ಕನ್ನಡಪ್ರಭ ವಾರ್ತೆ ಮೈಸೂರು
ವಿವಿಧ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ನ್ಯಾಯಾಧೀಶರು, ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಕಂಡು ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಬಹುತೇಕ ಅಂಗನವಾಡಿ ಕೇಂದ್ರಗಳು ಸಮುದಾಯ ಭವನ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಂಗನವಾಡಿ ಕೇಂದ್ರದಲ್ಲಿ ಶುದ್ಧ ಗಾಳಿ, ಬೆಳಕು, ಕುಡಿಯುವ ನೀರಿನ ಕೊರತೆ ಇದೆ. ಅಲ್ಲದೆ ಕಟ್ಟಡಗಳು ಶಿಥಿಲಗೊಂಡಿದ್ದು, ಮಳೆ ನೀರು ಸೋರಿಕೆಯಾಗುತ್ತಿರುತ್ತದೆ. ಇನ್ನು ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಹೆಗ್ಗಣಗಳು ಬಿಲಾ ತೋಡಿ ಕಟ್ಟಡದ ನೆಲಹಾಸು ಹಾಳಾಗಿರುವುದು, ಇದರಿಂದ ಅಹಾರ ಸಂರಕ್ಷಣೆಗೆ ತೊಡಕುಂಟಾಗಿರುವುದು ಕಂಡು ಬಂದಿದೆ. ಹಾಗೂ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ತಯಾರಿಸುವ ಆಹಾರದಲ್ಲಿ ಪೋಷಕಾಂಶದ ಕೊರತೆ, ಮಕ್ಕಳಿಗೆ ತಯಾರಿಸುವ ಲಡ್ಡು ಹಾಗೂ ಸಾಂಬಾರು ಮಾಡಲು ಉಪಯೋಗಿಸುವ ಬೇಳೆ, ಕಾಳುಗಳು ಅವಧಿ ಮುಕ್ತಾಯವಾಗಿದ್ದ ಆಹಾರ ಪದಾರ್ಥಗಳನ್ನು ಇರುವುದನ್ನು ಕಂಡು ನ್ಯಾಯಾಧೀಶರು ಕಳವಳವನ್ನು ವ್ಯಕ್ತಪಡಿಸಿದ್ದರು. ಸದರಿ ಆಹಾರ ಪದಾರ್ಥಗಳನ್ನು ತಕ್ಷಣ ವಾಪಸು ಕಳುಹಿಸುವಂತೆ ಹಾಗೂ ಉತ್ತಮ ಅಹಾರ ಪದಾರ್ಥಗಳು ಪಡೆಯುವಂತೆ ಸೂಚಿಸಿದರು.
ಹಾಗೆಯೇ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರ, ಶೂಶ್ರೂಷಕರ, ಪೊಲೀಸ್ ಠಾಣೆಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ, ಮೇಲ್ವಿಚಾರಕರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸುವಂತೆ ಸೂಚಿಸಿದರು.