ಶಿವಕುಮಾರ ಕುಷ್ಟಗಿ
ನಗರದ ಹೊಸ ಬಸ್ ನಿಲ್ದಾಣಕ್ಕೆ ತೆರಳುವ ಮುಖ್ಯ ರಸ್ತೆಯ ಅಡಿಯಿಂದ ಬರುವ ಚರಂಡಿ ನೀರು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಈ ಭೀಷ್ಮಕೆರೆಯ ಒಡಲನ್ನು ಸೇರುತ್ತಿದೆ. ಆದರೆ ಕಳೆದ ಸಾಲಿನಲ್ಲಿ ತೀವ್ರ ಮಳೆ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೆರೆಯ ನೀರು ತೀರಾ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಕೊಳಚೆ ಬೆಳಕಿಗೆ ಬಂದಿದ್ದು, ಕೆರೆಯ ನೀರೆಲ್ಲಾ ನಿಧಾನವಾಗಿ ಹಸಿರು ಬಣ್ಣಕ್ಕೆ ತಿರುಗುತ್ತಿದೆ.
ಫೆಬ್ರವರಿ 20 ರಂದೇ ವರದಿ: ಭೀಷ್ಮ ಕೆರೆಯಲ್ಲಿನ ನೀರಿಗೆ ಮಲೀನ ನೀರು ಸೇರುತ್ತಿದ್ದು, ಇದರಿಂದಾಗಿ ಜಲಚರಗಳಿಗೆ, ಪ್ರಾಣಿ, ಪಕ್ಷಿಗಳಿಗೆ ಮತ್ತು ಅಂತರ್ಜಲಕ್ಕೆ ಅಪಾಯ ಆಗುವ ಸಾಧ್ಯತೆ ಅರಿತು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಕರ್ನಾಟಕ ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಬೀದರ ಹಾಗೂ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ವಿಜಯಪುರಕ್ಕೆ ನೀರಿನ ಮಾದರಿಗಳನ್ನು ಸಂಗ್ರಹಿಸಿ ರವಾನಿಸಿದ್ದರು. ಪ್ರಯೋಗಾಲಯದ ವರದಿ ನಗರಸಭೆ ಮತ್ತು ಜಿಲ್ಲಾಡಳಿತ, ಮೀನುಗಾರಿಕಾ ಇಲಾಖೆಗೆ ಕಳೆದ ಫೆಬ್ರವರಿ 20 ರಂದೇ ತಲುಪಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ವರದಿಯಲ್ಲೇನಿದೆ ?: ವರದಿಯಲ್ಲಿ ಸಧ್ಯ ಭೀಷ್ಮ ಕೆರೆಯಲ್ಲಿ ಸಂಗ್ರಹವಿರುವ ನೀರಿನಲ್ಲಿ ಆಮ್ಲಜನಕ ಮತ್ತು ಅಮೋನಿಯಾ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ಕೆರೆ ನೀರು ವಿಷಕಾರಿ ಆಗುವ ಸಾಧ್ಯತೆ ಇದೆ. ಇದರಿಂದಾಗಿ ಕೆರೆಯಲ್ಲಿರುವ ಜಲಚರಗಳಿಗೆ ತೊಂದರೆ ಆಗುತ್ತದೆ ಎಂದು ಉಲ್ಲೇಖಿಸಿದೆ.
ಇದೇ ಪತ್ರವನ್ನು ಆಧರಿಸಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೆಶಕರು ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ಭೀಷ್ಮಕೆರೆಗೆ ದೊಡ್ಡ ಇತಿಹಾಸವಿದೆ. ನಿತ್ಯ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ನೂರಾರು ಜನರು ವಾಯು ವಿಹಾರ ಮಾಡುತ್ತಾರೆ. ಈ ಕೆರೆಗೆ ಮಲೀನ ನೀರು ಸೇರ್ಪಡೆಯಾಗುತ್ತಿದೆ. ನಗರಸಭೆ ತಕ್ಷಣ ಕ್ರಮ ತೆಗೆದುಕೊಂಡು ಅದನ್ನು ಸ್ಥಗಿತಗೊಳಿಸಿ ಕೆರೆ ಮತ್ತು ಜಲ ಚರಗಳ ಜೀವ ಉಳಿಸಬೇಕು ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಶರಣು ಗೋಡಿ.