ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಬೇಕು. ಅಭಿವೃದ್ಧಿ ವಿಚಾರ ಬಂದಾಗ ವಿನಾಕಾರಣ ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾನಗಲ್ಲ: ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಬೇಕು. ಅಭಿವೃದ್ಧಿ ವಿಚಾರ ಬಂದಾಗ ವಿನಾಕಾರಣ ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ಗ್ರಾಪಂ ವತಿಯಿಂದ ನಿರ್ಮಿಸಿದ ಸಂಜೀವಿನಿ ಘಟಕ, ಘನತ್ಯಾಜ್ಯ ಘಟಕ, ಗ್ರಾಮದೇವಿ ಬಯಲು ರಂಗಮಂದಿರ, ವಿಕಲಚೇತನರ ಕಾರ್ಯಾಲಯ ಹಾಗೂ ವಾಣಿಜ್ಯ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಶರಣರು, ಸಂತರು, ಸೂಫಿಗಳ ಆದೇಶ ಪಾಲಿಸದೇ ಮಾನವೀಯತೆ ಮರೆತಿದ್ದೇವೆ. ಹಾಗಾಗಿ ಸೃಷ್ಟಿ ನಮ್ಮೊಂದಿಗೆ ಮುನಿಸಿಕೊಂಡಿದೆ. ಏಳೆಂಟು ವರ್ಷಗಳಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ವರ್ಷ ವಾಡಿಕೆ ಪ್ರಮಾಣದಷ್ಟೂ ಮಳೆ ಸುರಿದಿಲ್ಲ. ಆದರೆ ಜಿಟಿಜಿಟಿ ಮಳೆ ರೈತನ ಬದುಕು ಕಿತ್ತುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.ಗ್ರಾಮಗಳ ಅಭಿವೃದ್ಧಿ ಕುರಿತು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಂಥ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ಕಾಳಜಿ ವಹಿಸಬೇಕಿದೆ. ಆಗ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯವಾಗಲಿದ್ದು, ಅನುದಾನಕ್ಕೆ ಜನಪ್ರತಿನಿಧಿಗಳ ಬಳಿ ಅಂಗಲಾಚುವ ಸ್ಥಿತಿ ಬರುವುದಿಲ್ಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಪಂಚಾಯತರಾಜ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದರು ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಬಾಳೂರಿನ ಅಡವಿಸ್ವಾಮಿ ಮಠದ ಕುಮಾರ ಸ್ವಾಮೀಜಿ ಮಾತನಾಡಿ, ಅಭಿವೃದ್ಧಿ ಎನ್ನುವುದಕ್ಕೆ ಕೊನೆ ಇಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಬೇಕಿದೆ. ಸರ್ಕಾರದ ಯೋಜನೆ, ಅನುದಾನ ಸದ್ಭಳಕೆಯಾದರೆ ಪ್ರತಿಯೊಂದು ಕುಟುಂಬಗಳೂ ಸಹ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿದೆ ಎಂದರು.ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಕುರುಬರ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ನೀಲವ್ವ ಪಾಟೀಲ, ಮಾಲತೇಶ ಬಾರ್ಕಿ, ಸಂಜೀವಕುಮಾರ ಕುಂಟನಹೊಸಳ್ಳಿ, ಶಾಯಿನಾಬಾನು ಶಾಡಗುಪ್ಪಿ, ಹಲಿಂಬಾಬಿ ಸವಣೂರ, ಗಂಗಮ್ಮ ಲಮಾಣಿ, ಗುಡ್ಡಪ್ಪ ಎಸ್., ವಿಶ್ವನಾಥ ಕುಲಕರ್ಣಿ, ಡಾ.ಅರ್ಪಿತಾ ಬಾರ್ಕಿ, ಮಲ್ಲಿಕಾರ್ಜುನಯ್ಯ ಹಿರೇಮಠ, ಇಮಾಮಸಾಬ ಶಾಡಗುಪ್ಪಿ, ಶಿವಾನಂದ ಭಜಂತ್ರಿ, ಶಿವರಾಯಪ್ಪ ಕುಂಟನಹೊಸಳ್ಳಿ, ಸಿದ್ದಪ್ಪ ಬಾಳೂರ, ಬಸವರಾಜ ಹಕ್ಕಲವರ, ಸಂಜೀವ ಆರೇರ, ಜಾಫರ್ ಶಾಡಗುಪ್ಪಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.