ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಇಂದಿರಾಗಾಂಧಿ ಲೇಔಟ್, ಕಲ್ಲಹಳ್ಳಿ, ವಿನೋಬನಗರ, ಹೊಸಮನೆ, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಗ್ಯಾಸ್ ಹಿಂಭಾಗ, ಸೋಮಯ್ಯ ಲೇಔಟ್ ಸೇರಿದಂತೆ ಬಹುತೇಕ ಕಡೆ ಬುಧವಾರದಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಸಾರ್ವಜನಿಕರು ದೂರವಾಣಿ ಮೂಲಕ ಪಾಲಿಕೆ ಮತ್ತು ನಗರ ನೀರು ಸರಬರಾಜು ಇಲಾಖೆಗೆ ದೂರು ನೀಡುತ್ತಿದ್ದಾರೆ.
ಈ ಬಗ್ಗೆ ಕಾರ್ಯಪಾಲಕ ಅಭಿಯಂತರ ಜೀವನ್ ಪ್ರತಿಕ್ರಿಯೆ ನೀಡಿ, ತೀವ್ರ ಮಳೆ ಬಂದಾಗ ಶುದ್ಧೀಕರಣಕ್ಕೆ ಬೆರೆಸುವ ಔಷಧಗಳನ್ನು ಜಾಸ್ತಿ ಪ್ರಮಾಣದಲ್ಲಿ ಹಾಕಲಾಗುತ್ತದೆ. ಕಳೆದ ಎರಡು ದಿನಗಳಿಂದ ನೀರು ಶುದ್ಧೀಕರಣಕ್ಕೆ ಹೆಚ್ಚಿನ ಪ್ರಯತ್ನ ಪಡುತ್ತಿದ್ದೇವೆ. ಆದರೂ, ಸಹ ಮಳೆಯ ನೀರು ಬಣ್ಣ ಹೋಗುತ್ತಿಲ್ಲ.ವಾಸ್ತವವಾಗಿ ಸಾರ್ವಜನಿಕರಿಗೆ ಆತಂಕ ಸಹಜ. ಒಂದೇ ದಿನದಲ್ಲಿ ನೀರು ತಿಳಿಯಾದ ಮೇಲೆ ಸರಿ ಹೋಗುತ್ತದೆ. ಇಂದಿನಿಂದ ಸರಿಯಾಗಿದೆ. ಸಾರ್ವಜನಿಕರು ಆತಂಕಪಡುವುದು ಬೇಡ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ನೀರಿನ ತೆರಿಗೆ ಹೆಚ್ಚಳವಾಗಿದೆ. ಆದರೆ, ಗುಣಮಟ್ಟದಲ್ಲಿ ಇಳಿಕೆಯಾಗಿದೆ. ಇದೇ ರೀತಿ ಮುಂದುವರೆದರೆ ಶುದ್ಧ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಮತ್ತು ಕಳಪೆ ಗುಣಮಟ್ಟದ ನೀರು ಸರಬರಾಜು ವಿರುದ್ಧ ಸಾರ್ವಜನಿಕರು ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.