ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಮುತಗಾ, ಶಿಂಧೋಳ್ಳಿ, ಬಸರಿಕಟ್ಟಿ ಮೊದಲಾದ ಗ್ರಾಮಗಳಲ್ಲಿ ಗುರುವಾರ ಪ್ರಚಾರ ಕೈಗೊಂಡು ಮತಯಾಚನೆ ಮಾಡಿ ಮಾತನಾಡಿದ ಅವರು, ಈ ದೇಶ ಕಟ್ಟುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಸಾಕಷ್ಟಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ದೇಶ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಮಾಡಿದೆ. ತಾಯಿ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ತರುವ ಮೂಲಕ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶವನ್ನಾಗಲಿ, ಜನರನ್ನಾಗಲಿ ಎಂದೂ ಒಡೆಯುವ ಕೆಲಸ ಮಾಡುವುದಿಲ್ಲ. ನಾವು ಜೋಡಿಸುವ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ, ತಾರತಮ್ಯವಿಲ್ಲದೇ ಅಭಿವೃದ್ಧಿ ಮಾಡುವ ಪಕ್ಷ ನಮ್ಮದು. ಹಾಗಾಗಿಯೇ ಯಾವುದೇ ತಾರತಮ್ಯ ಮಾಡದೇ ಸಮಾಜದ ಎಲ್ಲರಿಗೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ರಾಜ್ಯದ ಪ್ರತಿಯೊಂದು ಕುಟುಂಬವೂ ಗ್ಯಾರಂಟಿ ಯೋಜನೆಗಳ ಲಾಭ ಪಡೆದುಕೊಂಡಿವೆ ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನೂ ಬಳಸಿಕೊಂಡು ನಾವು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇವೆ. ಮೃಣಾಲ್ ಹೆಬ್ಬಾಳಕರ್ ಆಯ್ಕೆ ಮಾಡಿ ಕಳಿಸಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಯೋಜನೆಗಳ ಜತೆಗೆ ಕೇಂದ್ರದಿಂದಲೂ ಹೆಚ್ಚಿನ ಅನುದಾನ ತರಲಿದ್ದಾನೆ. ಹಾಗಾಗಿ ಭಾರಿ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.