ಕಳಪೆ ಬಿತ್ತನೆ ಬೀಜ: ಎಕರೆಗೆ ₹1 ಲಕ್ಷ ಪರಿಹಾರ ನೀಡಲು ಕಂಪನಿಯವರ ಒಪ್ಪಿಗೆ

KannadaprabhaNewsNetwork |  
Published : May 27, 2025, 01:15 AM IST
ಮ | Kannada Prabha

ಸಾರಾಂಶ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬೀಜ ಕಂಪನಿ ಮಾರ್ಕೆಟಿಂಗ್ ಮ್ಯಾನೇಜರ್‌ ರೋಹಿತ ಹಿರೇಬಿದರಿ ಅವರು, ಪ್ರತಿ ಎಕರೆಗೆ ₹1 ಲಕ್ಷ ಪರಿಹಾರ ನೀಡುವುದಾಗಿ ಒಪ್ಪಿಕೊಂಡರು. ಹೀಗಾಗಿ ರೈತ ಮುಖಂಡರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಬ್ಯಾಡಗಿ: ಕಳಪೆ ಮೆಣಸಿನಕಾಯಿ ಬಿತ್ತನೆ ಬೀಜದ ವಿರುದ್ಧ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಮಂಡಿಯೂರಿದ ಜಿಲ್ಲಾಡಳಿತ ಹಾಗೂ ಧನ್‌ಕ್ರಾಪ್ ಆ್ಯಂಡ್ ಸನ್ಸ್ ಪ್ರೈ.ಲಿ. ತಮ್ಮಿಂದಾದ ಪ್ರಮಾದಕ್ಕೆ ಪ್ರತಿ ಎಕರೆಗೆ ₹1 ಲಕ್ಷ ಪರಿಹಾರ ನೀಡಲು ಒಪ್ಪಿದ್ದು, ಎರಡು ದಿನಗಳೊಳಗಾಗಿ ಸಂತ್ರಸ್ತ ರೈತರಿಗೆ ಹಣ ವಿತರಿಸುವುದಾಗಿ ತಿಳಿಸಿದ ಹಿನ್ನೆಲೆ ಕಳೆದ 6 ದಿನಗಳಿಂದ ಶಾಸಕರ ಅಧಿಕೃತ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕವು ನಡೆಸುತ್ತಿದ್ದ ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡಿದೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬೀಜ ಕಂಪನಿ ಮಾರ್ಕೆಟಿಂಗ್ ಮ್ಯಾನೇಜರ್‌ ರೋಹಿತ ಹಿರೇಬಿದರಿ ಅವರು, ಪ್ರತಿ ಎಕರೆಗೆ ₹1 ಲಕ್ಷ ಪರಿಹಾರ ನೀಡುವುದಾಗಿ ಒಪ್ಪಿಕೊಂಡರು. ಹೀಗಾಗಿ ರೈತ ಮುಖಂಡರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಅವರು, ರೈತ ಸಂಘವು ಮೊದಲಿನಿಂದಲೂ ರೈತರಿಗೆ ಅನ್ಯಾಯವಾದ ಸಂದರ್ಭದಲ್ಲಿ ವಿಷಯಾಧಾರಿತ ಹೋರಾಟ ನಡೆಸುತ್ತಾ ಬಂದಿದೆ. ಕಳಪೆ ಬಿತ್ತನೆ ಬೀಜದ ವಿರುದ್ಧ ಹೋರಾಟ ಹೊಸದೇನಲ್ಲ. ಈ ಹಿಂದೆಯೂ ಕನಕ ಬೀಜದ ವಿರುದ್ಧ ಮುಗಿಬಿದ್ದ ರೈತ ಸಂಘವು ಮಹಿಕೋ ಬೀಜದ ಕಂಪನಿಯನ್ನು ಜಿಲ್ಲೆಯಿಂದ ಹೊರಗಟ್ಟಿದ ಕೀರ್ತಿ ಸಂಘಕ್ಕೆ ಸಲ್ಲುತ್ತದೆ. ಆದರೆ ಧನ್‌ಕ್ರಾಪ್ ಆಟಾಟೋಪದ ವಿರುದ್ಧ ಬಹುದೊಡ್ಡ ಹೋರಾಟಕ್ಕೆ ಸಜ್ಜಾಗಿದ್ದಾಗಿ ತಿಳಿಸಿದರು.