ಗಜೇಂದ್ರಗಡ: ಕಳಪೆ ಟಿಸಿಗಳನ್ನು ರೈತರಿಗೆ ಪೂರೈಕೆ ಮಾಡುವ ಮೂಲಕ ರೈತರೊಂದಿಗೆ ಚೆಲ್ಲಾಟವಾಡುತ್ತಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದರ ಜತೆಗೆ ನಷ್ಟವನ್ನು ಭರಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಸೋಮವಾರ ಸಂಜೆ ಜೀಗೇರಿ ಗ್ರಾಮದ ರೈತರು ಹೆಸ್ಕಾಂ ಕಚೇರಿ ಎದುರು ಟ್ರ್ಯಾಕ್ಟರ್ ಅಡ್ಡ ನಿಲ್ಲಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಒಂದು ಟಿಸಿ ಸುಟ್ಟರೆ ಅದನ್ನು ದುರಸ್ತಿಗೆ ರೋಣ ಪಟ್ಟಣಕ್ಕೆ ತೆಗೆದುಕೊಂಡು ಹೋಗಬೇಕು. ಅಲ್ಲಿಗೆ ಒಯ್ಯಲು ₹೮ರಿಂದ ₹೧೦ ಸಾವಿರ ಖರ್ಚಾಗುತ್ತದೆ. ಅದನ್ನು ಕೊಡುವವರು ಯಾರು? ಅಲ್ಲದೆ ಅಲ್ಲಿನ ಗುತ್ತಿಗೆದಾರರು ಬಿಟ್ಟು ಮಾಡಿ ತೋರಿಸಿದ ಟಿಸಿಯನ್ನೇ ತರಬೇಕು. ಅಲ್ಲಿಂದ ತಂದ ಟಿಸಿ ಮರುದಿನ ಸುಟ್ಟರೆ ನಾವೇನು ಮಾಡಬೇಕು ಎಂದು ಖಾರವಾಗಿ ಪ್ರಶ್ನಿಸಿದ ರೈತರು, ಜೀಗೇರಿ ಸೇರಿ ಸುತ್ತಲಿನ ಗ್ರಾಮದ ರೈತರು ಅನುಭವಿಸುತ್ತಿರುವ ಟಿಸಿ ಸಮಸ್ಯೆ ಕುರಿತು ಕಳೆದ ೨ ತಿಂಗಳಿನಿಂದ ಗಜೇಂದ್ರಗಡ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಹೆಸ್ಕಾಂ ಅಧಿಕಾರಿಗಳು ಸುಟ್ಟಿರುವ ಟಿಸಿಯನ್ನು ರೋಣ ಪಟ್ಟಣಕ್ಕೆ ದುರಸ್ತಿಗೆ ತೆಗೆದುಕೊಂಡು ಹೋಗಲು ತಿಳಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಪರಿಣಾಮ ಅಲ್ಲಿನ ಗುತ್ತಿಗೆದಾರರು ತಮಗೆ ಮನಸ್ಸಿಗೆ ಬಂದಂತೆ ಟಿಸಿ ಕೊಡುತ್ತಾರೆ. ಅದರಲ್ಲಿ ಕೆಲವು ಸುಟ್ಟಿರುತ್ತವೆ. ಮಸಾರಿ ಜಮೀನಿನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೀರಾವರಿ ಮಾಡುತ್ತಾರೆ. ಆದರೆ ರೋಣ ಪಟ್ಟಣ ಸೇರಿ ಆ ಭಾಗದಲ್ಲಿ ಹೆಚ್ಚಾಗಿ ಮಸಾರಿ ಭೂಮಿಯಿಲ್ಲ.ಹೀಗಾಗಿ ಗಜೇಂದ್ರಗಡ ಸೇರಿ ಜೀಗೇರಿ, ದಿಂಡೂರ, ಕಾಲಕಾಲೇಶ್ವರ, ವದೆಗೋಳ, ಕುಂಟೋಜಿ, ಭೈರಾಪುರ ಸೇರಿ ಸುತ್ತಲಿನ ೧೫ಕ್ಕೂ ಅಧಿಕ ಗ್ರಾಮಗಳಲ್ಲಿ ಟಿಸಿಗಳು ಸುಡುತ್ತಿವೆ. ಗಜೇಂದ್ರಗಡ ತಾಲೂಕಿನಲ್ಲಿ ಇರಬೇಕಿದ್ದ ಟಿಸಿ ದುರಸ್ತಿ ಕೇಂದ್ರ ರೋಣದಲ್ಲಿದೆ. ಹೀಗಾಗಿ ಪಟ್ಟಣದಲ್ಲಿ ಟಿಸಿ ದುರಸ್ತಿ ಕೇಂದ್ರ ಆರಂಭಿಸಿದರೆ ಅಲ್ಲಿಗೆ ಸುಟ್ಟ ಟಿಸಿಗಳನ್ನು ತೆಗೆದುಕೊಂಡು ಹೋಗುವ ಖರ್ಚು ಉಳಿಯುತ್ತದೆ. ಆದರೆ ಹಣೆಬರಹ ಸರಿಯಿಲ್ಲ ಎಂದು ರೋಣಕ್ಕೆ ಟಿಸಿಗಳನ್ನು ಹೊತ್ತುಕೊಂಡು ಹೋದರೆ ಅಲ್ಲಿನ ಸ್ಟೋರ್ ರೂಂನವರು ಕಳಪೆ ಮಟ್ಟದ ಟಿಸಿಗಳನ್ನು ಕೊಡುವ ಮೂಲಕ ರೈತರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಪರಿಣಾಮ ಬಿತ್ತಿದ ಬೀಜಗಳು ಸಮರ್ಪಕ ನೀರಿಲ್ಲದೆ ಮಣ್ಣಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು.
ಈ ವೇಳೆ ಮಲ್ಲಪ್ಪ ಕಂಬಳಿ, ಕುಮಾರ ದೇಸಾಯಿ, ದೇವಿಂದ್ರ ಜಿಗಳೂರ, ಪರಶುರಾಮ ಕಮರಿ, ಡಿ.ಜಿ. ಕಟ್ಟಿಮನಿ, ಮುತ್ತಣ್ಣ ಕೊಪ್ಪಳ, ಬಸವರಾಜ ಮ್ಯಾಗೇರಿ, ದ್ಯಾಮಪ್ಪ ಕೊಪ್ಪಳ, ಮಂಜುನಾಥ ತೋಟದ, ಶರಣಪ್ಪ ಬೇವಿನಕಟ್ಟಿ, ಕಳಕಪ್ಪ ಅಂಗಡಿ, ಲಕ್ಷ್ಮಣ ಚಂದೂಕರ ಸೇರಿ ಇತರರು ಇದ್ದರು.ಕ್ರಮಕ್ಕೆ ಪತ್ರ: ರೈತರಿಗೆ ಪೂರೈಸಿರುವ ಟಿಸಿಗಳನ್ನು ಪರೀಕ್ಷಿಸಲು ಮೇಲಧಿಕಾರಿಗಳಿಗೆ ಈಗಾಗಲೇ ವರದಿ ಮಾಡಿದ್ದೇವೆ. ಮುಂದೆ ಪರೀಕ್ಷಿಸಿದ ಟಿಸಿಗಳನ್ನು ವರದಿಯನ್ನು ಮೇಲಧಿಕಾರಿಗೆ ಕಳುಹಿಸಿ ಮುಂದಿನ ಕ್ರಮಕ್ಕೆ ಪತ್ರ ಬರೆಯಲಾಗುವುದು ಎಂದು ಹೆಸ್ಕಾಂ ಶಾಖಾಧಿಕಾರಿ ಎಸ್.ಬಿ. ಮಹಾಮನಿ ತಿಳಿಸಿದರು.