ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಭೀಮನ ಅಮಾವಾಸ್ಯೆ ಪ್ರಯುಕ್ತ ಶನಿವಾರ ಮಧ್ಯರಾತ್ರಿ ಎರಡು ಗಂಟೆಯಿಂದ ಭಾನುವಾರ ಮಧ್ಯಾಹ್ನ ೨ ಗಂಟೆಯವರೆಗೆ ಅಮ್ಮನವರ ಮೂಲಮೂರ್ತಿಗೆ ಅಭಿಷೇಕ ಮಾಡಲು ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ದೇವಿಗೆ ಮೂರು ಮಹಾಮಂಗಳಾರತಿ ನಡೆಯಿತು. ಮುಂಜಾನೆ ೪.೨೮ ಕ್ಕೆ ತಾಯಿಗೆ ಮೊದಲ ಮಹಾ ಆರತಿ ಜರುಗಿತು. ಮಧ್ಯರಾತ್ರಿಯಿಂದಲೇ ಸಾವಿರಾರು ಭಕ್ತರು ಸರತಿಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ತಾಯಿಗೆ ವಿಶೇಷ ಅಭಿಷೇಕ, ಅಲಂಕಾರ, ನೂರೆಂಟು ಹಾಲರವಿ ಸೇವೆ ಹಾಗೂ ರಥೋತ್ಸವ ನಡೆಯಿತು.ಮಧ್ಯಾಹ್ನ ೧೨.೨೮ಕ್ಕೆ ರಥೋತ್ಸವಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಚಾಲನೆ ನೀಡಿದರು. ಗರ್ಭಗುಡಿಯಲ್ಲಿರುವ ಅಮ್ಮನವರ ಮೂಲ ವಿಗ್ರಹವನ್ನು ರಥದಲ್ಲಿ ಕೂರಿಸಿ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಯಾವುದೇ ವಿಶೇಷ ಅತಿಥಿಯನ್ನು ಆಹ್ವಾನಿಸದೇ ಭಕ್ತರಿಂದಲೇ ಕಾರ್ಯಕ್ರಮದ ಉದ್ಘಾಟನೆ ನಡೆಸಿದ್ದು ಕ್ಷೇತ್ರದ ವಿಶೇಷವಾಗಿತ್ತು.
ಆಷಾಢದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶ್ರೀ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಭೀಮನ ಅಮಾವಾಸ್ಯೆಯಂದು ಸಹ ಸಹಸ್ರಾರು ಭಕ್ತರು ಆಗಿಮಿಸಿದ್ದರು. ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಕ್ಷೇತ್ರದಿಂದ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಪ್ರಯುಕ್ತ ಹೊಸದಾಗಿ ನಿರ್ಮಿಸಿರುವ ೨೫ ಅಡಿ ಎತ್ತರ ತೇರನ್ನು ದೇವಿಗೆ ಸಮರ್ಪಿಸಿಲಾಯಿತು.
ಕ್ಷೇತ್ರದಲ್ಲಿ ನಿರ್ಮಿಸಿರುವ ಇಡೀ ರಾಜ್ಯದಲ್ಲೇ ವಿಶೇಷ ಎನ್ನಬಹುದಾದ ಮ್ಯೂಸಿಯಂ ಅನ್ನು ಉದ್ಘಾಟನೆ ಮಾಡಲಾಯಿತು. ಮ್ಯೂಸಿಯಂ ಒಳಗೆ ಇತಿಹಾಸ, ಆಧ್ಯಾತ್ಮ ಸೇರಿದಂತೆ ಎಲ್ಲ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳು ಇದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರು, ನಮ್ಮ ಗ್ರಾಮೀಣ ಭಾಗದ ಸೊಗಡು ತಿಳಿಸುವ ಪರಿಸರ, ಮೈಸೂರು ಯದವಂಶಕ್ಕೆ ಸಂಬಂಧಿಸಿದ ವಿವರ ಸೇರಿದಂತೆ ದೇಶ ಹಾಗೂ ರಾಜ್ಯದ ಇತಿಹಾಸದ ಮಾಹಿತಿ ಇದೆ.
‘ಕ್ಷೇತ್ರದಲ್ಲಿ ನಡೆಯುವ ಭೀಮನ ಅಮಾವಾಸ್ಯೆ ಕಾರ್ಯಕ್ರಮ ಬಹಳ ವಿಶೇಷವಾಗಿದೆ. ಈ ವರ್ಷ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರು. ಎಲ್ಲಾ ಭಕ್ತರಿಗೂ ಯಾವುದೇ ಸಮಸ್ಯೆಯಾಗದಂತೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರಕ್ಕೆ ಭಕ್ತರೇ ಆಸ್ತಿಯಾಗಿದ್ದು, ಅವರ ಕೈಯಿಂದಲೇ ಹೊಸತೇರು, ದಾಸೋಹ ಭವನ ಹಾಗೂ ಮ್ಯೂಸಿಯಂ ಉದ್ಘಾಟಿಸಲಾಯಿತು. ಸರ್ವ ಜೀವರಾಶಿಗಳ ಒಳಿತಿಗಾಗಿ ತಾಯಿಯಲ್ಲಿ ಪ್ರಾರ್ಥಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು.’