ಅನ್ಯಾಯಕ್ಕೊಳಗಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಶ್ರಮಿಸಿದ ಶಾಸಕ ಶಿವಣ್ಣವರ ಸೇರಿದಂತೆ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿ ಹಾಗೂ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ ದಿನಪತ್ರಿಕೆಗಳಿಗೆ ಅಭಿನಂದಿಸುತ್ತೇನೆ ಎಂದರು.ರೈತ ಸಂಘದ ಪ್ರಧಾನ ಕಾರ‍್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೆಳೆನಷ್ಟ ಪರಿಹಾರದಲ್ಲಿ ತೂಕ, ದರ, ಬೆಳೆವಿಮೆ ಹೀಗೆ ಹಲವು ರೀತಿಯಲ್ಲಿ ರೈತಕುಲ ಸುಲಭವಾಗಿ ಮೋಸಕ್ಕೆ ತುತ್ತಾಗುತ್ತಿದೆ. ಇತ್ತೀಚೆಗೆ ಅವುಗಳ ಸರದಿಯಲ್ಲಿ ಇದೀಗ ಕಳಪೆ ಗುಣಮಟ್ಟದ ಬೀಜ ಮಾರಾಟ ಸೇರ್ಪಡೆಯಾಗಿದೆ. ರೈತರಿಗೆ ಅನ್ಯಾಯವಾದಾಗ ರೈತ ಸಂಘದ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದರು.ಪ್ರತಿಭಟನೆಯಲ್ಲಿ ರುದ್ರಗೌಡ ಕಾಡನಗೌಡ್ರ, ಪ್ರಭಣ್ಣ ಪ್ಯಾಟಿ ಶಾಂತನಗೌಡ ಪಾಟೀಲ, ಎಚ್.ಎಚ್. ಮುಲ್ಲಾ ಸುರೇಶ ಮೈದೂರ, ಡಾ. ಕೆ.ವಿ. ದೊಡ್ಡಗೌಡ್ರ, ರಾಜು ತರ್ಲಘಟ್ಟ, ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಶಿವಬಸಪ್ಪ ಗೋವಿ, ಸುರೇಶ ಛಲವಾದಿ, ಶಿವಯೋಗಿ ಹೊಸಗೌಡ್ರ, ಜಾನ್ ಪುನೀತ, ಮೌನೇಶ ಕಮ್ಮಾರ, ಮಲ್ಲೇಶಪ್ಪ ಡಂಬಳ, ಫಕ್ಕೀರೇಶ ಅಜಗೊಂಡ್ರ, ನಾಗರಾಜ ಬನ್ನಿಹಟ್ಟಿ, ವಿರೂಪಾಕ್ಷಪ್ಪ ಅಂಗಡಿ, ಫಕ್ಕೀರಪ್ಪ ದಿಡಗೂರು, ಮಲ್ಲೇಶಪ್ಪ ಗೌರಾಪುರ, ಮಂಜು ಗೌರಾಪುರ, ಶೇಖಪ್ಪ ತಿಳವಳ್ಳಿ, ಅಶೋಕಗೌಡ ಹೊಂಡದಗೌಡ್ರ, ಶೇಖಪ್ಪ ತೋಟದ, ಪರಸಪ್ಪ ಪರ್ವತ್ತೇರ, ವೀರೇಶ ದೇಸೂರು, ಮಾರುತಿ ಅಗಸಿಬಾಗಿಲ, ಯಲ್ಲಪ್ಪ ಓಲೇಕಾರ, ಶಂಕ್ರಪ್ಪ ದೇಸಾಯಿ, ಪರಮೇಶಪ್ಪ ಮೂಡೇರ, ಮಂಜಪ್ಪ ದಿಡ್ಗೂರ, ಜಯಪ್ಪ ದಿಡಗೂರು, ಚಂದ್ರಪ್ಪ ಕೋಲಾರ, ಕಾಂತೇಶ ಅಗಸಿಬಾಗಿಲ, ಮಾಲತೇಶ ಲಕ್ಕಮ್ಮನವರ, ಗೋವಿಂದಪ್ಪ ಓಲೇಕಾರ, ಶಿವರುದ್ರಪ್ಪ ಮೂಡೇರ, ಬಸವರಾಜ ಹಿರೇಮಠ ಇನ್ನಿತರ ರೈತರು ಉಪಸ್ಥಿತರಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು