ನೋಟುಗಳ ಅಮಾನ್ಯೀಕರಣ, ಜಿಎಸ್‌ಟಿ ಅವೈಜ್ಞಾನಿಕ ನಿರ್ಧಾರ । ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬಡವರಿಗೆ ಯಾವುದೇ ಕಾರ್ಯಕ್ರಮವನ್ನು ಜಾರಿಗೆ ತಂದಿಲ್ಲ, ಜಿಎಸ್‌ಟಿ, ನೋಟುಗಳ ಅಮಾನ್ಯೀಕರಣ ವಿಷಯದಲ್ಲಿ ಎಡವಿದೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೋಟುಗಳ ಅಮಾನ್ಯೀಕರಣ ಸಂದರ್ಭದಲ್ಲಿ ಈ ದೇಶದ ಪ್ರಧಾನಮಂತ್ರಿ 50 ದಿನ ಕಾಲಾವಕಾಶ ಕೊಡಿ, ಸುಮಾರು ₹3 ಲಕ್ಷ ಕೋಟಿ ರು. ಕಪ್ಪು ಹಣವನ್ನು ಪತ್ತೆ ಹಚ್ಚುತ್ತೇವೆಂದು ರಾತ್ರೋ ರಾತ್ರಿ ₹500 ಹಾಗೂ ₹1000 ರು. ಮುಖ ಬೆಲೆಯ ₹15 ಲಕ್ಷದ 43 ಸಾವಿರ ಕೋಟಿ ನೋಟು ಚಲಾವಣೆ ಸ್ಥಗಿತೊಳಿಸಿದರು.ಹಳೆ ನೋಟು ಚಲಾವಣೆ ಸ್ಥಗಿತಗೊಂಡು, ಹೊಸ ನೋಟುಗಳು ಪಡೆಯುವ ಸಂದರ್ಭದಲ್ಲಿ ದೇಶದ ವಿವಿಧೆಡೆ ಕ್ಯೂನಲ್ಲಿ ನಿಂತಿದ್ದ 130 ಜನ ಬಡವರು ಮೃತಪಟ್ಟರು. ಆ ವೇಳೆಯಲ್ಲಿ ಯಾವೊಬ್ಬ ಕಾರ್ಪೋರೇಟ್‌ಗೂ ಏನೂ ತೊಂದರೆಯಾಗಲಿಲ್ಲ, ಬಡ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರಿತು ಎಂದು ಹೇಳಿದರು.ಶೇ. 16 ರಷ್ಟು ಬಡ್ಡಿಯಲ್ಲಿ ಖಾಸಗಿ ಸಂಸ್ಥೆಗಳಿಗೆ ಸಾಲ ನೀಡಬೇಕಾಗಿರುವುದನ್ನು ಶೇ. 15 ಕ್ಕೆ ಕೇಂದ್ರ ಸರ್ಕಾರ ಕೊಟ್ಟಿತು. ಇದರಿಂದ ಖಾಸಗಿ ಕಂಪನಿಗಳ ₹11 ಲಕ್ಷ ಕೋಟಿ ಉಳಿತಾಯವಾಯಿತು. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ರೈತರ ₹73 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಲಾಗಿತ್ತು. ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ ₹8.5 ಕೋಟಿ ರು. ಸಾಲ ಮನ್ನಾ ಮಾಡಿತು. ಬಿಜೆಪಿ ಏನು ಮಾಡಿತು ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ವಿಧವಾ ವೇತನ ಸೇರಿದಂತೆ ಇತರೆ ಪೆನ್ಷನ್‌ಗಳಿಗೆ ಒಂದು ವರ್ಷದಲ್ಲಿ ₹60 ಸಾವಿರ ಕೋಟಿ, ಗ್ಯಾರಂಟಿಗಳಿಗೆ ₹60 ಸಾವಿರ ಕೋಟಿ ಕೊಡುತ್ತಿದೆ. ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುವ ಬಿಜೆಪಿ ದೇಶದ 20 ರಾಜ್ಯಗಳಲ್ಲಿ ಆಡಳಿತದಲ್ಲಿದೆ. ಯಾವುದೇ ರಾಜ್ಯದಲ್ಲೂ ಕೂಡ ಬಡವರಿಗೆ ನಾವು ಜಾರಿಗೆ ತಂದಿರುವ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿಲ್ಲ. ಅಂದರೆ, ಇವರಿಗೆ ಬಡವರ ಕಳಕಳಿ ಇಲ್ಲ.
ಸಿನಿಮಾ, ನಾಟಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಹಿತರಕ್ಷಣೆಗೆ ಸಿನಿ ಬಿಲ್ ಸಿದ್ಧಪಡಿಸಲಾಗುತ್ತಿದೆ. ಇದು, ದೇಶದಲ್ಲೇ ಮೊದಲ ಪ್ರಯತ್ನ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಅತ್ಯಂತ ಕಡಿಮೆ ವಿಸ್ತೀರ್ಣದ ಭೂಮಿ ಹೊಂದಿರುವ ರೈತರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಸರ್ಕಾರದ ಸೌಲಭ್ಯ ನೀಡಬೇಕು. ಶಿಕ್ಷಣದಲ್ಲಿ ಪಡೆಯುವ ಪದವಿಗಿಂತ ಕಸುಬು ಕಲಿತರೆ ಎಲ್ಲೆ ಹೋದರೂ ಬದುಕು ಸಾಗಿಸಬಹುದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಗ್ಯಾರಂಟಿ ಕಾರ್ಯಕ್ರಮಗಳಿಂದ ಜನರ ಜೀವನ ಮಟ್ಟ ಸುಧಾರಿಸಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ, ಪ್ರತಿ ಪಕ್ಷಗಳು ಟೀಕೆ ಮಾಡುತ್ತಿದೆ. ಗ್ಯಾರಂಟಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ ಎಂದರು.
ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮವನ್ನು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಜಿ.ಎಚ್. ಶ್ರೀನಿವಾಸ್ ಇದ್ದರು.