ಗಮನ ಸೆಳೆದ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ
ಪೊನ್ನಂಪೇಟೆ ಅಪ್ಪಚ್ಚ ಕವಿ ಕೊಡವ ಕೂಟಕ್ಕೆ ಇಪ್ಪತ್ತೈದು ವರ್ಷ ತುಂಬಿದ ಪ್ರಯುಕ್ತ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ, ಅವರನ್ನು ಮೆರವಣಿಗೆಯಲ್ಲಿ ದುಡಿ ಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕ್‌ನೊಂದಿಗೆ ಸಮಾರಂಭಕ್ಕೆ ವಿಶೇಷ ಗೌರವದೊಂದಿಗೆ ಕರೆತರಲಾಯಿತು. ವಿವಿಧ ಪೈಪೋಟಿ, ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಪ್ರಾಂಶುಪಾಲ ಬಾಚೀರ ಕಾರ್ಯಪ್ಪ, 2000ರಲ್ಲಿ ಪೊನ್ನಂಪೇಟೆಯಲ್ಲಿ ನಮ್ಮ ಹಿರಿಯರು ಸೇರಿ ದೂರ ದೃಷ್ಟಿಯಿಂದ ನಮ್ಮಲ್ಲಿ ಒಗ್ಗಟ್ಟು ಮೂಡಿಸಲು, ಆಚಾರ ವಿಚಾರ ಕಾಪಾಡಲು ಹಾಗೂ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಕಟ್ಟಿದ ಕೊಡವ ಕೂಟದಿಂದ ಪರಸ್ಪರ ಸಹಕಾರ ಮನೋಭಾವದಲ್ಲಿ ಕಷ್ಟ ಸುಖಕ್ಕೆ ಭಾಗಿಯಾಗುತ್ತಿದ್ದು, ಅಂದು ಚಿಕ್ಕದಾಗಿ ಸ್ಥಾಪನೆಯಾದ ಸಂಘ ಇಂದು ಹೆಚ್ಚಿನ ಸದಸ್ಯರನ್ನು ಹೊಂದುವ ಮೂಲಕ ಪರಸ್ಪರ ಹೆಚ್ಚಿನ ಸಹಕಾರ ಮನೋಭಾವವನ್ನು ಗಟ್ಟಿಗೊಳಿಸಿದೆ. ಅಂದು ಈ ಸಂಘವನ್ನು ಕಟ್ಟಲು ಕಾರಣಕರ್ತರಾದ ಎಲ್ಲರನ್ನೂ ಅವರು ಈ ಸಂದರ್ಭ ಶ್ಲಾಘಿಸಿದರು.ನಮ್ಮ ಭೂತಕಾಲವನ್ನು ಮರೆತರೆ ನಮಗೆ ಭವಿಷ್ಯವೇ ಇಲ್ಲದಂತಾಗುತ್ತದೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದೆ ಹೋದರೂ ನಮ್ಮ ಸನಾತನ ಧರ್ಮದಡಿ ಧರ್ಮ, ಆಚಾರ ವಿಚಾರವನ್ನು ಪಾಲನೆ ಮಾಡಿಕೊಂಡು ಬರುವಂತೆ ಕರೆ ನೀಡಿದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾದಂತಹ ಹಿರಿಯ ಸಮಾಜ ಸೇವಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ನಾನು ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಲಿಲ್ಲ. ಸೇವೆ -ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡುವುದರಿಂದ ನಮ್ಮ ಯುವ ಪೀಳಿಗೆಗೆ ಹಾಗೂ ಇತರರಿಗೆ ನಾವು ಸಹ ಸೇವೆ -ಸಾಧನೆ ಮಾಡಬೇಕೆನ್ನುವ ಮನೋಭಾವ ಬೆಳೆಯುತ್ತದೆ. ಸೇವೆ, ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಕೂಟದ ಕಾರ್ಯದರ್ಶಿ ಚೆಟ್ಟಂಗಡ ಅಶ್ವಿನಿ ಪೂವಯ್ಯ ವಾರ್ಷಿಕ ವರದಿ ಮಂಡಿಸಿದರು.
ಕೂಟದಲ್ಲಿ ಇದುವರೆಗೂ ಸೇವೆ ಸಲ್ಲಿಸಿದ್ದ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.