗಿದ್ದ ಶಿಕ್ಷಕರು ಅದಕ್ಕೆ ಅವಕಾಶವನ್ನು ನೀಡಲಿಲ್ಲ. ಈ ಸಮಯದಲ್ಲಿ ಎರಡು ಬಣಗಳ ಪದಾಧಿಕಾರಿಗಳ ನಡುವೆ ತಳ್ಳಾಟ- ನೂಕಾಟ ನಡೆಯಿತು.

ಪೊಲೀಸರು ಸ್ಥಳದಲ್ಲಿದ್ದುಕೊಂಡು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿದ್ದರು.

------------------------

ಸಭೆಗೆ ಬಂದವರ ಮೇಲೆ ದೌರ್ಜನ್ಯ

ರಾಜ್ಯ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ೭೯ ಮಂದಿ ಸದಸ್ಯರಿದ್ದೇವೆ. ಖಜಾಂಚಿ, ಸಹ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿಗಳನ್ನು ಹೊರಗಿಟ್ಟು ಸಭೆ ನಡೆಸುತ್ತಿದ್ದಾರೆ. ಮೂರು ಸಭೆಗೆ ಹಾಜರಾಗಿಲ್ಲವೆಂಬ ಕಾರಣಕ್ಕೆ ಅಮಾನತು ಮಾಡಿದ್ದಾರೆ. ಸಭೆಯ ನೋಟಿಸ್ ನೀಡದೆ ಉದ್ದೇಶಪೂರ್ವಕವಾಗಿ ಸಂಘದಿಂದ ಹೊರಗಿಟ್ಟು ದೌರ್ಜನ್ಯ ನಡೆಸಿದ್ದಾರೆ.

- ಸುಮತಿ, ಸಹ ಕಾರ್ಯದರ್ಶಿ

---------------------------

ಸಭೆಗೆ ಆಹ್ವಾನವನ್ನೇ ಕೊಟ್ಟಿಲ್ಲ

ಸಭೆಗೆ ಬರುವಂತೆ ರಾಜ್ಯಸಂಘ ಈ ಮೂವರಿಗೆ ಆಹ್ವಾನವನ್ನೇ ಕೊಟ್ಟಿಲ್ಲ. ವಿನಾಕಾರಣ ಶಾಂತಿಯುತವಾಗಿ ನಡೆಯುತ್ತಿರುವ ಸಭೆಗೆ ಬಂದು ಗೊಂದಲ ಸೃಷ್ಟಿಸುತ್ತಿದ್ದಾರೆ. ೭೯ ಮಂದಿ ಕಾರ್ಯಕಾರಿ ಸಮಿತಿಯಲ್ಲಿದ್ದು, ೫೪ ಸದಸ್ಯರು ಹಾಜರಿದ್ದಾರೆ. ಬಹುತೇಕ ಸದಸ್ಯರು ಅಧ್ಯಕ್ಷರ ಪರವಾಗಿದ್ದಾರೆ. ಇವರ ಪರ ಯಾರೂ ಇಲ್ಲದಿದ್ದರೂ ವಿನಾಕಾರಣ ದಬ್ಬಾಳಿಕೆ, ದೌರ್ಜನ್ಯ ಎಂದು ಸುಳ್ಳು ಹೇಳುತ್ತಿದ್ದಾರೆ.

- ರಾಜ್ಯ ಅಧ್ಯಕ್ಷರ ಬೆಂಬಲಿಗರು

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