ಮನ್ಮುಲ್ ನಿಂದ ಕಲುಷಿತ ನೀರು ಕೆರೆಗೆ ಹರಿದು ಮೀನುಗಳ ಮಾರಣ ಹೋಮ

KannadaprabhaNewsNetwork |  
Published : Jun 20, 2026, 01:45 AM IST
19ಕೆಎಂಎನ್ ಡಿ19,20 | Kannada Prabha

ಸಾರಾಂಶ

ಕಳೆದ ಒಂದು ವಾರದಿಂದ ಇದ್ದಕ್ಕಿದ್ದಂತೆ ಮೀನುಗಳು ಸಾವನ್ನಪ್ಪಿರುವ ಬಗ್ಗೆ ಶಿವಣ್ಣ ಕೆರೆ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ರಾಸಾಯನಿಕ ಮಿಶ್ರಿತ ನೀರಿನಿಂದ ಮೀನುಗಳು ಸಾವನ್ನಪ್ಪಿವೆ ಎನ್ನುವುದು ವರದಿಯಿಂದ ದೃಢಪಟ್ಟಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ರಾಸಾಯನಿಕ ಮಿಶ್ರಿತ ವಿಷದ ನೀರು ಕೆರೆಗೆ ಹರಿದ ಪರಿಣಾಮ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿರುವ ಘಟನೆ ತಾಲೂಕಿನ ಕುದುರೆಗುಂಡಿ ಗ್ರಾಮದ ಕೆರೆಯಲ್ಲಿ ಜರುಗಿದೆ.

ಗೆಜ್ಜಲಗೆರೆ ಮನ್ಮುಲ್ ನಲ್ಲಿ ಹಾಲಿನ ಟ್ಯಾಂಕರ್ ಗಳನ್ನು ಶುಚಿಗೊಳಿಸುವ ಆ್ಯಸಿಡ್ ಬೆರತ ನೀರನ್ನು ಕೆರೆಗೆ ಕಾಲುವೆ ಮೂಲಕ ಹರಿಯ ಬಿಟ್ಟಿರುವ ಪರಿಣಾಮ ಆಮ್ಲಜನಕ ಮತ್ತು ಸ್ವಚ್ಛತೆ ಕೊರತೆಯಿಂದ ಮೀನುಗಳು ಸಾವನ್ನಪ್ಪಿವೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ತಾಲೂಕಿನ ಸಾದೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದರಗುಂಡಿ ಕೆರೆ 77 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಬಹಳ ವರ್ಷಗಳಿಂದ ಕೆರೆಯಲ್ಲಿ ಮೀನು ಸಾಕಾಣಿಕೆ ಹಕ್ಕನ್ನು ಹರಾಜು ಮೂಲಕ ಗುತ್ತಿಗೆ ನೀಡಲಾಗುತ್ತಿದೆ.

ಕಳೆದ 2023ನೇ ಸಾಲಿನಿಂದ 26ನೇ ಸಾಲಿನವರೆಗೆ ಕುದರಗುಂಡಿ ಗ್ರಾಮದ ಕೆ.ಬಿ.ಶಿವಣ್ಣ ಗ್ರಾಮ ಪಂಚಾಯಿತಿಯಿಂದ ಮೀನು ಸಾಕಾಣಿಕೆ ಮಾಡಲು ಗುತ್ತಿಗೆ ಪಡೆದುಕೊಂಡಿದ್ದರು. ಮೊದಲ ವರ್ಷ ₹8 ಲಕ್ಷಕ್ಕೆ ನಂತರ ನಾಲ್ಕು ವರ್ಷದ ಅವಧಿಗೆ ₹9.27 ಲಕ್ಷಕ್ಕೆ ಗುತ್ತಿಗೆ ಪಡೆದುಕೊಂಡು ಮೀನು ಸಾಕಾಣಿಕೆ ಮಾಡುತ್ತಿದ್ದರು.

ಕಳೆದ ಒಂದು ವಾರದಿಂದ ಇದ್ದಕ್ಕಿದ್ದಂತೆ ಮೀನುಗಳು ಸಾವನ್ನಪ್ಪಿರುವ ಬಗ್ಗೆ ಶಿವಣ್ಣ ಕೆರೆ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ರಾಸಾಯನಿಕ ಮಿಶ್ರಿತ ನೀರಿನಿಂದ ಮೀನುಗಳು ಸಾವನ್ನಪ್ಪಿವೆ ಎನ್ನುವುದು ವರದಿಯಿಂದ ದೃಢಪಟ್ಟಿದೆ.

ಮೀನುಗಳ ಸಾವಿನಿಂದ ಸುಮಾರು ₹40 ಲಕ್ಷ ನಷ್ಟ ಉಂಟಾಗಿದೆ. ಈ ಬಗ್ಗೆ ಮನ್ಮೂಲ ಪರಿಹಾರ ದೊರಕಿಸಿಕೊಡಬೇಕು ಎಂದು ಶಿವಣ್ಣ ಆಗ್ರಹ ಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮನ್ಮುಲ್ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್ ಹಾಗೂ ಸಿಬ್ಬಂದಿ ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುದರಗುಂಡಿ ಕೆರೆಯಲ್ಲಿ ರಾಸಾಯನಿಕ ಮಿಶ್ರಿತ ನೀರಿನಿಂದ ಇಡೀ ಕೆರೆ ನೀರು ಕಲುಷಿತಗೊಂಡಿದೆ. ಜನ- ಜಾನುವಾರುಗಳು ಕೆರೆ ನೀರನ್ನು ಬಳಕೆ ಮಾಡದಂತೆ ಗ್ರಾಮಸ್ಥರಿಗೆ ಗ್ರಾಮ ಪಂಚಾಯಿತಿ ಮನವಿ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜುಲೈ 15ರೊಳಗೆ ಇಲಾಖೆಗಳ ಕ್ರಿಯಾ ಯೋಜನಾ ವರದಿ ಸಲ್ಲಿಸಿ
ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಹತ್ಯೆ: ಕಿವಿ ಸಮೇತ ಓಲೆ ಕಿತ್ತು ಪರಾರಿ